ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿ ಇನ್ನಿಲ್ಲ
– ವಿದೇಶದಲ್ಲೂ ಶಿಕ್ಷಕರಾಗಿದ್ದ ಸಾಹಿತಿ ಕೆ.ಟಿ. ಗಟ್ಟಿ
– ಕನ್ನಡದ ಮತ್ತೊಬ್ಬ ಸಾಹಿತಿ ವಿಧಿವಶ
NAMMUR EXPRESS NEWS
ಮಂಗಳೂರು: ಹತ್ತಾರು ಕನ್ನಡ ಕಾದಂಬರಿಗಳು, ನಾಟಕಗಳು, ಇಂಗ್ಲಿಷ್ ಭಾಷೆಯ ಮೇಲೆ ಅಪಾರವಾದ ಹಿಡಿತ, ವಿದೇಶದಲ್ಲಿ ಅಧ್ಯಾಪನ.. ಹೀಗೆ ಅಪರೂಪದ ಜೀವನ, ಜೀವನಾನುಭವಗಳೊಂದಿಗೆ ಬದುಕಿದ ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿ ಇನ್ನಿಲ್ಲ. ಕಾಸರಗೋಡು ಸಮೀಪದ ಕೂಡ್ಲುವಿನಲ್ಲಿ ಹುಟ್ಟಿ, ಲಂಡನ್, ಆಕ್ಸ್ಫರ್ಡ್ನಲ್ಲಿ ಕಲಿತು, ಮಣಿಪಾಲದಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ , ಇಥಿಯೋಪಿಯಾದಲ್ಲೂ ಶಿಕ್ಷಕರಾಗಿ ದುಡಿದು ಅಂತಿಮವಾಗಿ ನಾನೇನೂ ಅಲ್ಲ ಎಂಬಂತೆ ಉಜಿರೆಯಲ್ಲಿ ಮನೆ ಮಾಡಿ ತನ್ನ ಪಾಡಿಗೆ ತಣ್ಣಗೆ ಸಾಹಿತ್ಯ ಮತ್ತು ಕೃಷಿಯಲ್ಲಿ ತೊಡಗಿದ್ದ ಅವರು ಫೆ. 19ರಂದು ಸೋಮವಾರ ಕೊನೆಯುಸಿರೆಳೆದರು . ಅವರಿಗೆ 86 ವರ್ಷವಾಗಿತ್ತು.
ಕೂಡ್ಲು ತಿಮ್ಮಪ್ಪ ಗಟ್ಟಿ ಎಂಬ ಗಟ್ಟಿ ಬರಹಗಾರ, ವೈಚಾರಿಕ ಚಿಂತಕ
ಕೂಡ್ಲು ತಿಮ್ಮಪ್ಪ ಗಟ್ಟಿ (ಕೆ.ಟಿ. ಗಟ್ಟಿ) ಅವರು ಒಬ್ಬ ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರು. ಕಾಸರಗೋಡು ಸಮೀಪದ ಕೂಡ್ಲುವಿನಲ್ಲಿ 1938ರ ಜುಲೈ 22ರಂದು. ಅವರ ಧೂಮಪ್ಪ ಗಟ್ಟಿಯವರು, ತಾಯಿ ಪರಮೇಶ್ವರಿ. ಧೂಮಪ್ಪ ಗಟ್ಟಿ ಅವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಹೀಗಾಗಿ ಸಾಹಿತ್ಯದ ಒಲವು ಹುಟ್ಟಿನಿಂದಲೇ ಜಾಗೃತವಾಗಿತ್ತು ಕೆ.ಟಿ. ಗಟ್ಟಿ ಅವರಿಗೆ. ಕಾಸರಗೋಡಿನಲ್ಲಿ ಎಂಟನೆಯ ತರಗತಿಯವರೆಗೆ ಶಿಕ್ಷಣ ಪಡೆದ ಅವರು, ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿ ಕಾಸರಗೋಡಿನ ಕನ್ನಡ ಚಳುವಳಿಯಲ್ಲಿ ಭಾಗಿಯಾಗಿದ್ದರು. ಕೇರಳ ವಿಶ್ವವಿದ್ಯಾಲಯದಿಂದ ನಂತರ ಪಿ.ಯು. ಹಾಗೂ ಬಿ.ಎ. ಪದವಿಗಳನ್ನು ಪಡೆದರು.
ಮುಂದೆ ಮಾಯಿಪ್ಪಾಡಿಯ ಸರಕಾರಿ ಬೇಸಿಕ್ ಟ್ರೈನಿಂಗ್ ಶಾಲೆಯಿಂದ ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದರು. ಮತ್ತು ತಲಚೇರಿಯ ಸರಕಾರಿ ಟ್ರೈನಿಂಗ್ ಕಾಲೇಜಿನಿಂದ ಒಂದು ವರ್ಷದ ಬಿ.ಎಡ್. ಪದವಿ ಪಡೆದು ಕಾಸರಗೋಡಿನ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇರಿದರು. ಬಿಡುವಿನ ವೇಳೆಯಲ್ಲಿ ಖಾಸಗಿಯಾಗಿ ಕುಳಿತು ಕೇರಳ ವಿಶ್ವವಿದ್ಯಾಲಯದಿಂದ ಪಡೆದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದ ಅವರು 1986ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆಗೆ ಇಂಗ್ಲಿಷ್ ಉಪನ್ಯಾಸಕರಾಗಿ ಸೇರಿದರು. ಆರು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ನಂತರ ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿದ್ದರು.
ಕಾದಂಬರಿಗಳ ಮಹಾ ಲೋಕ ಪ್ರವೇಶ
ಕೆ.ಟಿ. ಗಟ್ಟಿ ಅವರು ತಮ್ಮ ಅನುಭವ, ಓದಿನ ಶಕ್ತಿಗಳನ್ನು ಬೆರೆಸಿ ಕಾದಂಬರಿಗಳನ್ನೇ ಬರೆಯಲು ತೊಡಗಿದರು. ಇವರ ಮೊದಲ ಕಾದಂಬರಿ ‘ಶಬ್ದಗಳು’ ಧಾರಾವಾಹಿಯಾಗಿ ಸುಧಾವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. 1976ರಲ್ಲೇ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಈ ಕಾದಂಬರಿ ಭಾರಿ ಜನಪ್ರಿಯವಾಗಿತ್ತು. ಬಳಿಕ ಮುದ್ರಣ ಕಂಡು ನಾಲ್ಕು ಬಾರಿ ಮರು ಮುದ್ರಣಕ್ಕೂ ಒಳಗಾಯಿತು. 1978ರಲ್ಲಿ ಅವರು ಬರೆದ ‘ಸಾಫಲ್ಯ’ ಕಾದಂಬರಿಯೂ ಸೇರಿ 2004ರವರೆಗೆ ಸುಮಾರು 14 ಕಾದಂಬರಿಗಳು ಸುಧಾ ವಾರಪತ್ರಿಕೆಯೊಂದರಲ್ಲಿಯೇ ಧಾರಾವಾಹಿಯಾಗಿ ಪ್ರಕಟಗೊಂಡಿವೆ.
ಬಹುಶಃ ಒಬ್ಬ ಲೇಖಕರದ್ದೇ ಇಷ್ಟೊಂದು ಕಾದಂಬರಿಗಳು ಧಾರಾವಾಹಿಯಾಗಿ ಒಂದೇ ಪತ್ರಿಕೆಯಲ್ಲಿ ಪ್ರಕಟವಾಗಿರುವುದೂ ದಾಖಲೆಯೇ ಆಗಿರಬಹುದು. ತುಷಾರ ಮಾಸ ಪತ್ರಿಕೆಯಲ್ಲಿ ‘ಮನೆ’, ಕಾಮಯಜ್ಞ ಕಾದಂಬರಿಗಳು, ಗೆಳತಿ ಪತ್ರಿಕೆಯಲ್ಲಿ ‘ಪೂಜಾರಿ’, ಕಾದಂಬರಿ ಪತ್ರಿಕೆಯಲ್ಲಿ ‘ಅವಿಭಕ್ತರು’, ತರಂಗ ವಾರ ಪತ್ರಿಕೆಯಲ್ಲಿ ‘ನಿರಂತರ’, ಮಲ್ಲಿಗೆ ಮಾಸಪತ್ರಿಕೆಯಲ್ಲಿ ‘ನವಂಬರ್ 10’, ಕರ್ಮವೀರ ವಾರಪತ್ರಿಕೆಯಲ್ಲಿ ‘ಸನ್ನಿವೇಶ’, ಪ್ರಜಾವಾಣಿ ದಿನಪತ್ರಿಕೆಯಲ್ಲಿ ‘ಕಾರ್ಮುಗಿಲು’, ಮಂಗಳ ವಾರಪತ್ರಿಕೆಯಲ್ಲಿ ‘ರಸಾತಳ’ ಮುಂತಾದವುಗಳು ವಿವಿಧ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ವಿದೇಶಕ್ಕೆ ಹೋಗುವ ಮುನ್ನ ಇವರು ರಚಿಸಿದ ಒಟ್ಟು ಕಾದಂಬರಿಗಳ ಸಂಖ್ಯೆ 46.
ಕಾದಂಬರಿ, ಕತೆ, ಕವನದ ಜತೆಗೆ ನಾಟಕ
ತಂದೆತಾಯಿಯಿಂದ ಬಂದ ಬಳುವಳಿಯಾಗಿ ರಂಗಭೂಮಿಯ ಬಗ್ಗೆ ವಿಶೇಷ ಒಲವಿದ್ದು ರಚಿಸಿದ ನಾಟಕ ಕೃತಿಗಳೆಂದರೆ ನಾಟ್ಕ, ಕೆಂಪುಕಾಗೆ, ಸತ್ಯಕ್ಕೆ ಜಯ, ಕುರುಡರು, ನಗರ ಪರ್ವ, ಬೊಂಬೆಯಾಟ, ಜುಜುಬಿದೇವರ ಜುಗಾರಿ ಮುಂತಾದ ೧೮ ನಾಟಕಗಳು ಪ್ರಕಟವಾಗಿದ್ದು ಇವುಗಳಲ್ಲಿ ಕೆಲವು ಬಾನುಲಿಯಲ್ಲೂ ಪ್ರಸಾರಗೊಂಡು ಜನಪ್ರಿಯ ನಾಟಕಗಳೆನಿಸಿವೆ. ಪ್ರೌಢರಿಗಷ್ಟೇ ಅಲ್ಲದೆ ಮಕ್ಕಳಿಗಾಗಿಯೂ 30 ನಾಟಕಗಳನ್ನೂ ರಚಿಸಿದ್ದು ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಪಂಜಾಬಿ ಮುಂತಾದ ಭಾಷೆಗಳಿಗೂ ಅನುವಾದಗೊಂಡಿವೆ.