- ಮಂಜುನಾಥ ಗೌಡರ ಅರ್ಜಿಗೆ ಹೈಕೋರ್ಟ್ ತಡೆ
- ನ.9ರಂದೇ ಡಿಸಿಸಿ ಬ್ಯಾಂಕ್ ಚುಣಾವಣೆ
- ಇತ್ತ ತೀರ್ಥಹಳ್ಳಿಯಲ್ಲಿ ಗೌಡರ ಪಾದಯಾತ್ರೆ!
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಲು ನಿರಾಕರಿಸಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಆಯ್ಕೆ ಮಾಡಲು ನವೆಂಬರ್ 9ರಂದು ಚುನಾವಣೆ ನಡೆಯಲಿದೆ. ಈ ಮೂಲಕ ಮೊದಲ ಬಾರಿಗೆ ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡರ ಕೈಯಿಂದ ಡಿಸಿಸಿ ಬ್ಯಾಂಕ್ ಅಧಿಕಾರ ಕೈತಪ್ಪುವ ಸಾಧ್ಯತೆ ಇದೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ. ಚುನಾವಣಾಧಿಕಾರಿ ನಾಗೇಂದ್ರ ಎಫ್. ಹೊನ್ನಾಳಿ ಸೋಮವಾರ ಚುನಾವಣೆ ನಡೆಸಲಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ತಡೆ ನೀಡಬೇಕು. ತಮ್ಮ ಸದಸ್ಯತ್ವ ಅನರ್ಹತೆ ಕುರಿತ ತೀರ್ಪಿಗೆ ತಡೆ ನೀಡಬೇಕು ಎಂದು ಮಾಜಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ತುರ್ತಾಗಿ ವಿಚಾರಣೆ ನಡೆಸುವ ಅರ್ಜಿ ಇದಲ್ಲ. ಮುಖ್ಯ ಅರ್ಜಿಯ ಜೊತೆ ವಿಚಾರಣೆ ನಡೆಯಲಿ ಎಂದು ಹೈಕೋರ್ಟ್ ಹೇಳಿದ್ದು, ನವೆಂಬರ್ 9ರಂದು ನಡೆಯಬೇಕಿದ್ದ ಅಧ್ಯಕ್ಷ ಹುದ್ದೆಯ ಚುನಾವಣೆಗೆ ತಡೆ ನೀಡಲು ನಿರಾಕರಿಸಿದೆ.
ನವೆಂಬರ್ 9ರ ಸೋಮವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಬೆಳಗ್ಗೆ 9 ರಿಂದ 11 ಗಂಟೆಯ ತನಕ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ಅಗತ್ಯವಿದ್ದರೆ ಮಧ್ಯಾಹ್ನ 1 ಗಂಟೆಯ ಬಳಿಕ ಮತದಾನ ನಡೆಯಲಿದೆ. ಚಿತ್ರದುರ್ಗದ ಜಂಟಿ ರಿಜಿಸ್ಟ್ರಾರ್ ಇಲಿಯಾಸ್ ಉಲ್ಲಾ ಷರೀಫ್ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರಗಳ ಕುರಿತು ತನಿಖೆ ನಡೆಸಿದ್ದರು. ಬಳಿಕ ಆರ್. ಎಂ.ಎಂ ಅವರ ಸದಸ್ಯತ್ವವನ್ನು 5 ವರ್ಷಗಳ ಕಾಲ ಅನರ್ಹಗೊಳಿಸಿದ್ದರು.
ಅಕ್ಟೋಬರ್ 17ರಿಂದ ಉಪಾಧ್ಯಕ್ಷ ಚನ್ನವೀರಪ್ಪ ಅವರು ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸೋಮವಾರ ನಡೆಯಲಿರುವ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ ಗೌಡ ಟೀಂ ಏನು ಮಾಡುತ್ತದೆ ಕಾದು ನೋಡಬೇಕಿದೆ. ಆದರೆ ಇತ್ತ ಕಸ್ತೂರಿ ರಂಗನ್ ವರದಿ ವಿರೋಧಿಸಿ ತಮ್ಮ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ನ.9ರಂದು 42 ಕಿಮೀ ಕ್ರಮಿಸಿ ಕೊನೆಯ ದಿನಕ್ಕೆ ಬರಲಿದೆ. ಇತ್ತ ಚುನಾವಣೆ ಕಾರ್ಯತಂತ್ರ ಕೂಡ ಮಾಡಬೇಕಿದೆ. ಹೀಗಾಗಿ ಗೌಡರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.