ವಾಹನ ಸವಾರರೇ ಎಚ್ಚರ.. ಎಚ್ಚರ.!
– ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ವಾಹನ ಗುಜರಿಗೆ!
– ಕರ್ನಾಟಕ ಸಾರಿಗೆ ಇಲಾಖೆ ಹೊಸ ರೂಲ್ಸ್.!
NAMMUR EXPRESS NEWS
ಬೆಂಗಳೂರು: ಪದೇ ಪದೇ ಟ್ರಾಫಿಕ್ ನಿಯಮ ಬ್ರೇಕ್ ಮಾಡುತ್ತೀರಾ? ಹಾಗಾದರೆ ಇನ್ನು ಮುಂದೆ ಎಚ್ಚರವಹಿಸುವುದು ಅತೀ ಅಗತ್ಯ. ಕಾರಣ, ಕೇವಲ ದಂಡ ಕಟ್ಟಿದರೆ ನಿಯಮ ಉಲ್ಲಂಘನೆ ಕೇಸ್ ಮುಗಿಯುವುದಿಲ್ಲ. ನಿಮ್ಮ ವಾಹನ ಸೀಜ್ ಮಾಡಿ ಗುಜುರಿಗೆ ಹಾಕಲಾಗುತ್ತದೆ. ಈ ಹೊಸ ನಿಯಮವನ್ನು ಕರ್ನಾಟಕ ಸಾರಿಗೆ ಇಲಾಖೆ ರೂಪಿಸಿದೆ. ಇದೀಗ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬೆಂಗಳೂರು ಸೇರಿದಂತೆ ಇತರ ನಗರ, ಪಟ್ಟಣಗಳಲ್ಲಿ ವಾಹನ ಸವಾರರು ನಿಮಯ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಪೊಲೀಸರು ಇಲ್ಲ ಎಂದು ಸಿಗ್ನಲ್ ಜಂಪ್, ರಾಂಗ್ ಸೈಡ್, ಸೀಟ್ ಬೆಲ್ಟ್ ಸೇರಿದಂತೆ ಹಲವು ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ 30 ಸಾವಿರ,50 ಸಾವಿರ, 1 ಲಕ್ಷ ರೂಪಾಯಿ ದಂಡ ಬಾಕಿ ಉಳಿಸಿಕೊಂಡ ಘಟನೆಗಳು ಬೆಳಕಿಗೆ ಬಂದಿದೆ. ವಾಹನ ಮೌಲ್ಯವೇ ದಂಡದಷ್ಟಿಲ್ಲ ಎಂದು ಅಳಲು ತೋಡಿಕೊಂಡ ಘಟನೆಗಳು ವರದಿಯಾಗಿದೆ.
ಈ ಸಮಸ್ಯೆಗಳಿಗೆ ಉತ್ತರ ಹುಡುಕಲು ಸಾರಿಗೆ ಇಲಾಖೆ ಹೊಸ ಸೂತ್ರ ಮುಂದಿಟ್ಟಿದೆ. ಮೊದಲ ಹಂತದಲ್ಲಿ 50 ಸಾವಿರ ರೂಪಾಯಿಗೂ ಅಧಿಕ ಮೊತ್ತದ ದಂಡ ಬಾಕಿ ಉಳಿಸಿಕೊಂಡ ವಾಹನಗಳನ್ನು ಸೀಜ್ ಮಾಡಿ ಗುಜುರಿಗೆ ಹಾಕುವ ಹೊಸ ನಿಯಮ ಜಾರಿಗೆ ತರಲು ಕರ್ನಾಟಕ ಮುಂದಾಗಿದೆ. ಇದುವರೆಗೆ ದುಬಾರಿ ದಂಡ ಕಟ್ಟದ ವಾಹನಗಳನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಯಲ್ಲಿ ಇಡಲಾಗುತ್ತಿತ್ತು. ದಂಡ ಕಟ್ಟಿದ ಬಳಿಕ ವಾಹನ ಮರಳಿ ನೀಡಲಾಗುತ್ತದೆ.
ಹೊಸ ನಿಯಮದ ಪ್ರಕಾರ, ದುಬಾರಿ ದಂಡ ಪಾವತಿ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಗುಜುರಿಗೆ ಹಾಕಲಾಗುತ್ತದೆ. ಈ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಮುಂದಾಗಿದೆ. ಸಾರಿಗೆ ಇಲಾಖೆ ಈ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಂಡರೆ ಹೊಸ ಕಾನೂನು ಜಾರಿಗೆ ಬರಲಿದೆ. ನಗರ ಪ್ರದೇಶದಲ್ಲಿ ಹಾಗೂ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಮಾಣದಲ್ಲಿ ಟ್ರಾಫಿಕ್ ನಿಯಮ ಪಾಲಿಸದೆ ನಡೆಯುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಸುರಕ್ಷತೆ, ಸುಗಮ ಸಂಚಾರಕ್ಕಾಗಿ ಇದೀಗ ಕಟ್ಟು ನಿಟ್ಟಿನ ಟ್ರಾಫಿಕ್ ನಿಯಮ ಪಾಲನೆಗೆ ಹೊಸ ನಿಯಮ ಜಾರಿಗೆ ಸಾರಿಗೆ ಇಲಾಖೆ ತಯಾರಿ ನಡೆಸಿದೆ.