ಗೇರಿನ ತೋಪಿಗೆ ಆಕಸ್ಮಿಕ ಬೆಂಕಿ!
– ಅಪಾರ ಪ್ರಮಾಣದ ಗೇರುಗಿಡ ನಾಶ!
– ಬೆಂಕಿ ಆರಿಸಲು ಸಾತ್ ಕೊಟ್ಟ ಶಾಸಕರು!
NAMMUR EXPRESS NEWS
ಪುತ್ತೂರು: ಚಿಕ್ಕಮುಡ್ನರು ಗ್ರಾಮದ ರಾಗಿದಕುಮೇರು ಬಳಿಯ ಕಡ್ಲಿಮಾರ್ ಎಂಬಲ್ಲಿ ಗೇರು ತೋಪಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಗೇರು ಗಿಡಗಳು ನಾಶವಾದ ಘಟನೆ ಭಾನುವಾರ ಸಂಜೆ ನಡೆದಿದೆ. ನೂರಾರು ಗೇರು ಗಿಡಗಳಿರುವ ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಇಡೀ ಗೇರು ತೋಪಿಗೆ ಆವರಿಸಿತ್ತು. ದಿವಾಕರ ರೈ ಎಂಬವರಿಗೆ ಸೇರಿದ ಗೇರು ತೋಟದಲ್ಲಿ ಹೇಗೆ ಬೆಂಕಿ ಹತ್ತಿಕೊಂಡಿದೆ ಎಂಬುದು ಗೊತ್ತಾಗಿಲ್ಲ. ತೋಟದ ಕೆಳಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು ಅದರಿಂದ ಬೆಂಕಿಕಿಡಿ ಹೊತ್ತಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಹೂ ಬಿಡಲು ಸಿದ್ದವಾದ ನೂರಾರು ಗಿಡಗಳು ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರ ಬೆಂಕಿ ನಂದಿಸುವ ಪ್ರಯತ್ನ ಸಫಲವಾಗಲಿಲ್ಲ.
ಅಗ್ನಿಶಾಮಕ ದಳದ ಜೊತೆ ಸೇರಿಕೊಂಡ ಶಾಸಕರು:
ಪುರುಷರಕಟ್ಟೆ ಕ್ರಿಕೆಟ್ ಪಂದ್ಯಾಟ ಕಾರ್ಯಕ್ರಮ ಮುಗಿಸಿ ಬೆದ್ರಾಳ ಮೂಲಕ ಉಪ್ಪಿನಂಗಡಿಗೆ ತೆರಳುವ ದಾರಿ ಮಧ್ಯೆ ಸಾಲ್ಮರ ತಲುಪುವ ವೇಳೆ ಅಗ್ನಿಶಾಮಕ ವಾಹನ ತೆರಳುತ್ತಿರುವುದನ್ನು ಗಮನಿಸಿದ ಶಾಸಕರು ಅವರ ಜೊತೆಯೇ ತೆರಳಿದರು. ತಕ್ಷಣವೇ ಹೊತ್ತಿ ಉರಿಯುತ್ತಿದ್ದ ಕಡೆಗೆ ತೆರಳಿದ ಶಾಸಕರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.