- ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಕೇಸಿಗೆ ಟ್ವಿಸ್ಟ್?
ಹುಬ್ಬಳ್ಳಿ: ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಯೋಗೇಶ ಗೌಡ ಕೊಲೆ ಪ್ರಕರಣದ ತನಿಖೆ ಹೊಣೆಹೊತ್ತ ಸಿಬಿಐ ಅಧಿಕಾರ ರಾಕೇಶ ರಂಜನ್ ಸಾಮಾನ್ಯದವರಲ್ಲ!
ಹೌದು, ಕರ್ನಾಟಕದ ಜನತೆಗೆ ನೆನಪಿರಬಹುದು, ಮಾಜಿ ಸಚಿವ ಜನಾರ್ಧನ ರೆಡ್ಡಿಯ ಗಣಿಯನ್ನು ಅಗೆದು-ಬಗೆದು ಜೈಲಿಗೆ ಅಟ್ಟಿದ ಅಧಿಕಾರಿ ಇವರೇ. ಇದೀಗ ಮತ್ತೊಬ್ಬ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 2019 ಸೆಪ್ಟೆಂಬರ್ನಲ್ಲಿ ಯೋಗೇಶಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿದಾಗ ತನಿಖಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದ ಇದೇ ರಾಕೇಶ ರಂಜನ್.
ಯೋಗೇಶಗೌಡ ಕೊಲೆಯಾದ 48 ಗಂಟೆಯಲ್ಲಿ 6 ಆರೋಪಿಗಳು ಪೆÇಲೀಸರಿಗೆ ಶರಣಾಗಿ , ತಾವೇ ಕೊಲೆ ಆರೋಪಿಗಳು ಎಂದು ಹೇಳಿಕೊಂಡಾಗ ಈ ಪ್ರಕರಣ ಮುಗಿದೇ ಹೋಯಿತು ಎಂದು ಭಾವಿಸಿದವರೇ ಹೆಚ್ಚು. ಸರ್ಕಾರ ಸಿಬಿಐಗೆ ಪ್ರಕರಣ ಹಸ್ತಾಂತರಿಸಿದ ನಂತರ ತನಿಖೆಯ ಜವಾಬ್ದಾರಿ ಹೊತ್ತುಕೊಂಡವರು ರಾಕೇಶ ರಂಜನ್.
ಯೋಗೇಶಗೌಡನನ್ನು ಕೊಲೆಗೈದ ಶೂಟರ್ಗಳು ಸ್ಥಳೀಯರಲ್ಲ. ಬದಲಾಗಿ ತಮಿಳುನಾಡು, ಬೆಂಗಳೂರು ಮೂಲದವರು. ಇವರು ಸುಪಾರಿ ಹಂತಕರು ಎಂಬ ಸತ್ಯ ಸಂಗತಿಯನ್ನು ಬಹಿರಂಗಗೊಳಿಸಿದವರು ಇದೇ ಅಧಿಕಾರಿ.
ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆ ನಡೆಸಿ, ಕೆಲವರನ್ನು ಬಂಧಿಸುವ ಮೂಲಕ ತನಿಖೆಯ ಗತಿಯನ್ನೇ ಬದಲಾಯಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದರು.
ರಾಕೇಶ ರಂಜನ್ ತನಿಖೆಯೇ ವಿಭಿನ್ನ, ನೋಟಿಸ್ ಕೊಟ್ಟು ವಿಚಾರಣೆ ಕರೆಯಿಸುವ ಪೂರ್ವ ಎಲ್ಲ ದಾಖಲೆಗಳನ್ನು ಗೌಪ್ಯವಾಗಿ ಅಷ್ಟೇ ನಿಖರವಾಗಿ ಸಂಗ್ರಹಿಸುವುದು ಇವರ ವಿಶೇಷತೆ. ಈಗ ಇದೇ ನೋಡಿ ವಿನಯ ಕುಲಕರ್ಣಿ ಪ್ರಕರಣ. ಯಾವ ದಿನಾಂಕದಂದು ಇವರು ಎಲ್ಲಿದ್ದರು? ಏನೇನು ಮಾತನಾಡಿದರು? ಯಾವ ಹೊಟೇಲ್ನಲ್ಲಿ ತಂಗಿದ್ದರು? ಯಾವ ವಿಮಾನಕ್ಕೆ ಹೋದರು? ಯಾರೊಂದಿಗೆ ಎಷ್ಟು ಸಮಯ ಮಾತನಾಡಿದರು? ಇಂತಹ ಹಲವಾರು ಮಾಹಿತಿಯ ಜಾಲವನ್ನು ಭೇದಿಸಿ, ಈಗ ವಿಚಾರಣಾಧೀನ ಕೈದಿ ವಿನಯ ಕುಲಕರ್ಣಿ ಅವರನ್ನು ಹಿಗ್ಗಾಮಗ್ಗಾ ಜಾಲಾಡಿಸುತ್ತಿದ್ದಾರೆ. ಇದೇ ರಂಜನ್ ವಿಶೇಷತೆ.
ಮಹತ್ವದ ಸಂಗತಿಯೆಂದರೆ, ರಾಕೇಶ ರಂಜನ್ಗೆ ಸಿಟ್ಟು ಬರುವುದಿಲ್ಲ. ಇವರು ಯಾವುದೇ ಪರಿಸ್ಥಿತಿಯಲ್ಲಿ ಸಂಯಮ ಕಳೆದುಕೊಳ್ಳುವುದಿಲ್ಲ. ಯಾರಿಗೂ ಬೇಸರ ಮಾಡುವುದಿಲ್ಲ. ಆದರೆ ಬಾಯಿ ಬಿಡಿಸುವ ಕಲೆ ಕರಗತ. ವಿಚಾರಣೆ ಶೈಲಿ, ತನಿಖೆ ವೈಖರಿ ವಿಭಿನ್ನ, ಮೂಲತಃ ಬಿಹಾರದವರಾದ ರಾಜೇಶ ರಂಜನ್, ಸಾಮಾನ್ಯ ರೈತನೊಬ್ಬನ ಮಗ. ಪದವಿ ಅಧ್ಯಯನ ನಂತರ ಬಿಎಸ್ಎಫ್ ಸೇರಿಕೊಂಡರು. ಅಲ್ಲಿಂದ ಅವರು ಏರಿದ ಹುದ್ದೆಗಳು, ಸ್ಥಾನಮಾನ ಎಲ್ಲವೂ ನಿಷ್ಠೆ, ಪ್ರಾಮಾಣಿಕತೆಯಿಂದಲೇ ಬಂದಿದ್ದು, ವೃತ್ತಿ ಬದುಕಿನಲ್ಲಿ ಈವರೆಗೆ ನಡೆಸಿದ 14 ಪ್ರಕರಣಗಳ ತನಿಖೆಯಲ್ಲಿ 12ರಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಇನ್ನೆರಡು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 15ನೇ ಪ್ರಕರಣವೇ ಯೋಗೇಶಗೌಡ ಕೊಲೆಗೆ ಸಂಬಂಧಿಸಿದ್ದು.
ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್ಸ್ಪೆಕ್ಟರ್ ರಾಕೇಶ ರಂಜನ್ ಮೂಲತಃ ಗಡಿಭದ್ರತಾ ಪಡೆಯ ಇಂಟೆಲಿಜೆನ್ಸ್ ವಿಂಗ್ನಲ್ಲಿ 5 ವರ್ಷ ನಿರ್ವಹಿಸಿದ ಕಾರ್ಯವೈಖರಿ ಇವರ ತನಿಖಾಶೈಲಿಯನ್ನು ಒರೆಗೆ ಹಚ್ಚಿತು. ಅವರನ್ನು ಸಿಬಿಐಗೆ ಕರೆಯಿಸಿಕೊಂಡಿದ್ದು ನ್ಯಾಷನಲ್ ಸೆಕ್ಯುರಿಟಿ ಗ್ರೂಪ್ನ ಮುಖ್ಯಸ್ಥರಾಗಿದ್ದ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯಾದ ಟಿ. ಮಡಿಯಾಳ್ ಅವರು. ಅಲ್ಲಿಂದ ರಾಕೇಶ ಅವರು ಸಿಬಿಐನಲ್ಲಿ ತಮಗೆ ವಹಿಸಿದ ಪ್ರಕರಣಗಳೆನ್ನಲ್ಲ ಭೇದಿಸುತ್ತ ಅಪರಾಧಿಗಳನ್ನು ಕಂಬಿ ಹಿಂದೆ ಅಟ್ಟಿದರು. ಇವರ ಚಾಕಚಕ್ಯತೆಯ ಕಾರ್ಯವೈಖರಿಗೆ ಕಳೆದ ಆ.15ರಂದು ಕೇಂದ್ರ ಗೃಹ ಸಚಿವರ ಮೆಡಲ್ ಪುರಸ್ಕಾರ ಲಭಿಸಿದೆ.