- ಚುರುಕು ಪಡೆದ ಯೋಗೇಶ ಗೌಡ ಕೊಲೆ ಕೇಸ್
- ಜಾಮೀನು ಪ್ರಕ್ರಿಯೆಗೆ ಕರೋನಾ ಅಡ್ಡಿ..!
ಹುಬ್ಬಳ್ಳಿ: ಮಳೆ ನಿಂತ್ರೂ ಮರದಿಂದ ನೀರು ಬೀಳೋದು ನಿಲ್ಲೋದಿಲ್ಲ ಅನ್ನೋ ಹಾಗೇ ಜಿಪಂ ಸದಸ್ಯ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನವಾದರೂ ಸಿಬಿಐ ಡ್ರಿಲ್ ಮಾತ್ರ ನಿಂತಿಲ್ಲ..!
ಸಿಬಿಐ ಅಧಿಕಾರಿಗಳು ಸುದೀರ್ಘ ಮೂರು ದಿನಗಳ ತನಿಖೆಯ ಬಳಿಕ ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು 14 ದಿನ ಮುದ್ದೆ ಮುರಿಯುವ ಹಾಗೆ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ವಿನಯ ಪರ ನ್ಯಾಯವಾದಿ ಬಾಹುಬಲಿ ಧನವಾಡೆ ಜಾಮೀನು ಅರ್ಜಿ ಸಲ್ಲಿಸಿದರು.
ಆದರೆ, ಕುಲಕರ್ಣಿ ಜಾಮೀನು ಪ್ರಕ್ರಿಯೆಗೆ ಸದ್ಯ ಕರೋನಾ ವೈರಸ್ ಅಡ್ಡಿಯಾಗಿದೆ. ಕೋವಿಡ್ 19 ನಿಯಮಾವಳಿ ಪ್ರಕಾರ ಯಾವುದೇ ಅರ್ಜಿಯನ್ನು ನ್ಯಾಯಾಧೀಶರು ನೇರವಾಗಿ ವಿಚಾರಣೆ ಮಾಡದೇ ಆ ಅರ್ಜಿಯನ್ನು ಸ್ಯಾನಿಟೈಸ್ ಮಾಡಿಸಿ 24 ಗಂಟೆಯ ಬಳಿಕವೇ ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದಾರೆ. ಹೀಗಾಗಿ ಬುಧವಾರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಈ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದ ವಿನಯ ಪರ ವಕೀಲರಿಗೆ ಹಾಗೂ ಕೈ ಕಾರ್ಯಕರ್ತರಿಗೆ ಕೊಂಚ ನಿರಾಸೆಯನ್ನುಂಟು ಮಾಡಿದೆ.
ಮುತಗಿಗೆ ಸಖತ್ ಡ್ರಿಲ್: ಮಂಗಳವಾರ ಬೆಳಗ್ಗೆ 9 ಗಂಟೆ ಹೊತ್ತಿಗೆ ಧಾರವಾಡದ ಉಪನಗರ ಠಾಣೆಗೆ ಆಮಿಸಿದ ಸಿಬಿಐ ಅಧಿಕಾರಿ ರಾಕೇಶ ರಂಜನ್ ನೇತೃತ್ವದ ತಂಡ, ತನಿಖೆಯ ಇಕ್ಕಳವನ್ನು ಮತ್ತಷ್ಟು ಬಿಗಿಗೊಳಿಸಿತು. ಮೊನ್ನೆಯಷ್ಟೇ ವಿಚಾರಣೆಗೊಳಪಟ್ಟಿದ್ದ ವಿನಯ ಕುಲಕರ್ಣಿ ಮಾವ ಚಂದ್ರಶೇಖರ ಇಂಡಿ ಹಾಗೂ ಆಪ್ತ ಕಾರ್ಯದರ್ಶಿ ಸೋಮಶೇಖರ ನ್ಯಾಮಗೌಡ ಅವರ ಹೇಳಿಕೆ ಆಧಾರದ ಮೇಲೆ ಇಂದು ಯೋಗೇಶಗೌಡ ಕೊಲೆ ಪ್ರಕರಣದ ಎ1 ಆರೋಪಿ ಬಸವರಾಜ ಮುತಗಿ ಅವರನ್ನು ಠಾಣೆಗೆ ಕರೆಯಿಸಿ ಸಖತ್ ಡ್ರಿಲ್ ಮಾಡಿದ್ದಾರೆ.
ಚಂದ್ರಶೇಖರ ಮತ್ತು ನ್ಯಾಮಗೌಡ ಹೇಳಿಕೆ ಹಿನ್ನೆಲೆಯಲ್ಲಿ ಮುತಗಿ ಸಾಕಷ್ಟು ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದು ಎಲ್ಲ ಪ್ರಶ್ನೆಗಳಿಗೆ ಮುತಗಿ ತಡಬಡಿಸಿದ್ದು ಮೂಲಗಳಿಂದ ಗೊತ್ತಾಗಿದೆ. ಬಳಿಕ ಮಧ್ಯಾಹ್ನ 12.30ರ ಹೊತ್ತಿಗೆ ವಿನಯ ಕುಲಕರ್ಣಿ ಅತ್ಯಾಪ್ತ ಶ್ರೀಷ ಪಾಟೀಲ್ ಅವರನ್ನೂ ಕರೆಯಿಸಿ ವಿಚಾರಣೆಗೊಳಪಡಿಸಿದ್ದಾರೆ.
ಢವಢವ!: ಯೋಗೇಶ ಗೌಡ ಕೊಲೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಚುರುಕು ಪಡೆಯುತ್ತಲೇ ಸಾಗಿದ್ದು ಕೈ ನಾಯಕರಿಗೆ ಹಾಗೂ ಪೆÇಲೀಸ್ ಅಧಿಕಾರಿಗಳಲ್ಲಿಯೂ ಢವಢವ ಹೆಚ್ಚಿಸಿದೆ. ಬುಧವಾರ ಬೆಳಗ್ಗೆ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ವಿನಯಗೆ ಬೇಲಾ ಅಥವಾ ಜೈಲಾ ಎಂಬುದು ತೀರ್ಮಾನವಾಗಲಿದೆ.
ಪಿಐ ಚನ್ನಕೇಶ ಹೈಕೋರ್ಟ್ ಮೊರೆ: ಯೋಗೇಶ ಗೌಡ ಕೊಲೆ ಕೇಸ್ನಲ್ಲಿ ಸಿಬಿಐನಿಂದ ಬಂಧನದ ಭೀತಿಯಲ್ಲಿರುವ ಪ್ರಕರಣ ನಡೆದ ಸಂದರ್ಭದಲ್ಲಿ ತನಿಖಾಧಿಕಾರಿಯಾಗಿದ್ದ ಚನ್ನಕೇಶ ಟಿಂಗರೀಕರ, ಜಾಮೀನು ಕೋರಿ ಹೈಕೋರ್ಟ್ ಮೇಟ್ಟಿಲೇರಿದ್ದಾರೆ.
ಸಿಬಿಐ ನ್ಯಾಯಾಲಯದಲ್ಲಿ ಈಗಾಗಲೇ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಟಿಂಗರೀಕರ, ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಇದೀಗ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ಬಂಧನದ ಭೀತಿಯಿಂದ ವೈದ್ಯಕೀಯ ರಜೆಯ ಮೇಲೆ ಟಿಂಗರೀಕರ ತೆರಳಿದ್ದಾರೆ.