ಈಗ ಕಾಳಿಂಗ ಸರ್ಪಗಳ ಸಮಯ: ಹುಷಾರ್!
– ಕಾರ್ಕಳ, ಹೆಬ್ರಿ, ತೀರ್ಥಹಳ್ಳಿ ಭಾಗದಲ್ಲಿ ಕಾಳಿಂಗ ಸರ್ಪಗಳ ಓಡಾಟ!
– ಮಾರ್ಚ್ ಮೊದಲ ವಾರದಿಂದ ಜೂನ್ ವರೆಗೆ ಕಾಳಿಂಗ ಸರ್ಪಗಳ ಓಡಾಟ ಹೆಚ್ಚಳ
NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕಿನ ಮಲೆನಾಡ ತಪ್ಪಲಿನ ಪ್ರದೇಶಗಳದ ಅಜೆಕಾರು ಶಿರ್ಲಾಲು ,ಕೆರುವಾಶೆ, ಮಾಳ ಮುಡಾರು, ಬಜಗೋಳಿ,ಹೊಸ್ಮಾರು , ಈದು ಹೆಬ್ರಿ ತಾಲೂಕಿನ ಅಂಡಾರು ಮುನಿಯಾಲು ಮುದ್ರಾಡಿ, ಕಬ್ಬಿನಾಲೆ, ನಾಡ್ಪಾಲು, ಮಡಾಮಕ್ಕಿ, ಅಲ್ಬಾಡಿ ,ಚಾರ,ಹೆಬ್ರಿ, ಕುಚ್ಚೂರು ಆಗುಂಬೆ ,ಕುಂದಾಪುರ ತಾಲೂಕು ಬೆಳ್ತಂಗಡಿ ತಾಲೂಕಿನ ಭಾಗಗಳಲ್ಲಿ ಮಾರ್ಚ್ ತಿಂಗಳ ಮೊದಲ ವಾರದಿಂದ ಜೂನ್ ತಿಂಗಳವರೆಗೆ ಕಾಳಿಂಗ ಸರ್ಪಗಳ ಓಡಾಡ ಹೆಚ್ಚಾಗಲಿದ್ದು ಜನರ ಕಣ್ಣಿಗೆ ಕಾಣಿಸುವುದು ಸಾಮಾನ್ಯವಾಗಲಿದೆ .
ಕಾರಣವೇನು?
ಕಾಳಿಂಗ ಸರ್ಪಗಳು ವಿಷಹೊಂದಿರುವ ಹಾವುಗಳು .ಸಾಮಾನ್ಯವಾಗಿ ಮಾರ್ಚ್ ಮೊದಲವಾರದಿಂದ ಜೂನ್ ಮೊದಲವಾರದವರೆಗೂ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಮಯವಾಗಿದ್ದು , ಇದಕ್ಕೂ ಮುಂಚೆ ತನ್ನ ಆಹಾರವನ್ನು ಹುಡುಕಿ ದೇಹವನ್ನು ಮಿಲನಕ್ಕೆ ಅಣಿಗೊಳಿಸುವ ಪ್ರಕ್ರಿಯೆ ಮುಗಿಸಿರುತ್ತವೆ. ವಯಸ್ಸಿಗೆ ಬಂದ ಹೆಣ್ಣು ಹಾವು ತಾನು ಸಂತಾನೋತ್ಪತ್ತಿಗೆ ಸಿದ್ದ ಎಂದು ತನ್ನ ಜನನಾಂಗದಿಂದ ಲೈಂಗಿಕ ಸಂಕೇತವನ್ನು ಹೊರಸೂಸುವ ರಾಸಾಯನಿಕ (ಸೆಕ್ಸ್ ಫೆರಮೋನ್) ಅಂಶವನ್ನು ಹೊರಹಾಕುವುದರ ಮೂಲಕ ವ್ಯಕ್ತ ಪಡಿಸುತ್ತದೆ, ಈ ರಾಸಾಯನಿಕಕ್ಕೆ ಆಕರ್ಷಿತವಾದ ಗಂಡುಗಳು ಮಿಲನಕ್ಕಾಗಿ ಹೆಣ್ಣಿನ ಹುಡುಕಾಟದಲ್ಲಿ ತೊಡಗುತ್ತವೆ.
ಕಾಳಿಂಗ ಸರ್ಪಗಳ ಸೀಮಾ ವ್ಯಾಪ್ತಿ
ಕಾಳಿಂಗ ಹೆಣ್ಣು ಹಾವುಗಳು 5 ಕಿಮೀ ಸೀಮಾ ವ್ಯಾಪ್ತಿಯಲ್ಲಿ ಬದುಕುತ್ತವೆ. ಗಂಡು ಕಾಳಿಂಗಗಳು 8 ಕಿಮೀ ವ್ಯಾಪ್ತಿಯ ಸೀಮಾ ವಲಯದಲ್ಲಿ ವಾಸಿಸಬಲ್ಲವು ಆದರೆ ಬೆದೆಯ ಕಾಲದಲ್ಲಿ ಗಂಡು ತನ್ನ12 ಕಿಮೀ ದೂರದವರೆಗು ಕ್ರಮಿಸಿ ಮೂಲ ನೆಲೆಗೆ ವಾಪಾಸಾಗಬಲ್ಲವು., ಹೆಣ್ಣುಗಳು ಸಾಮಾನ್ಯವಾಗಿ 9 ಅಡಿಗಳಷ್ಟು , ಗಂಡು 12 ಅಡಿಗಳಿಗಿಂತ ಉದ್ದ ಬೆಳೆಯಬಲ್ಲವು. ಬೆದೆಗೆ ಬಂದ ಹೆಣ್ಣು ಹಾವು ತಾನು ಸಂಚರಿಸುವಾಗ ಲೈಂಗಿಕ ಸಂಕೇತವನ್ನು ಹೊರಸೂಸುವ ರಾಸಾಯನಿಕ ಬಿಡುಗಡೆ ಗೊಳಿಸುತ್ತಾ ಸಾಗುತ್ತವೆ.ಈ ರಾಸಾಯನಿಕ 11 ದಿನಗಳವರೆಗೂ ಕ್ರಿಯಾಶೀಲವಾಗಿರಬಲ್ಲದು .
ದೂರ ಬಿಡಬೇಡಿ
ಬೆದೆಯ ತಿಂಗಳಲ್ಲಿ ಕಾಳಿಂಗಗಳು ಮನೆ ಕಟ್ಟಿಗೆ ರಾಶಿ ದನದ ಕೊಟ್ಟಿಗೆಗಳಲ್ಲಿ ಅಡಗಿ ಕುಳಿತರೆ ಉರಗ ಸಂರಕ್ಷರನ್ನ ಕರೆಯಿಸಿ ಹಾವನ್ನು ಸೆರೆ ಹಿಡಿದು ಸ್ವಲ್ಪ ದೂರದಲ್ಲಿ ಬಿಟ್ಟರೆ ಅಲ್ಲಿರುವ ಗಂಡು ಹೆಣ್ಣುಗಳು ಮಿಲನವಾಗುವ ಸಾಧ್ಯತೆ ಅಧಿಕ. ಬೆದೆಯ ಕಾಲ ವರ್ಷಪೂರ್ತಿ ಇರುವುದಿಲ್ಲ. ಹೆಣ್ಣು ಕಾಳಿಂಗ ಬೆದೆಗೆ ಬಂದಾಗ ಅದನ್ನು ಸೆರೆ ಹಿಡಿದು ದೂರ ಸಾಗಿಸಿಬಿಟ್ಟರೆ , ಅದಕ್ಕೆ ಗಂಡು ಸಿಗುವುದರೊಳಗೆ ಬೆದೆ ಚಕ್ರದ ಅವಧಿ ಮುಗಿದು ಗಂಡು ಸಿಕ್ಕರೂ ತಿರಸ್ಕರಿಸಬಹುದು.ಇಲ್ಲವೆ ಮಿಲನಕ್ಕೆ ಒಪ್ಪದ ಹೆಣ್ಣುಗಂಡಿಗೆ ಆಹಾರವಾಗಬಹುದು
ನಂಬಿಕೆಯೆ ಸುರಕ್ಷಿತ
ಹಾವುಗಳು ಮಿಲನವನ್ನು ನೋಡಬಾರದು ಎಂಬ ನಂಬಿಕೆ ಇದೆ . ಹೆಣೆಯಾಡುವ ಹಾವುಗಳನ್ನು ನೋಡಿದರೆ ಅವುಗಳ ಮಿಲನಕ್ಕೆ ಮಾನವರಿಂದ ತೊಂದರೆ ಆಗಬಾರದು ಎಂಬುದೇ ಇದರ ಹಿಂದಿನ ಉದ್ದೇಶ, ನಂಬಿಕೆಗಳನ್ನು ಉಳಿಸಿಕೊಳ್ಳಲಿ. ಗಂಡು ಕಾಳಿಂಗಗಳ ಹೋರಾಟವನ್ನು ಕೊಂಬಾಟ್ ಎಂದು ಕರೆಯುತ್ತಾರೆ.
ಹಾವು ಹಿಡಿಯುವಾಗ ಹುಷಾರ್..!
ಕಾಳಿಂಗ ಹಾವುಗಳು ಕಟ್ಟಿಗೆ ಮನೆಯೊಳಗೆ ಬಂದರೆ ಅರಣ್ಯ ಇಲಾಖೆಯ ಸಂಪರ್ಕಿಸಿ ಮಾಹಿತಿ ಪಡೆದು ಉರಗತಜ್ಞರನ್ನು ಸಂಪರ್ಕಿಸಿ. ಹಾವು ಹಿಡಿಯುವುದು ಅಪಾಯಕಾರಿ ಸುರಕ್ಷಾ ವಿಧಾನಗಳು ಮುಖ್ಯ. ಮದ್ಯಪಾನ ಮಾಡಿ ಹಾವು ಹಿಡಿಯಲು ಪ್ರಯತ್ನಿಸಬೇಡಿ. ಪರಿಣಿತರು ಹಾವು ಹಿಡಿಯಲಿ . ರಸ್ತೆ ಅಗಲೀಕರಣ, ಅರಣ್ಯನಾಶಗಳಿಂದ ಕಾಳಿಂಗ ಸರ್ಪಗಳು ತೋಟಗಳಲ್ಲಿ ಕಾಣಸಿಗುತ್ತಿವೆ.ಬೆದೆಗೆ ಬಂದಹೆಣ್ಣು ಕಾಳಿಂಗಕ್ಕಾಗಿ ನಾಲ್ಕೈದು ಗಂಡು ಕಾಳಿಂಗ ಹಾವುಗಳು ಕಾಣಸಿಗಬಹುದು.
ಹವಾಮಾನ ವೈಪರೀತ್ಯದ ಎಫೆಕ್ಟ್!
ಕಳೆದ ಎರಡು ತಿಂಗಳಲ್ಲಿ ಬಿಸಿಲ ಬೆಗೆ ಏರಿಕೆಯಾಗುತಿದ್ದು ಉರಗಗಳ ಸಂತಾನೋತ್ಪತ್ತಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತಿದ್ದಾರೆ. ಮಳೆಕಾಡುಗಳ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಕಾಳಿಂಗ ಸರ್ಪಗಳು ಕಾಣಸಿಗುವ ಕಾರಣ ಬಿಸಿ ವಾತಾವರಣ ಪ್ರಾಣಿ ಸಂಕುಲಕ್ಕೆ ನೇರ ಪರಿಣಾಮ ಬೀಳಬಹುದು.
ತಜ್ಞರು ಏನ್ ಹೇಳ್ತಾರೆ..?
ಬೆದೆಯ ತಿಂಗಳಲ್ಲಿ ಹೆಣ್ಣು ಅಥವಾ ಗಂಡು ಕಾಳಿಂಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬಾರದು. ಹೆಣ್ಣು ಸಂಚರಿಸಿದ ದಾರಿಯನ್ನು ಹುಡುಕಿ ಬರುವ ಗಂಡುಗಳ ಮಧ್ಯೆ ಹೆಣ್ಣು ಸಿಗುವ ಮೊದಲೇ ಕೆಲವು ಸಲ ಭೀಕರ ಕದನವಾಗಿ ಗೆದ್ದ ಗಂಡು ಹೆಣ್ಣನ್ನು ಹುಡುಕಲು ಇಲ್ಲವೇ ಮಿಲನ ಹೊಂದಲು ಅವಕಾಶವಿರುತ್ತದೆ ಆಗ ಗಂಡನ್ನು ಹಿಡಿದರೂ ಅಪಾಯ ಹಾಗು ಹೆಣ್ಣನ್ನು ಸೆರೆ ಹಿಡಿದು ಚೀಲವನ್ನು ತುಂಬಿದರೆ ಹೆಣ್ಣಿನ ಫೆರೋಮೋನು ಸಿಂಪಡಿಸಿ ಸಾಗಿದ ಹಾದಿ ತುಂಡಾಗಿ ಗಂಡು ಹೆಣ್ಣನ್ನು ಹುಡುಕಲು ತೊಂದರೆಯಾಗುತ್ತದೆ. ಇಲ್ಲಿ ಸಂರಕ್ಷಣೆ ಎಂದರೆ ಹಾವನ್ನು ತನ್ನ ಪಾಡಿಗೆ ಹೋಗಲು ಬಿಡುವುದು.ಕಾಳಿಂಗಗಳ ಮಿಲನದ ದೃಶ್ಯಗಳು ಕಂಡುಬಂದರೆ ದೂರದಿಂದ ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಹಾವುಗಳು 2-3 ದಿನ ಅಲ್ಲಿದ್ದು ನಂತರ ಹೊರಟು ಹೋಗುತ್ತವೆ. ಸೆರೆ ಹಿಡಿದು ಸ್ಥಳಾಂತರ ಮಾಡುವುದು
ನಾಗರಾಜ್ ಬೆಳ್ಳೂರು ಉರಗ ತಜ್ಞ ರು
ನಿಸರ್ಗ ಕನ್ಸವೇಷನ್ ಟ್ರಸ್ಟ್ ಶಿವಮೊಗ್ಗ
ಹಾವು ಮನೆಗೆ ಬರದಂತೆ ಮಾಡುವುದು ಹೇಗೆ?
ಕಾಳಿಂಗ ಸರ್ಪ ಗಳು ಪರಿಸರ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಮಾರ್ಚ್ ನಿಂದ ಜೂನ್ ತಿಂಗಳ ವರೆಗೆ ಮಿಲನಪ್ರಕ್ರಿಯೆ ನಡೆಯುತ್ತದೆ.ಗೂಡು ಕಟ್ಟಿಕಟ್ಟಿ ಮೊಟ್ಟೆಯಿಟ್ಟು ಜನ್ಮನೀಡುವ ಅಪರೂಪದ ಹಾವುಗಳು.. ಕಾಳಿಂಗ ಸರ್ಪಗಳನ್ನು ಹಿಡಿಯಲು ಪ್ರಯತ್ನಿಸಬೇಡಿ.ವಿಷಕಾರಿ ಹಾವುಗಳೆ ಕಾಳಿಂಗದ ಮುಖ್ಯಾಹಾರ ,ಇಲಿ ಹೆಗ್ಗಣಗಳು ಮನೆಯೊಳಗೆ ಅಕ್ಕಪಕ್ಕ ಬರದಂತೆ ನೋಡಿಕೊಂಡರೆ ಹಾವುಗಳು ಮನೆಯೊಳಗೆ ಬರುವುದಿಲ್ಲ.
ಅಜಯ್ ಗಿರಿ.
ಖ್ಯಾತ ಉರಗ ತಜ್ಞ.
ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ