ತುಳು ಗೌರವಕ್ಕಾಗಿ ಹೋರಾಟ!
– ತುಳು ಈಗ ರಾಜ್ಯದ ಅಧಿಕೃತ ಭಾಷೆ!
– ಅಧಿಕೃತ ಭಾಷಾ ಸ್ಥಾನಮಾನ ನೀಡುವ ಬಗ್ಗೆ ಪ್ರಸ್ತಾಪ
– ಡಾ. ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ಸಮಿತಿ
NAMMUR EXPRESS NEWS
ಬೆಂಗಳೂರು: ಕರಾವಳಿ ಭಾಗದ ಜೀವ ಭಾಷೆ, ಅತ್ಯಧಿಕ ಸಂಖ್ಯೆಯ ಜನರ ವ್ಯವಹಾರಿಕ ಭಾಷೆಯಾಗಿರುವ ತುಳುಗೆ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ನೀಡುವ ಬಗ್ಗೆ ನೆರೆಯ ರಾಜ್ಯಗಳಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಅಧ್ಯಯನ ವರದಿ ಪಡೆದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ವಿಧಾನಪರಿಷತ್ ನಲ್ಲಿ ಸದಸ್ಯ ಬಿ.ಎಂ.ಫಾರೂಕ್ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ್ದಾರೆ. ತುಳುವನ್ನು ರಾಜ್ಯದಲ್ಲಿ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಂಬಂಧ ಅಧ್ಯಯನ ನಡೆಸಲು ಡಾ. ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆನಂತರ ಕಾನೂನು ಇಲಾಖೆ ಅಭಿಪ್ರಾಯ ಕೋರಲಾಗಿತ್ತು, ಕಾನೂನು ಇಲಾಖೆ ಈ ಕುರಿತು ಅನ್ಯ ರಾಷ್ಟ್ರಗಳಲ್ಲಿ ಯಾವ ಕ್ರಮ ಅನುಸರಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದು ಸಲ್ಲಿಸುವಂತೆ ಸೂಚನೆ ನೀಡಿದೆ.
ಹಲವು ರಾಜ್ಯಗಳಲ್ಲಿ ಎರಡು ಅಧಿಕೃತ ಭಾಷೆ
ಆಂಧ್ರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ತಮ್ಮ ರಾಜ್ಯಗಳಲ್ಲಿ2ನೇ ಅಧಿಕೃತ ಭಾಷೆಗಳನ್ನು ಮಾಡಿರುವ ಕ್ರಮದ ಬಗ್ಗೆ ಮಾಹಿತಿ ಕೋರಲಾಗಿದೆ. ಆದರೆ ಆ ರಾಜ್ಯಗಳಿಂದ ಯಾವುದೇ ಮಾಹಿತಿ ಬಂದಿಲ್ಲ. ಆದ್ದರಿಂದ ಕೂಡಲೇ ಅಧಿಕಾರಿಗಳ ತಂಡ ರಚಿಸಿ ಆ ರಾಜ್ಯಗಳಿಗೆ ಕಳುಹಿಸಿ ಮಾಹಿತಿ ಸಂಗ್ರಹಿಸಿ ನಂತರ ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ.
ಕರಾವಳಿ ಭಾಗದ ಜನರ ಬಹು ದಿನದ ಬೇಡಿಕೆ
ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆ ಇದಾಗಿದ್ದು, ಈ ಬಗ್ಗೆ ಸರಕಾರಕ್ಕೂ ಕಾಳಜಿ ಇದೆ. ಅಲ್ಲದೆ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ 2005ರಲ್ಲಿಯೇ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆನಂತರ 2013 ರಿಂದೀಚೆಗೆ ಮೂರು ಬಾರಿ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ಆದರೂ ಸಹ ಕೇಂದ್ರ ಸರಕಾರ ಅದನ್ನು ಪರಿಗಣಿಸಿಲ್ಲ. ಹಾಗಾಗಿ ಕೇಂದ್ರ ಸರಕಾರಕ್ಕೆ ಮತ್ತೆ ಮನವಿ ಸಲ್ಲಿಸಲಾಗುವುದು ಎಂದು ತಂಗಡಗಿ ಹೇಳಿದ್ದಾರೆ.ಇದಕ್ಕೂ ಮುನ್ನ ಫಾರೂಕ್ ಅವರು, ರಾಜ್ಯ ಸರಕಾರ ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಕೂಡಲೇ ಪ್ರಕಟಿಸಬೇಕು, ಇಲ್ಲವಾದರೆ ಭಾಷೆಯನ್ನು ಉಳಿಸುವುದು ಕಷ್ಟವಾಗಲಿದೆ. ಇದರಿಂದ ಸರಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ. ಜತೆಗೆ ಸಂವಿಧಾದನದ 8ನೇ ಪರಿಚ್ಚೇದದಲ್ಲಿ ತುಳು ಸೇರಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಸರಕಾರವನ್ನು ಒತ್ತಾಯಿಸಿದರು.