20 ದಿನದಲ್ಲಿ ಲೋಕಸಭಾ ಚುನಾವಣಾ ವೇಳಾ ಪಟ್ಟಿ ಪ್ರಕಟ?
– 195 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
– ಅಭ್ಯರ್ಥಿಗಳ ಪಟ್ಟಿ ಪ್ರಕಟಕ್ಕೆ ಕಾಂಗ್ರೆಸ್ ತಯಾರಿ
NAMMUR EXPRESS NEWS
ನವದೆಹಲಿ: ಚುನಾವಣಾ ಆಯೋಗ ಮುಂದಿನ 15ರಿಂದ 20 ದಿನದಲ್ಲಿ ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಪಾಂಡುರಂಗ ಕೊಂಡಬರಾವ್ ಪೋಳೆ ಹೇಳಿದ್ದಾರೆ. ಚುನಾವಣೆಯ ಸಿದ್ದತೆಗಳ ಪರಿಶೀಲನೆಗೆ ದಕ್ಷಿಣ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಪೋಳೆ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಆಡಳಿತದ ಆದ್ಯತೆಯಾಗಿದೆ ಎಂದು ಹೇಳಿದರು. ಜನರು ಯಾವುದೇ ಭೀತಿ ಅಥವಾ ಕಷ್ಟವಿಲ್ಲದೆ ಮತದಾನ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು. ದಕ್ಷಿಣ ಕಾಶ್ಮೀರದ ಮೂರು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪೋಳೆ ಸಭೆ ನಡೆಸಿ ಸಮಾಲೋಚಿಸಿದರು. ಅನಂತನಾಗ್, ಶೋಪಿಯಾನ್, ಪುಲ್ವಾಮಾ ಜಿಲ್ಲಾಧಿಕಾರಿಗಳು, ಹಿರಿಯ ಪೊಲೀಸ್ ಆಯುಕ್ತರು (ಎಸ್ಎಸ್ಪಿ) ಸಭೆಯಲ್ಲಿ ಭಾಗವಹಿಸಿದ್ದರು.
ಅಭ್ಯರ್ಥಿಗಳ ಪಟ್ಟಿ ಪ್ರಕಟಕ್ಕೆ ಕಾಂಗ್ರೆಸ್ ತಯಾರಿ
ಬೆಂಗಳೂರು: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ದೇಶದ ಶೇ.50ರಷ್ಟಾದರೂ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿ ಜನರ ಮುಂದೆ ಆತ್ಮವಿಶ್ವಾಸ ಪ್ರದರ್ಶಿಸುವ ಬಿಜೆಪಿಯ ಲೆಕ್ಕಾಚಾರಕ್ಕೆ ಪೈಪೋಟಿ ನೀಡುವಂತೆ ಕಾಂಗ್ರೆಸ್ ಕೂಡ ಮೊದಲ ಪಟ್ಟಿ ಬಿಡುಗಡೆಗೆ ಬಿರುಸಿನ ತಯಾರಿ ನಡೆಸಿದೆ. ಪಕ್ಷದ ಮೂಲಗಳ ಪ್ರಕಾರ ಕರ್ನಾಟಕದ ವಿಚಾರಕ್ಕೆ ಬಂದರೆ ಮುಂದಿನ 5-6 ದಿನಗಳಲ್ಲೇ ಮೊದಲ ಪಟ್ಟಿ ಬಿಡುಗಡೆ ಮಾಡಬೇಕೆಂಬ ಬಯಕೆ ಹೊಂದಿದೆ. ಆ ಪ್ರಕಾರ ರಾಜ್ಯದಲ್ಲಿ 10ರಿಂದ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಚಿವರಿಗೆ ಕ್ಷೇತ್ರವಾರು ಜವಾಬ್ದಾರಿ ಹಂಚಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದ ಕೆಪಿಸಿಸಿ ಆ ಹೆಸರುಗಳ ಪೈಕಿ ಪೈಪೋಟಿ ನೀಡುವವರು ಯಾರೆಂದು ಜನಾಭಿಪ್ರಾಯ ಸಂಗ್ರಹಿಸಲು ಸರ್ವೇ ನಡೆಸಿದೆ. ಈ ವರದಿ ಫೆ.27ರಂದು ನಾಯಕರ ಕೈ ಸೇರಬೇಕಿತ್ತಾದರೂ ಈವರೆಗೆ ತಲುಪಿಲ್ಲ ಎನ್ನಲಾಗಿದೆ. ಶೀಘ್ರವೇ ವರದಿ ಪಡೆದು ಅದರ ಆಧಾರದಲ್ಲಿ ಸ್ಟೀನಿಂಗ್ ಕಮಿಟಿ ಸಭೆ ನಡೆಸಿ ಅಂತಿಮ ಹೆಸರನ್ನು ಪಕ್ಷದ ಕೇಂದ್ರ ಚುನಾವಣೆ ಸಮಿತಿಗೆ ಶಿಫಾರಸು ಮಾಡಲಿದೆ. ಪ್ರಸ್ತುತ 12 ಕ್ಷೇತ್ರಗಳಿಗೆ ಒಂದು ಹೆಸರು ಮಾತ್ರ ಅಂತಿಮಗೊಂಡಿದೆ ಎಂದು ಹೇಳಲಾಗುತ್ತಿದೆ.
ಮೋದಿ ಸೇರಿ 195 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪ್ರಧಾನಿ ಮೋದಿ ಸೇರಿ 16 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಒಟ್ಟು 195 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕಾರಣದಿಂದಾಗಿ ಪಟ್ಟಿಯಲ್ಲಿ ಯಾರಿಗೂ ಟಿಕೆಟ್ ಘೋಷಿಸಿಲ್ಲ.