ಪಠ್ಯ ಪುಸ್ತಕ ಪರಿಷ್ಕರಿಸಿದ ಶಿಕ್ಷಣ ಇಲಾಖೆ..!
– ಮತ್ತೆ ಶುರುವಾಗುತ್ತಾ ಪಠ್ಯ ಪರಿಷ್ಕರಣೆ ಫೈಟ್?
– ಏನೆಲ್ಲ ಬದಲಾವಣೆ.? ಇಲ್ಲಿದೆ ವಿವರ
NAMMUR EXPRESS NEWS
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ 2024-25ನೇ ಸಾಲಿಗೆ ಪಠ್ಯ ಪುಸ್ತಕ ಪರಿಷ್ಕರಿಸಿದೆ. ರಾಜ್ಯದಲ್ಲಿ ಮತ್ತೆ ಪಠ್ಯ ಪರಿಷ್ಕರಣೆ ಫೈಟ್ ಶುರುವಾಗುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ. ಡಾ. ಮಂಜುನಾಥ್ ಹೆಗಡೆ ಅವರ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗಿದ್ದು, ಕೆಲವು ಪಠ್ಯಕ್ಕೆ ಕೋಕ್ ನೀಡಿ ಹೊಸ ಪಠ್ಯ ಸೇರ್ಪಡೆ ಮತ್ತು ಹಳೆ ಪಠ್ಯ ತಿದ್ದುಪಡಿ ಮಾಡಿದೆ. 1ನೇ ತರಗತಿಯಿಂದ 10ನೇ ತರಗತಿ ವರೆಗಿನ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕರಿಸಿ ವರದಿಯನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದೆ. 1 ರಿಂದ 10ನೇ ತರಗತಿಯ ಕನ್ನಡ ಹಾಗೂ ದ್ವಿತೀಯ ಭಾಷೆ, 9 ಮತ್ತು 10ನೇ ತರಗತಿ ಕನ್ನಡ ಹಾಗೂ ತೃತೀಯ ಭಾಷೆ, 6ರಿಂದ 10ನೇ ತರಗತಿಗಳ ಸಮಾಜ ವಿಜ್ಞಾನ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದೆ. 6ನೇ ತರಗತಿ ಪಠ್ಯದಲ್ಲಿನ ಬದಲಾವಣೆ: ಚಂದ್ರಶೇಖರ್ ಕಂಬಾರ, ನಾಲ್ವಡಿ ಕೃಷ್ಣರಾಜ ಒಡೆಯರ್, ಎಚ್.ಎಲ್. ನಾಗೇಗೌಡ, ಡಾ. ಸಿದ್ದಲಿಂಗಯ್ಯ, ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಶಾಂತವೇರಿ ಗೋಪಾಲಗೌಡರ ಹಾಗೂ ಕೊಪ್ಪಳದ ಗವಿಮಠದ ಭಾವಚಿತ್ರ ವಿಷಯ ಸೇರ್ಪಡೆ.
ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು ಮತ್ತು ಉತ್ತರ ಭಾರತದ ರಾಜ ಮನೆತನಗಳು, ರಾಜಮನೆತನಗಳ ಪಟ್ಟಿ ಸೇರ್ಪಡೆ. ವೇದ ಕಾಲದ ಸಂಸ್ಕೃತಿ ಮತ್ತು ಹೊಸ ಧರ್ಮಗಳ ಉದಯ ಪಾಠ ಸೇರ್ಪಡೆ. ಗುಳ್ಳಕಾಯಜ್ಜಿಯ ಕಥೆ ಪಠ್ಯಕ್ಕೆ ಕೊಕ್. ಸಂವಿಧಾನ ರಚನಾ ಸಭೆಯಲ್ಲಿ ಭಾಗಿಯಾದ ಮಹಿಳಾ ಸದಸ್ಯರ ವಿವರ ಮತ್ತು ಭಾವಚಿತ್ರ ಸೇರ್ಪಡೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಇರುವ ಅವಕಾಶ, ಪ್ರಭುತ್ವದ ಪ್ರಕಾರಗಳು, ಮಕ್ಕಳ ಹಕ್ಕುಗಳು ಸೇರ್ಪಡೆ.7ನೇ ತರಗತಿ ಪಠ್ಯದಲ್ಲಿನ ಬದಲಾವಣೆ: ಭಾರತಕ್ಕೆ ಐರೋಪ್ಯರ ಆಗಮನ, ಬ್ರಿಟೀಷ್ ಆಳ್ವಿಕೆಯ ಪರಿಣಾಮ ಮರು ಸೇರ್ಪಡೆ. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು ಅಧ್ಯಾಯ ಸೇರ್ಪಡೆ. ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ವಿಷಯ ದಾಖಲು.
8ನೇ ತರಗತಿ ಪಠ್ಯದಲ್ಲಿನ ಬದಲಾವಣೆ: ಪ್ರಾಕ್ತನ ಆಧಾರಗಳ ಅರ್ಥ ಮತ್ತು ಪ್ರಾಮುಖ್ಯತೆ ವಿಷಯ ಸೇರ್ಪಡೆ. ಸನಾತನ ಧರ್ಮ ಅಧ್ಯಾಯದಲ್ಲಿ ಕೆಲವು ಅಂಶ ಸೇರ್ಪಡೆ. ಜೈನ ಮತ್ತು ಬೌದ್ಧ ಧರ್ಮಗಳು (ಜೈನ ಮತ್ತು ಬೌದ್ಧ ಮತಗಳು-ಶೀರ್ಷಿಕೆ ಬದಲಾವಣೆ) ವಿಷಯ ಸೇರ್ಪಡೆ. 9ನೇ ತರಗತಿ ಪಠ್ಯದಲ್ಲಿನ ಬದಲಾವಣೆ: ಕಾಶ್ಮೀರದ ಕಾರ್ಕೋಟರು ಮನೆತನ ಮತ್ತು ಅಹೋಮ್ ರಾಜನಮನೆತನದ ವಿಷಯ. ಕನಕದಾಸರು, ಪುರಂದರದಾಸರು ಹಾಗೂ ಸಂತ ಶಿಶುನಾಳ ಶರೀಫರ ಕುರಿತ ಮಾಹಿತಿ ಸೇರ್ಪಡೆ. 10ನೇ ತರಗತಿ ಪಠ್ಯದಲ್ಲಿನ ಬದಲಾವಣೆ: ಮೈಸೂರಿನ ಅರಸರ ಹಾಗೂ ಕಿತ್ತೂರು, ಸುರಪುರ, ಕೊಪ್ಪಳ, ಹಲಗಲಿಗಳ ಸ್ಥಳೀಯ ಬಂಡಾಯಗಳನ್ನು ಕ್ರಮಬದ್ಧವಾಗಿ ದಾಖಲು. ಸಾವತ್ರಿಬಾಯಿ ಫುಲೆ, ಯುವ ಬಂಗಾಳಿ ಚಳವಳಿ ಮತ್ತು ಪೆರಿಯಾರ್ ವಿಷಯ ಸೇರ್ಪಡೆ.