ತೀರ್ಥಹಳ್ಳಿ ತಹಸಿಲ್ದಾರ್ ಆಗಿದ್ದ ರಾಜೇಶ್ ಇನ್ನಿಲ್ಲ!
– ಅನಾರೋಗ್ಯದಿಂದ ಮೈಸೂರಿನಲ್ಲಿ ವಿಧಿ ವಶ
– ಸಾಗರ: ಹೆಂಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆದ ವ್ಯಕ್ತಿ ಕಾಡಿನಲ್ಲಿ ಶವವಾಗಿ ಪತ್ತೆ!
– ಶಿವಮೊಗ್ಗ : ರೈಲ್ವೆ ನಿಲ್ದಾಣದ ಸಮೀಪ ದರೋಡೆ!
– ಜಾಹಿರಾತು ಲಿಂಕ್ ಕ್ಲಿಕ್ ಮಾಡಿ 52 ಲಕ್ಷ ಹೋಯ್ತು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಹಸೀಲ್ದಾರ್ ಆಗಿ ಈ ಹಿಂದೆ ಸೇವೆ ಸಲ್ಲಿಸಿದ ಕೆಎಎಸ್ ಅಧಿಕಾರಿ ಎಂ.ಆರ್.ರಾಜೇಶ್ ರವರು ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಬುಧವಾರ ಮಧ್ಯಾಹ್ನ ಮೈಸೂರಿನಲ್ಲಿ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ತಹಸಿಲ್ದಾರ್ ಆಗಿದ್ದ ಸಮಯದಲ್ಲಿ ಅತ್ಯಂತ ಪ್ರಾಮಾಣಿಕ, ದಕ್ಷತೆಯಿಂದ ಮತ್ತು ಪಾರದರ್ಶಕವಾಗಿ ಸೇವೆ ಸಲ್ಲಿಸಿದ ರೈತರ ಬಗ್ಗೆ ಕಾಳಜಿ ಉಳ್ಳಂತಹ ಅಧಿಕಾರಿಯಾಗಿದ್ದರು .ಆ ಸಮಯದಲ್ಲಿ ಮಂಡಗದ್ದೆ ಹೋಬಳಿಯ ಹೆಗಲತ್ತಿ ಗ್ರಾಮದ ಸರ್ವೆ ನಂಬರ್ 47ರ 500 ಎಕ್ರೆಯ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿ ಮತ್ತು ಕಾಡು ಕೆಲವರು ಅಕ್ರಮವಾಗಿ ಭೂಸುಧಾರಣಾ ಕಾಯ್ದೆ ಅನ್ವಯ ಮಂಜುರಾತಿ ಮಾಡಿಕೊಳ್ಳಲು ಹೊರಟಾಗ ಅದನ್ನು ವಿರೋಧಿಸಿ ರಕ್ಷಣೆ ಮಾಡಿ ಸರ್ಕಾರಕ್ಕೆ ಭೂಮಿಯನ್ನು ಉಳಿಸಿಕೊಳ್ಳುವಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ಮತ್ತು ಸೇವೆಯನ್ನು ಮಾಡಿದ್ದರು. ಮೈಸೂರಿನ ಗಂಗೂಬಾಯಿ ಹಾನಗಲ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮೈಸೂರಿನ ಚಾಮುಂಡಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿಯೂ, ಉಪ ವಿಭಾಗಾಧಿಕಾರಿಯಾಗಿ ಅನೇಕ ಊರುಗಳಲ್ಲಿ ಸೇವೆ ಸಲ್ಲಿಸಿದ್ದರು.
ಹೆಂಡತಿ ಕೊಲೆ ಮಾಡಿ ಎಸ್ಕೇಪ್ ಆದ ವ್ಯಕ್ತಿ ಕಾಡಿನಲ್ಲಿ ಶವವಾಗಿ ಪತ್ತೆ!
ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಬ್ಯಾಕೋಡು ಸಮೀಪದ ಕಾಡಿನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಈ ಶವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಬ್ಯಾಕೋಡು ಸಮೀಪ ಪತ್ನಿಯ ಕೊಲೆ ಮಾಡಿ ಎಸ್ಕೇಪ್ ಆದವನ ಶವ ಇದೆ ಇರಬೇಕು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಬ್ಯಾಕೋಡು ಸಮೀಪದ ಆವಿಗೆಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಊರಿನ ಗ್ರಾಮಸ್ಥರು ಕಟ್ಟಿಗೆಗಾಗಿ ಕಾಡಿಗೆ ತೆರಳಿದ ಸಂದರ್ಭದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ.
ಕಾರ್ಗಲ್ ಠಾಣಾ ಪೊಲೀಸ್ ನವರು ಸ್ಥಳಕ್ಕಾಗಮಿಸಿ, ಮಹಜರ್ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 20 ಜನವರಿ 2024 ರಂದು ಗ್ರಾಮದ ನೀಲಾವತಿ ಎಂಬ ಮಹಿಳೆಯನ್ನು ಪತಿ ಲೋಕೇಶ್ ಎಂಬುವನು ಕುಡಿದ ಅಮಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದ. ನಂತರ ಆರೋಪಿ ಲೋಕೇಶನು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದರು. ಸದ್ಯ ಪತ್ತೆಯಾಗಿರುವ ಶವ ಆತನದ್ದೆ ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸದ್ದಿಲ್ಲದೆ ದರೋಡೆ ಪ್ರಕರಣ
ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಸದ್ದಿಲ್ಲದೆ ದರೋಡೆ ಪ್ರಕರಣವೊಂದು ದಾಖಲಾಗಿದೆ. ಶಿವಮೊಗ್ಗ ಸಿಟಿ ಯ ಶೇಷಾದ್ರಿಪುರಂ ಬಳಿ ಇರುವ ರೈಲ್ವೆ ಓವರ್ ಬ್ರಿಡ್ಜ್ ಬಳಿಯಲ್ಲಿ ಈ ಘಟನೆ ನಡೆದಿದ್ದು ಕೋಟೆ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ. ಸೇತುವೆ ಕೆಳಗೆ ವಾಕಿಂಗ್ ಮಾಡುತ್ತಿದ್ದ ಮೂವರನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ. ಬೈಕ್ನಲ್ಲಿ ಬಂದ ಅಪರಿಚಿತರು ಚಾಕು ತೋರಿಸಿ ಮೊಬೈಲ್, ನಗದು ದೋಚಿದ್ದಾರೆ. ಮಂಡಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಕ್ತಿಯೊಬ್ಬರ ಸಂಬಂಧಿಕರ ಮದುವೆ ಆರತಕ್ಷತೆಗಾಗಿ ಬೆಂಗಳೂರಿನಿಂದ ಸ್ನೇಹಿತರಿಬ್ಬರು ಬಂದಿದ್ದರು. ಇವರನ್ನ ರೈಲ್ವೆ ಸ್ಟೇಷನ್ಗೆ ಬಿಟ್ಟು ಬರಲು ಸ್ಥಳೀಯರು ಬಂದಿದ್ದರು.
ಆದರೆ ಟ್ರೈನ್ ಬರುವುದಕ್ಕೆ ಇನ್ನೂ ಸಹ ಸಮಯ ಇದ್ದ ಕಾರಣಕ್ಕೆ ಮೂವರು ಸಹ ವಾಕ್ ಮಾಡಲು ತೆರಳಿದ್ದಾರೆ. ರೈಲ್ವೆ ಮೇಲ್ಸೇತುವೆ ಕೆಳಗೆ ವಾಕ್ ಮಾಡುತ್ತಿದ್ದಾಗ ಬೈಕ್ನಲ್ಲಿ ಬಂದ ಮೂವರು ಮಾರಕಾಸ್ತ್ರ ತೋರಿಸಿ ಮೂವರನ್ನ ದರೋಡೆ ಮಾಡಿದ್ದಾರೆ. ಬೆಂಗಳೂರಿನ ಇಬ್ಬರು ಹಾಗೂ ಅವರ ಜೊತೆಗೆ ಬಂದಿದ್ದ ವ್ಯಕ್ತಿಯ 3 ಮೊಬೈಲ್. 5 ಸಾವಿರ ರೂ. ನಗದು, ಪರ್ಸ್ ನಲ್ಲಿದ್ದ ವಾಹನ ಪರವಾನಗಿ, ಎಟಿಎಂ. ಮೊದಲಾದ ದಾಖಲಾತಿ ದೋಚಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಕೋಟೆ ಪೊಲೀಸ್ ಸ್ಟೇಷನ್ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಜಾಹಿರಾತು ಲಿಂಕ್ ಕ್ಲಿಕ್ ಮಾಡಿ ಬರೋಬ್ಬರಿ 52 ಲಕ್ಷ ರೂಪಾಯಿ ಕಳವು
ಶಿವಮೊಗ್ಗ: ನಗರದ ಉದ್ಯಮಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಎಂಬ ಜಾಹಿರಾತು ಲಿಂಕ್ ಕ್ಲಿಕ್ ಮಾಡಿ ಬರೋಬ್ಬರಿ 52 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ ಬಂದ ಜಾಹೀರಾತು ಗಮನಿಸಿದ ಉದ್ಯಮಿ ಹಣ ಹೂಡಿಕೆ ಮಾಡಿದ್ದರು. ಇನ್ ಸ್ಟಾಗ್ರಾಂನಲ್ಲಿದ್ದ ಲಿಂಕ್ ಗೆ ಜಾಯಿನ್ ಆಗಿ ವಾಟ್ಸ್ಯಾಪ್ ಗ್ರೂಪ್ಗೆ ಜಾಯಿನ್ ಆಗಿದ್ದಾರೆ. ಅಲ್ಲಿನ ಆ್ಯಪ್ ಒಂದನ್ನ ಡೌನ್ ಲೋಡ್ ಮಾಡಿಕೊಂಡು ಅದಕ್ಕೆ ಹಂತ ಹಂತವಾಗಿ 52.60 ಲಕ್ಷ ರೂ. ಹೂಡಿಕೆ ಮಾಡಿದ್ದರು. ಆ ಬಳಿಕ ಲಾಭದ ಹಣವನ್ನ ಆ್ಯಪ್ನಿಂದ ತಮ್ಮ ಅಕೌಂಟ್ಗೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗದೇ ಹೋದಾಗ, ಅದು ಮೋಸದ ಜಾಲವೆಂದು ಗೊತ್ತಾಗಿದೆ. ಸದ್ಯ ಈ ಸಂಬಂಧ ಸಿಇಎನ್ ಠಾಣೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.