ಶಿವರಾತ್ರಿ ಸಂಭ್ರಮ!
– ಶಿವರಾತ್ರಿ ಆಚರಣೆಗೆ ದೇವಾಲಯಗಳು ಸಿದ್ಧ..!
– ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಜನರು
– ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧ
NAMMUR EXPRESS NEWS
ಬೆಂಗಳೂರು: ಮಹಾ ಶಿವರಾತ್ರಿ ಹಬ್ಬಕ್ಕೆ ಶಿವನ ದೇವಸ್ಥಾನಗಳಲ್ಲಿ ಹಬ್ಬದ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿದೆ. ಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡಿ ಶಿವ ಸ್ಮರಣೆ ಮಾಡಲು ಭಕ್ತರು ಕೂಡ ಸಜ್ಜಾಗಿದ್ದಾರೆ.
ಸಿಂಗಾರ ಗೊಂಡ ಶಿವನ ದೇಗುಲಗಳು!:
ಶಿವರಾತ್ರಿಯ ಪ್ರಯುಕ್ತ ಈಗಾಗಲೇ ಬಹುತೇಕ ಈಶ್ವರ ದೇಗುಲಗಳನ್ನು ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗುತ್ತಿದೆ. ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಈಶ್ವರ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಶಿವನಿಗೆ ವಿಶೇಷ ಪೂಜೆ: ಎಲ್ಲಾ ಶಿವ ದೇವಾಲಯಗಳಲ್ಲಿ ಶಿವಲಿಂಗ ಮೂರ್ತಿಗೆ ವಿವಿಧ ಪೂಜೆ, ಅಭಿಷೇಕ, ರುದ್ರಾಭಿಷೇಕ, ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಮೂಲಕ ಪೂಜೆ, ಮಹಾಮಂಗಳಾರತಿ, ಶಿವನಸಹಸ್ರನಾಮ ಪಠಣ, ಸಂಕೀರ್ತನೆ, ಪುರಾಣ ಪಠಣ, ವೇದಾಂತ ಉಪನ್ಯಾಸ ಜರುಗಲಿವೆ. ಶಿವನ ಆರಾಧಕರು ಜಾಗರಣೆ ನಡೆಸಲು ವಿವಿಧ ದೇವಸ್ಥಾನಗಳಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು!
ಕೆಲ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯಗಳು, ಭಜನೆ, ಸಂಗೀತ ಕಛೇರಿ, ಪೌರಾಣಿಕ ನಾಟಕ ಪ್ರದರ್ಶನ ಅಹೋರಾತ್ರಿ ಶಿವನಾಮ ಜಪ, ಸಂಗೀತೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಖರೀದಿ ಭರಾಟೆ ಜೋರು
ಹಬ್ಬದ ಮುನ್ನಾದಿನವಾದ ಗುರುವಾರ ಎಲ್ಲೆಡೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಶಿವಪೂಜೆಗೆ ಪ್ರಧಾನವಾಗಿ ಬಳಸುವ ಬಿಲ್ವಪತ್ರೆ, ವಿಭೂತಿ, ಹೂವು, ಹಣ್ಣುಗಳ ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ.
ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧ!
ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಕಾರಣ ಮಾಂಸ ಮಾರಾಟ ಅಂಗಡಿಗಳ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ.