ಈಜು ಕಲಿಯಲು ಹೋದಾಗ ದುರ್ಘಟನೆ
• ನೀರಿನಲ್ಲಿ ಮುಳುಗಿ ತಂದೆ-ಮಕ್ಕಳು ದುರ್ಮರಣ
– ಚಿನ್ನ ಕದ್ದು ಗೋವಾದಲ್ಲಿ ಪಾರ್ಟಿ ಮಾಡುತ್ತಿದ್ದ ನಟಿಯ ಬಂಧನ
– ರೈಲ್ವೆ ಹಳಿ ದಾಟುವಾಗ ರೈಲು ಗಾಡಿ ಡಿಕ್ಕಿ ಮಹಿಳೆ ಸಾವು
– ತುಂಗಭದ್ರಾ ನದಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಬಾಲಕ
NAMMUR EXPRESS NEWS
ಬೆಳಗಾವಿ : ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನಡೆದಿದೆ. ಕಲ್ಲಪ್ಪ ಬಸಪ್ಪ ಗಾಣಿಗೇರ (36) ಮತ್ತು ಮಕ್ಕಳಾದ ಮನೋಜ್ ಕಲ್ಲಪ್ಪ ಗಾಣಿಗೇರ (11) ಮತ್ತು ಮದನ ಕಲ್ಲಪ್ಪ ಗಾಣಿಗೇರ (9) ಮೃತಪಟ್ಟವರು. ಮೇತ್ರಿ ಎಂಬವರ ಜಮೀನಿನಲ್ಲಿ ಕೃಷಿ ಹೊಂಡ ಇದೆ. ಇಲ್ಲಿ ಮಕ್ಕಳಿಗೆ ಈಜು ಕಲಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಸರಕಾರಿ ಶಾಲೆಯ ಶಿಕ್ಷಕರಾಗಿದ್ದ ಕಲ್ಲಪ್ಪ ಗಾಣಿಗೇರ ಅವರು ನಿಡಗುಂದಿ ಗ್ರಾಮದ ಹುಕ್ಕೇರಿ ತೋಟದ ಮಗದುಮ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರಿಗೆ ಈಜಲು ಹೋದ ಸಂದರ್ಭದಲ್ಲಿ ಈ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಚಿನ್ನ ಕದ್ದು ಗೋವಾದಲ್ಲಿ ಪಾರ್ಟಿ ಮಾಡುತ್ತಿದ್ದ ನಟಿಯ ಬಂಧನ
ಕೆಜಿ ಕೆಜಿ ಚಿನ್ನ ಕದ್ದು ಗೋವಾದಲ್ಲಿ ಪಾರ್ಟಿ ಮಾಡುತ್ತಿದ್ದ ತೆಲುಗು ನಟಿ ಸೌಮ್ಯ ಶೆಟ್ಟಿ ಪೊಲೀಸರ ನಿದ್ದೆಗೆಡಿಸಿದ್ದಾಳೆ. ಪರಿಚಿತರ ಮನೆಯಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಕದ್ದು ಸೌಮ್ಯ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ತೆಲುಗು ಚಿತ್ರೋದ್ಯಮದಲ್ಲಿ ಉದಯೋನ್ಮುಖ ನಟಿಯಾಗಿರುವ ಸೌಮ್ಯ, ನಿವೃತ್ತ ಅಂಚೆ ಇಲಾಖೆಯ ನೌಕರರ ಮಗಳ ಜೊತೆ ಸ್ನೇಹವಿತ್ತು. ಆಗಾಗ್ಗೆ ಮನೆಗೆ ಬರುತ್ತಿದ್ದಳು ಸೌಮ್ಯ. ಆ ಮನೆಯಲ್ಲಿ ಬಂಗಾರ ಇರುವುದು ಗೊತ್ತಾಗಿ, ವಾಶ್ ರೂಮ್ ಗೆ ಹೋಗುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದಳು ಎಂದು ದೂರು ನೀಡಲಾಗಿದೆ. ತಮ್ಮ ಮನೆಗೆ ಬರುತ್ತಿದ್ದ ಸೌಮ್ಯ, ಆಗಾಗ್ಗೆ ಚಿನ್ನ ಕಳ್ಳತನ ಮಾಡುವುದು ಮನೆಯವರ ಗಮನಕ್ಕೆ ಬಂದಿಲ್ಲ. ಮದುವೆಗೆ ಹೋಗಲು ಆಭರಣ ಹುಡುಕಿದಾಗ ಮಾತ್ರ ಕಳ್ಳತನವಾಗಿರೋದು ಗೊತ್ತಾಗಿದೆ. ಕೂಡಲೇ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಸೌಮ್ಯ ತಮ್ಮ ಮನೆಗೆ ಬರುತ್ತಿದ್ದ ವಿಚಾರವನ್ನೂ ತಿಳಿಸಿದ್ದಾರೆ. ಕೊನೆಗೂ ಸೌಮ್ಯಳನ್ನು ಪತ್ತೆ ಮಾಡಿರೋ ವಿಶಾಖಪಟ್ಟಣಂ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.
ರೈಲ್ವೆ ಹಳಿ ದಾಟುವಾಗ ರೈಲು ಗಾಡಿ ಡಿಕ್ಕಿ ಮಹಿಳೆ ಸಾವು
ಯಾದಗಿರಿ: ರೈಲ್ವೆ ಹಳಿ ದಾಟುವಾಗ ರೈಲು ಗಾಡಿ ಡಿಕ್ಕಿಯಾಗಿ ಮಹಿಳೆಯೊಬ್ಬರು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಪಗಲಾಪುರ ಗ್ರಾಮದ ಮಲ್ಲಮ್ಮ ( 65) ಮೃತಪಟ್ಟ ದುರ್ದೈವಿ. ಬೆಳಗ್ಗಿನ ಜಾವ 5.30 ಗಂಟೆಗೆ ಚೆನೈ- ಮುಂಬೈ ಸೂಪರ್ ಎಕ್ಸ್ಪ್ರೆಸ್ ರೈಲಿನಡಿಗೆ ಬಿದ್ದು ಅವರು ಮೃತಪಟ್ಟಿದ್ದಾರೆ. ಪಗಲಾಪುರ ಗ್ರಾಮದ ನಿವಾಸಿ ಮಲ್ಲಮ್ಮ ಅವರು ತಮ್ಮ ಮಗನ ಜೊತೆ ಮುಂಬೈಗೆ ತೆರಳುತ್ತಿದ್ದರು. ಅವರು ರೈಲ್ವೆ ಸೇತುವೆ ಮೂಲಕ ಪ್ಲಾಟ್ ಫಾರ್ಮ್ ನಂಬರ್ 2ಕ್ಕೆ ತೆರಳಬೇಕಾಗಿತ್ತು. ಆದರೆ, ಮೇಲ್ಸೇತುವೆ ಹತ್ತಿ ಇಳಿಯುವುದು ತಡವಾಗುತ್ತದೆ ಎಂಬ ಕಾರಣಕ್ಕಾಗಿ ಅವರು ರೈಲ್ವೇ ಹಳಿ ದಾಟಿದ್ದರು. ಆಗ ಪ್ಲಾಟ್ ಫಾರ್ಮ್ ನಂಬರ್ 2ರಲ್ಲಿ ರೈಲು ಬಂದೇ ಬಿಟ್ಟಿದ್ದು, ಅವರಿಗೆ ಡಿಕ್ಕಿ ಹೊಡೆದಿದೆ. ರೈಲು ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರ ಮಾಡಲಾಗಿದೆ.
ತುಂಗಭದ್ರಾ ನದಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಬಾಲಕ
ವಿಜಯ ನಗರ : ಕುರವತ್ತಿ ಜಾತ್ರೆಗೆ ಬಂದಿದ್ದ ಬಾಲಕನೊಬ್ಬ ಕುಟುಂಬದ ಇತರರನ್ನು ಸೇರಿಕೊಳ್ಳುವ ಆತುರದಲ್ಲಿ ತುಂಗಭದ್ರಾ ನದಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ. ಬ್ಯಾಡಗಿ ತಾಲೂಕು ಬೀಸಲಹಳ್ಳಿ ಗ್ರಾಮದ ಮನು ಮುಚ್ಚಟ್ಟಿ ಎಂಬ 13 ವರ್ಷದ ಬಾಲಕನೇ ಮೃತಪಟ್ಟವನು. ಹಡಗಲಿ ತಾಲೂಕಿನ ಕುರವತ್ತಿಯಲ್ಲಿ ಜಾತ್ರೆ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಲೆಂದು ಕುಟುಂಬಿಕರ ಜತೆಗೆ ಬಾಲಕ ಬಂದಿದ್ದ. ಕುರವತ್ತಿ ಜಾತ್ರೆಗೆ ಬಂದಾಗ ತುಂಗಭದ್ರಾ ನದಿಯ ಮತ್ತೊಂದು ತೀರದಲ್ಲಿ ಆತನ ಕುಟುಂಬಿಕರು ಇದ್ದರು. ಆತ ದೋಣಿಯ ಮೂಲಕ ಅಲ್ಲಿಗೆ ಹೋಗಬೇಕಾಗಿತ್ತು.
ಆತ ಚಿಕ್ಕ ಕುರುವತ್ತಿ ಬಳಿಯಿದ್ದ ಕುಟುಂಬಸ್ಥರತ್ತ ತೆರಳಲು ಬೋಟು ಹತ್ತುವ ಜಾಗಕ್ಕೆ ಬಂದಾಗ ಬೋಟಿನ ಗುಂಡಿಯ ಬಳಿ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಬೋಟ್ ಬಂದು ನಿಲ್ಲುವ ಜಾಗ ಸ್ವಲ್ಪ ಆಳವಾಗಿರುತ್ತದೆ. ಹುಡುಗ ಆ ಜಾಗಕ್ಕೆ ಬಂದಾಗ ಅಲ್ಲೇ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ. ಬೋಟು ನಿಲ್ಲುವ ಜಾಗದಲ್ಲಿ ಇರುವ ಆಳವಾಗಿರುವ ಜಾಗದ ಬಗ್ಗೆ ಅರಿವಿಲ್ಲದೆ ಹುಡುಗ ಅಲ್ಲಿ ಹೋಗಿ ನೀರಿಗೆ ಬಿದ್ದಿದ್ದಾನೆ. ಅಪಾಯದ ಸ್ಥಳದಲ್ಲಿ ತಾಲೂಕು ಆಡಳಿತ ನಾಮಫಲಕ ಹಾಕಬೇಕಿತ್ತು. ಆದರೆ, ಆ ರೀತಿ ಹಾಕದೆ ಇರುವುದರಿಂದ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ತಾಲೂಕು ಆಡಳಿತ ವಿರುದ್ಧ ಕುಟುಂಬಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.