- 3 ವಾರದೊಳಗೆ ದಿನಾಂಕ ಪ್ರಕಟ
- ಗ್ರಾಮಗಳಲ್ಲಿ ರಾಜಕೀಯ ಶುರು
ಬೆಂಗಳೂರು: ಮುಂದಿನ 3 ವಾರಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಈ ನಡುವೆ ಕೋವಿಡ್ ಪರಿಸ್ಥಿತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಡಾ.ಬಿ.ಬಸವರಾಜು ರಾಜ್ಯದ ಎಲ್ಲಾ ಡೀಸಿ, ಎಸ್ಪಿ ಹಾಗೂ ಜಿಪಂ ಸಿಇಒಗಳ ಜತೆ ವೀಡಿಯೋ ಸಂವಾದ ನಡೆಸಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಜಿಲ್ಲಾಡಳಿತಗಳು ಸಜ್ಜುಗೊಂಡಿದ್ದು, ತಾಲೂಕು ಆಡಳಿತಗಳಿಗೆ ಸಿದ್ಧತೆಗೆ ಸೂಚನೆ ನೀಡಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿಯಾಗದಂತೆ ಹಾಗೂ ಸಿಬ್ಬಂದಿಗಳ ಕೊರತೆಯಾಗದಂತೆ ಯೋಜಿಸಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಗ್ರಾಮ ಪಂಚಾಯ್ತಿಯು ಪ್ರಜಾ ಪ್ರಭುತ್ವದ ಮೂಲ ಅಡಿಪಾಯವಾಗಿದೆ. ಹಾಗಾಗಿ ಎಲ್ಲಾ ಸೂಕ್ಷ್ಮ ವಿಷಯಗಳ ಮೇಲೂ ಹೆಚ್ಚಿನ ಗಮನಹರಿಸಿ, ಯಾವುದೇ ಲೋಪಗಳಿಲ್ಲದಂತೆ ನ್ಯಾಯಯುತವಾಗಿ ಚುನಾವಣೆ ನಡೆಸಲು ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕು ಎಂದು ಸೂಚಿಸಿದ್ದಾರೆ. ಇದರಿಂದಾಗಿ ಗ್ರಾಮ ಪಂಚಾಯತ್ ಅಖಾಡ ಸಿದ್ಧಗೊಂಡಂತಾಗಿದೆ. ಹಳ್ಳಿ ರಾಜಕೀಯ ಗರಿಗೆದರಲಿದೆ.
ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ 3 ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕಳೆದ ಶುಕ್ರವಾರ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಚುನಾವಣೆಗೆ ಸಿದ್ಧತೆ ನಡೆಸಿದೆ.