ಹಣಕ್ಕಾಗಿ ಬಾಲಕಿಯ ತೊಡೆಗೆ ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟ ದೊಡ್ಡಮ್ಮ
– ಕುಡಿದ ಮತ್ತಿನಲ್ಲಿ ಕೊಡಲಿಯಿಂದ ಕೊಚ್ಚಿ ಪತ್ನಿಯ ಭೀಕರ ಕೊಲೆ
– ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಕೊಲೆ
NAMMUR EXPRESS NEWS
ತುಮಕೂರು: ದೊಡ್ಡಮ್ಮನನ್ನೂ ಅಮ್ಮನೆಂದೇ ಪ್ರೀತಿಸುವ ಜನ ನಾವು. ಕಷ್ಟಗಳನ್ನು ಅವರ ಬಳಿಯೂ ಹೇಳಿ ಹಗುರಾಗುತ್ತೇವೆ. ಇಂಥ ಸಮಾಜದಲ್ಲೂ ರಾಕ್ಷಸಿ ದೊಡ್ಡಮ್ಮನಂಥವರು ಇರುತ್ತಾರೆ ಎನ್ನುವುದಕ್ಕೆ ತುಮಕೂರು ಜಿಲ್ಲೆಯಲ್ಲಿ ನಡೆದ ಈ ಅಮಾನವೀಯ ಘಟನೆಯೇ ಸಾಕ್ಷಿ. ಇಲ್ಲಿ ತಾಯಿ ಇಲ್ಲದೆ ಅನಾಥೆಯಾಗಿರುವ ಬಾಲಕಿಯೊಬ್ಬಳು ದೊಡ್ಡಮ್ಮನ ರಾಕ್ಷಸಿ ಕೃತ್ಯದಿಂದ ಕಂಗಾಲಾಗಿ ನೋವುಣ್ಣುತ್ತಿದ್ದಾಳೆ. ತಾಯಿ ಇಲ್ಲದ ಬಾಲಕಿಯನ್ನು ಅಮ್ಮನಂತೆ ಸಾಕಬೇಕಾಗಿದ್ದ ಈ ಮಹಿಳೆ ಬ್ಯಾಂಕ್ ನಲ್ಲಿದ್ದ ಹಣಕ್ಕಾಗಿ ಆ ಹುಡುಗಿಯನ್ನೇ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟಿದ್ದಾಳೆ.
ಈ ಘಟನೆ ನಡೆದಿರುವುದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ. ನಂಜಮ್ಮ ಎಂಬ ದುರುಳ ಮಹಿಳೆಯೇ ಈ ಕೃತ್ಯವನ್ನು ಎಸಗಿದವಳು. ಇದೇ ರೀತಿಯ ನಾಟಕದ ಭಾಗವಾಗಿ ಕೆಲವು ದಿನಗಳ ಹಿಂದೆ ಲಕ್ಷ್ಮೀಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಮನೆಗೆ ಬಂದ ಲಕ್ಷ್ಮೀ ಜತೆಗೆ ಬ್ಯಾಂಕ್ನಲ್ಲಿರುವ ಹಣದ ಬಗ್ಗೆ ಮಾತನಾಡಿದ್ದಾಳೆ. ಜಂಟಿ ಖಾತೆಯಲ್ಲಿರುವ ಹಣವನ್ನು ಬಿಡಿಸಿ ಕೊಡು ಎಂದು ಹೇಳಿದ್ದಾಳೆ. ಬಾಲಕಿ ಒಪ್ಪದೆ ಇದ್ದಾಗ ಆಕೆಯ ತೊಡೆಗೆ ಬಿಸಿ ಬಿಸಿ ಇಸ್ತ್ರಿ ಪೆಟ್ಟಿಗೆ ಇಟ್ಟಿದ್ದಳು.
– ಕುಡಿದ ಮತ್ತಿನಲ್ಲಿ ಕೊಡಲಿಯಿಂದ ಕೊಚ್ಚಿ ಪತ್ನಿಯ ಭೀಕರ ಕೊಲೆ
ಯಾದಗಿರಿ : ತಾಲೂಕಿನ ಮಲ್ಹಾರ್ ತಾಂಡದಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಸೋನಿಬಾಯಿ (48) ಎಂಬಾಕೆಯ ಬರ್ಬರ ಕೊಲೆಯಾಗಿತ್ತು. ಇನ್ನೊಂದು ಕಡೆ ರಕ್ತದ ಮಡುವಿನಲ್ಲಿ ಬಿದ್ದು ಸೋನಿಬಾಯಿ ಮಗ ಅರ್ಜುನ್(17) ಒದ್ದಾಡುತ್ತಿದ್ದ. ಇದನ್ನು ನೋಡಿದ ಇಡೀ ತಾಂಡದ ನಿವಾಸಿಗಳು ಅಕ್ಷರಶ ಬೆಚ್ಚಿ ಬಿದ್ದಿದ್ದಾರೆ. ಇನ್ನು ಇದೆ ಸೋನಿಬಾಯಿ ಪತಿ ಮಲ್ಯಾ ರಾಠೋಡ್ ಕೂಡ ಮನೆ ಮುಂದೆ ಇರುವ ಬೇವಿನ ಮರಕ್ಕೆ ಕೊರಳೊಡ್ಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದ. ಇದನ್ನು ನೋಡಿದ ವ್ಯಕ್ತಿಯೋರ್ವ ಕೂಡಲೇ ಮಲ್ಯಾನನ್ನ ನೇಣು ಕುಣಿಕೆಯಿಂದ ಕೆಳಗೆ ಇಳಿಸುತ್ತಾನೆ. ತಕ್ಷಣ ಗ್ರಾಮಸ್ಥರು ವಿಷಯ ತಿಳಿದು ಮಲ್ಯಾನನ್ನ ಆಸ್ಪತ್ರೆಗೆ ದಾಖಲಿಸುತ್ತಾರೆ. ಇನ್ನು ಸೋನಿಬಾಯಿ ಪುತ್ರ ಅರ್ಜುನ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದನ್ನ ಕಂಡ ಗ್ರಾಮಸ್ಥರು ಕೂಡಲೇ ಅರ್ಜುನ್ ಬಳಿ ಘಟನೆ ಬಗ್ಗೆ ಕೇಳುತ್ತಾರೆ.
ಆಗ ಅರ್ಜುನ್ ‘ತಂದೆ ಮಲ್ಯಾನೇ, ತಾಯಿಗೆ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಹೇಳುತ್ತಾನೆ. ತಾಯಿಯನ್ನ ರಕ್ಷಣೆ ಮಾಡಲು ಹೋಗಿದ್ದ ನನಗೂ ಕೊಡಲಿಯಿಂದ ಹೊಡೆದು ಗಾಯಗೊಳಿಸಿದ್ದಾನೆ. ಆದ್ರೆ, ತಾಯಿ ಸೋನಿಬಾಯಿಗೆ ಎದೆ ಮತ್ತು ತಲೆ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದ ಕಾರಣಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಾನು ಮಾತ್ರ ಪ್ರಾಣ ಉಳಿಸಿಕೊಳ್ಳಲು ಹೊರಗಡೆ ಓಡಿ ಬಂದಿದ್ದೆನೆ ಎಂದು ಹೇಳುತ್ತಾನೆ. ತಕ್ಷಣ ಅರ್ಜುನನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಒಟ್ಟಿನಲ್ಲಿ ಪತಿ, ಕುಡಿದ ಮತ್ತಿನಲ್ಲಿ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಅಡ್ಡ ಬಂದಿದ್ದ ಮಗನಿಗೆ ಚಟ್ಟ ಕಟ್ಟಬೇಕು ಎಂದು ಅಂದುಕೊಂಡಿದ್ದ. ಆದ್ರೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದೀಗ ಪತ್ನಿಯನ್ನ ಕೊಂದ ಪತಿ ಜೈಲಿಗೆ ಹೋಗುವುದು ಮಾತ್ರ ಗ್ಯಾರಂಟಿ. ಆದ್ರೆ, ಸೋನಿಬಾಯಿ ಹಾಗೂ ಮಲ್ಯಾನ ನಾಲ್ಕು ಜನ ಮಕ್ಕಳು ಅನಾಥರಾಗಿದ್ದಾರೆ.
– ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಕೊಲೆ
ಲಿಂಗಸೂಗುರು: ಕಲ್ಲಿನಿಂದ ಜಜ್ಜಿ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಪಟ್ಟಣದ ಬಸ್ ನಿಲ್ದಾಣ ಹಿಂದಿನ ಎನ್.ಜಿ.ಒ. ಬಡಾವಣೆಯಲ್ಲಿ ರಾತ್ರಿ ನಡೆದಿದೆ. ಯರಡೋಣ ನಿವಾಸಿ ವಿಜಯಲಕ್ಷ್ಮೀ ಸೋಮಪ್ಪ (32) ಕೊಲೆಯಾದ ಮಹಿಳೆ. ಅಂಕುಶದೊಡ್ಡಿ ಗ್ರಾಮದ ವ್ಯಕ್ತಿಗೆ ವಿಜಯಲಕ್ಷ್ಮೀಯನ್ನು ವಿವಾಹ ಮಾಡಿಕೊಡಲಾಗಿತ್ತು. ಎರಡು ವರ್ಷಗಳ ಹಿಂದೆ ಪತಿ ಮೃತಪಟ್ಟಿದ್ದ ಕಾರಣ ತವರು ಮನೆ ಯರಡೋಣ ಗ್ರಾಮದಲ್ಲಿ ಮಹಿಳೆ ವಾಸಿಸುತ್ತಿದ್ದಳು. ಈಗ ಮಹಿಳೆ ಕೊಲೆಗೀಡಾಗಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಲಿಂಗಸೂಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.