ಅಂಬ್ಯುಲೆನ್ಸ್ ವಾಹನವನ್ನು ತಡೆದು ಚಾಲಕಗೆ ಹಲ್ಲೆ ನಡೆಸಿದ ಕಾರು ಚಾಲಕ
– ಸ್ಕೂಟರ್ ಮರಕ್ಕೆ ಡಿಕ್ಕಿ ಹೊಡೆದು ಸವಾರ ಸಾವು
– ಭಟ್ಕಳದಲ್ಲಿ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ
– ಮಂಗಳೂರು: ವೃದ್ದ ಮಾವನಿಗೆ ಹಲ್ಲೆ ಸೊಸೆ ಬಂಧನ
NAMMUR EXPRESS NEWS
ಬೆಳ್ತಂಗಡಿ: ಅಂಬ್ಯುಲೆನ್ಸ್ ವಾಹನಕ್ಕೆ ಕಾರು ಅಡ್ಡ ನಿಲ್ಲಿಸಿ ಅಂಬ್ಯುಲೆನ್ಸ್ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಲಾಯಿಲ ಜಂಕ್ಷನ್ನಿನಲ್ಲಿ ನಡೆದಿದೆ. ಗಾಯಗೊಂಡ ಅಂಬ್ಯುಲೆನ್ಸ್ ಚಾಲಕನನ್ನು ಕಡಬ ತಾಲೂಕು, ಸುಬ್ರಹ್ಮಣ್ಯ ಗ್ರಾಮದ ವಿದ್ಯಾನಗರ ನಿವಾಸಿ ರಕ್ಷಿತ್ ಕುಮಾರ್ (27) ಎಂದು ಹೆಸರಿಸಲಾಗಿದೆ. ರಕ್ಷಿತ್ ಅವರು ಅಂಬ್ಯುಲೆನ್ಸ್ ವಾಹನದಲ್ಲಿ ಬೆಳ್ತಂಗಡಿಯಿಂದ ಉಜಿರೆ ಕಡೆ ಹೋಗುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಕೆಎ-51 ಎಂಡಿ 4631 ನೋಂದಣಿ ಸಂಖ್ಯೆಯ ಕಾರನ್ನು ಆದರ ಚಾಲಕ ಅಂಬ್ಯೂಲೆನ್ಸ್ ವಾಹನಕ್ಕೆ ಅಡ್ಡ ನಿಲ್ಲಿಸಿ, ಕಾರಿನ ಚಾಲಕ ಮತ್ತು ಓರ್ವ ಮಹಿಳೆ ಕಾರಿನಿಂದ ಇಳಿದು ಬಂದು ರಕ್ಷಿತ್ ಅವರಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಅಂಬ್ಯುಲೆನ್ಸ್ ವಾಹನಕ್ಕೆ ಸುಮಾರು 3 ಸಾವಿರ ರೂಪಾಯಿಯಷ್ಟು ಹಾನಿ ಮಾಡಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ರಕ್ಷಿತ್ ಕುಮಾರ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2024 ಕಲಂ 504, 341, 323, 427 33 34 33 ಪ್ರಕರಣ ದಾಖಲಾಗಿದೆ.
– ಸ್ಕೂಟರ್ ಮರಕ್ಕೆ ಡಿಕ್ಕಿ ಹೊಡೆದು ಸವಾರ ಸಾವು
ಬಂಟ್ವಾಳ : ಸ್ಕೂಟರ್ ಮರಕ್ಕೆ ಡಿಕ್ಕಿ ಹೊಡೆದು ಸವಾರ ದಾರುಣವಾಗಿ ಮೃತಪಟ್ಟ ಘಟನೆ ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿ ಮುಂಜಾನೆ ವೇಳೆ ನಡೆದಿದೆ. ಮೃತ ಸ್ಕೂಟರ್ ಸವಾರನನ್ನು ಅಮ್ಮಾಡಿ ನಿವಾಸಿ ಅಕ್ಷಿತ್ (25) ಎಂದು ಗುರುತಿಸಲಾಗಿದೆ. ಅಕ್ಷಿತ್ ಅವರು ಮಂಗಳೂರಿನಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಮಾರಿಪಳ್ಳದಲ್ಲಿ ಚಾಲಕನ ನಿಯಂತ್ರಣ ಮೀರಿ ಸ್ಕೂಟರ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅಕ್ಷಿತ್ ಅವರನ್ನು ಸ್ಥಳೀಯರು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತರ ಭಾವ ವಸಂತ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಭಟ್ಕಳದಲ್ಲಿ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ
ಭಟ್ಕಳದಲ್ಲಿ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ, ಬೈಕ್ ನ ಬ್ಯಾಟರಿಗೆ ಹೊತ್ತಿದ ಬೆಂಕಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು, ಬೆಂಕಿ ನಂದಿಸಿದ ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು, ಮುಂಡಳ್ಳಿಯ ನಾಗರಾಜ್ ಮೊಗೇರ್ ಎಂಬುವವರ ಬೈಕ್. ಭಟ್ಕಳ ಶಹರ ಠಾಣಾ ವ್ಯಾಪ್ತಿಯಲ್ಲಿ ಘಟನೆ.
– ಮಂಗಳೂರು: ವೃದ್ದ ಮಾವನಿಗೆ ಹಲ್ಲೆ ಸೊಸೆ ಬಂಧನ
ಮಂಗಳೂರು: ಕುಲಶೇಖರದ ಹಾಲಿನ ಡೇರಿ ಬಳಿಯ ಮನೆಯೊಂದರಲ್ಲಿ 87 ವರ್ಷದ ಮಾವನಿಗೆ ಸೊಸೆಯು ವಾಕಿಂಗ್ ಸ್ಟಿಕ್ನಿಂದ ಹಲ್ಲೆ ನಡೆಸಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಆರೋಪಿಯಾಗಿರುವ ಮೆಸ್ಕಾಂ ಉದ್ಯೋಗಿ ಉಮಾಶಂಕರಿ (47) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪದ್ಮನಾಭ ಹಲ್ಲೆಗೊಳಗಾದವರು, ಅವರ ಮಗ ಪ್ರೀತಮ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪದ್ಮನಾಭ ಅವರು ಸೊಸೆಯೊಂದಿಗೆ (ಮಗನ ಪತ್ನಿ) ಕುಲಶೇಖರದ ಮನೆಯಲ್ಲಿ ವಾಸವಿದ್ದಾರೆ.
‘ನೀವು ಯಾಕೆ ಈ ಮನೆಯಲ್ಲಿದ್ದೀರಿ’ ಎಂದು ಸೊಸೆ ಆಗಾಗ ನನ್ನ ಜೊತೆ ತಗಾದೆ ತೆಗೆಯುತ್ತಿದ್ದಳು. ಧರಿಸಿದ್ದ ಅಂಗಿಯನ್ನು ತೆಗೆದು ಸೋಫಾದ ಮೇಲೆ ಇಟ್ಟಿದ್ದಕ್ಕೆ ಜಗಳ ತೆಗೆದು, ವಾಕಿಂಗ್ ಸ್ಟಿಕ್ನಿಂದ ಕಾಲು, ಸೊಂಟದ ಮೇಲೆ ಹೊಡೆದಿದ್ದಾಳೆ. ಸೋಫಾ ಸೆಟ್ನತ್ತ ದೂಡಿ, ‘ಸತ್ತು ಹೋಗು’ ಎಂದು ತುಳುವಿನಲ್ಲಿ ಬೈದಿದ್ದಾಳೆ’ ಎಂದು ಸಂತ್ರಸ್ತ ಪದ್ಮನಾಭ ಅವರು ಆರೋಪಿಸಿದ್ದಾರೆ. ‘ಹಲ್ಲೆಯಿಂದ ಅವರ ಬಲ ಮೊಣಕೈನಲ್ಲಿ ಹಾಗೂ ಎಡಕಣ್ಣಿನ ಹುಬ್ಬಿನ ಬಳಿ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೊಸೆ ತನ್ನನ್ನು ಕೊಲ್ಲಬಹುದೆಂಬ ಭಯದಿಂದ ಪದ್ಮನಾಭ ಅವರು ಮಾರ್ನಮಿಕಟ್ಟೆಯಲ್ಲಿರುವ ಸೋದರ ರಮೇಶ್ ಮನೆಗೆ ಹೋಗಿದ್ದರು. ಬಳಿಕ ಮೂಡುಬಿದಿರೆಯಲ್ಲಿರುವ ಮಗಳು ಪ್ರಿಯಾಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಹಲ್ಲೆಯ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಆ ವಿಡಿಯೊವನ್ನು ಪ್ರೀತಮ್ ತನ್ನ ಸೋದರಿ ಪ್ರಿಯಾ ಅವರಿಗೆ ಕಳುಹಿಸಿದ್ದರು. ವೃದ್ಧ ತಂದೆಗೆ ಅತ್ತಿಗೆ ಉಮಾಶಂಕರಿ ಹಲ್ಲೆ ನಡೆಸಿದ ಬಗ್ಗೆ ಪ್ರಿಯಾ ಅವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಶಸ್ತ್ರ ಬಳಸಿ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.