ರಾಮೇಶ್ವರಂ ಕೆಫೆ ಸ್ಫೋಟ: ಶಂಕಿತ ಉಗ್ರನ ಬಂಧನ
– ಬಳ್ಳಾರಿಯಲ್ಲಿ ಬಂಧನದ ಮಾಹಿತಿ: ಏನಿದು ಕೇಸ್?
– ಸ್ಫೋಟದಲ್ಲಿ ಕನಿಷ್ಠ 9 ಮಂದಿ ಗಾಯ: ಮತ್ತಷ್ಟು ತನಿಖೆ
NAMMUR EXPRESS NEWS
ದೆಹಲಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಒಬ್ಬ ಶಂಕಿತ ಆರೋಪಿಯನ್ನು ಬುಧವಾರ ಬಂಧಿಸಿದೆ ಎಂದು ವರದಿಯಾಗಿದೆ. ಸಿಸಿಟಿವಿಯಲ್ಲಿ ಸಿಕ್ಕಿಬಿದ್ದಿರುವ ವ್ಯಕ್ತಿಯೇ ಈತನೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಳ್ಳಾರಿಯಲ್ಲಿ ಶಂಕಿತ ಆರೋಪಿ ಶಬೀರ್ನನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಏನಿದು ಪ್ರಕರಣ?
ಮಾರ್ಚ್ 1ರಂದು ವೈಟ್ ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಐಇಡಿ ಸ್ಫೋಟದಲ್ಲಿ ಕನಿಷ್ಠ 9 ಮಂದಿ ಗಾಯಗೊಂಡಿದ್ದರು. ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಎನ್ಐಎ ಈ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು. ಬಂಧಿತ ಶಬೀರ್, ಸ್ಪೋಟದ ದಿನದಂದು ಕೆಫೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದ್ದ ಮುಖ್ಯ ಶಂಕಿತನ ಜತೆಗಾರ ಎಂದು ನಂಬಲಾಗಿದೆ. ಬಳ್ಳಾರಿ ಕೌಲ್ ಬಜಾರ್ ಪ್ರದೇಶದ ಆತ ಬುಧವಾರ ಬೆಳಿಗ್ಗೆ ಎನ್ಐಎಗೆ ಬಲೆಗೆ ಬಿದ್ದಿದ್ದಾನೆ. ಸ್ಫೋಟದ ಬಗ್ಗೆ ಶಭೀರ್ಗೆ ಮಾಹಿತಿ ಇದ್ದು ಆತನ ಇತ್ತೀಚಿನ ಪ್ರಯಾಣ ಇತಿಹಾಸದ ಆಧಾರದಲ್ಲಿ ಬಂಧಿಸಲಾಗಿದೆ.
ಸ್ಫೋಟ ಪ್ರಕರಣದ ಜಂಟಿ ತನಿಖೆ ನಡೆಸುತ್ತಿರುವ ಎನ್ಐಎ ಮತ್ತು ಕೇಂದ್ರ ಅಪರಾಧ ದಳವು ಕಳೆದ ವಾರ ಬಳ್ಳಾರಿಯ ಕೌಲ್ ಬಜಾರ್ನಲ್ಲಿ ಒಬ್ಬ ಬಟ್ಟೆ ವ್ಯಾಪಾರಿ ಹಾಗೂ ನಿಷೇಧಿತ ಪಿಎಫ್ಐ ಸದಸ್ಯನನ್ನು ಬಂಧಿಸಿದ್ದವು. ಬಂಧಿತ ಇಬ್ಬರಲ್ಲಿ ನಿಷೇಧಿತ ಪಿಎಫ್ಐ ಸದಸ್ಯ ಈ ಅಪರಾಧ ಸಂಚಿನಲ್ಲಿ ಭಾಗಿಯಾಗಿದ್ದಾನೆ. ಆತ ಕೆಲವು ಭಯೋತ್ಪಾದನಾ ಸಂಘಟನೆಗಳ ಜತೆ ಸಮೀಪದ ನಂಟು ಹೊಂದಿದ್ದಾನೆ. ಕೆಫೆಯಲ್ಲಿ ಬಾಂಬ್ ಇರಿಸಿದಾತ ಸೇರಿದಂತೆ ಅನೇಕ ವ್ಯಕ್ತಿಗಳನ್ನು ಪಿಎಫ್ಐ ಸದಸ್ಯ ಬ್ರೇನ್ವಾಶ್ ಮಾಡಿದ್ದಾನೆ ಎಂದು ತನಿಖಾ ತಂಡಗಳು ಶಂಕಿಸಿವೆ.