ಅರುಣ್ ಪುತ್ತಿಲ ಪರಿವಾರ ಬಿಜೆಪಿ ಜತೆ ಸೇರ್ಪಡೆ!
– ಸಂಸದ ನಳಿನ್ ಕುಮಾರ್ಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಪುತ್ತಿಲ ಹೊಸ ಹೆಜ್ಜೆ
– ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ಸಿಗುತ್ತೆ?
NAMMUR EXPRESS NEWS
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ಅವರು ಇದೀಗ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಇವರಿಗೆ ಕರಾವಳಿಯಲ್ಲಿ ಮಹತ್ವದ ಹೊಣೆ ಸಿಗುವ ಸಾಧ್ಯತೆಗಳಿವೆ. ಕಳೆದ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಗೆ ಗುಡ್ಬೈ ಹೇಳಿ ದಕ್ಷಿಣ ಕನ್ನಡದಲ್ಲಿ ತಮ್ಮದೇ ಸ್ವಂತ ಪುತ್ತಿಲ ಪರಿವಾರ ಸಂಘಟನೆಯನ್ನು ಕಟ್ಟಿಕೊಂಡು ಬಿಜೆಪಿ ಪಾಲಿಗೆ ದುಷ್ಮನ್ ಆಗಿದ್ದ ಪುತ್ತಿಲ ಇಂದು ಸಂಜೆ ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಗೆ ತೆರಳಿದ್ದರು.
ಅಲ್ಲಿ ಸಂಧಾನ ಮಾತುಕತೆ ಬಳಿಕ ಅರುಣ್ ಪುತ್ತಿಲ ಹಾಗೂ ಪರಿವಾರದವರು ಬಿಜೆಪಿಯೊಂದಿಗೆ ವಿಲೀನಗೊಂಡಿದ್ದಾರೆ. ಈ ಸಂಧಾನ ಮಾತುಕತೆ ವೇಳೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿರುವ ಸತೀಶ್ ಕುಂಪಲ, ಮಾಜಿ ಸಚಿವ ಸುನೀಲ್ ಕುಮಾರ್ ಸೇರಿದಂತೆ ಹಲವು ನಾಯಕರು ಇದ್ದರು. ವಿಲೀನದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದು, ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಏನಕ್ಕೆ ಬಂಡಾಯ?
ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಗದೆ ನಳಿನ್ ಕುಮಾರ್ ಕಟೀಲು ಜತೆ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅಂದರೆ, ನಳಿನ್ ಕುಮಾರ್ ಜತೆಗಿನ ವೈಮನಸ್ಸಿನಿಂದಾಗಿ ಬಿಜೆಪಿಯಿಂದ ಹೊರನಡೆದಿದ್ದ ಪುತ್ತಿಲ ಕಳೆದ ಹತ್ತಾರು ಬಾರಿ ಸಂಧಾನದ ಮಾತುಕತೆಗಳು ನಡೆದಿದ್ದರೂ ವಾಪಾಸ್ ಬಿಜೆಪಿಗೆ ಬರುವ ಮನಸ್ಸು ಮಾಡಿರಲಿಲ್ಲ. ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆಗೆ ಪುತ್ತಿಲ ಸ್ಪರ್ಧಿಸುವುದಾಗಿ ಇತ್ತೀಚೆಗೆ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಬಹಿರಂಗ ಹೇಳಿಕೆ ಕೂಡ ನೀಡಿದ್ದರು. ಆದರೆ, ಯಾವಾಗ ಸಂಸದ ನಳಿನ್ ಕುಮಾರ್ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿಲ್ಲ ಎನ್ನುವುದು ಖಚಿತವಾಯಿತೋ ಅದರ ಬೆನ್ನಲ್ಲೇ ಪುತ್ತಿಲ ಅವರು ಬಿಜೆಪಿಗೆ ವಾಪಾಸ್ ಬರುವುದಕ್ಕೆ ನಿರ್ಧಾರ ಮಾಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಅಂದರೆ, ಬಿಜೆಪಿಗೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಬ್ರಿಜೇಶ್ ಚೌಟ ಅವರ ಹೆಸರು ಘೋಷಣೆಯಾದ ಒಂದೇ ದಿನದಲ್ಲಿ ಪುತ್ತಿಲ ಅವರು ಬೆಂಗಳೂರಿನ ಬಿಜೆಪಿ ಕಚೇರಿಗೆ ಪಕ್ಷ ಮರು ಸೇರ್ಪಡೆ ವಿಚಾರವಾಗಿ ತೆರಳಿದ್ದು ಗಮನಾರ್ಹ. ಒಂದುವೇಳೆ, ಪುತ್ತಿಲ ಬಿಜೆಪಿಗೆ ವಾಪಾಸ್ ಬರದಿದ್ದರೆ, ಈ ಬಾರಿಯ ಚುನಾವಣೆಯಲ್ಲಿಯೂ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತಗಳ ವಿಭಜನೆಯಾಗುತ್ತಿತ್ತು. ಅದು ಸಹಜವಾಗಿಯೇ ಪಕ್ಷದ ಫಲಿತಾಂಶದ ಮೇಲೂ ಪರಿಣಾಮ ಬೀರುವ ಅಪಾಯವಿತ್ತು. ಈ ಕಾರಣದಿಂದಲೇ ಬಿಜೆಪಿಯ ದಕ್ಷಿಣ ಕನ್ನಡದ ನಾಯಕರು ಪುತ್ತಿಲ ಅವರನ್ನು ಪತ್ತೆಗೆ ವಾಪಾಸ್ ಕರೆ ತರುವುದಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದು, ಇದೀಗ ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಏಕೆಂದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಜೀವ್ ಮಠಂದೂರು ಸೋಲಿಗೆ ಪುತ್ತಿಲ ಅವರ ಸ್ಪರ್ಧೆಯೇ ಪ್ರಮುಖ ಕಾರಣವಾಗಿತ್ತು.
ಅಧ್ಯಕ್ಷ ಗಾದಿಯಲ್ಲಿ ಪುತ್ತಿಲ!
ಇದೀಗ ಪುತ್ತಿಲ ಅವರಿಗೆ ಬಿಜೆಪಿಯಲ್ಲಿ ಯಾವ ಹುದ್ದೆ ನೀಡಿತ್ತಾರೆ ಎನ್ನುವುದೇ ಬಹುದೊಡ್ಡ ಪ್ರಶ್ನೆ. ಜಿಲ್ಲೆಯ ಏಳು ಮಂಡಲಗಳ ಪೈಕಿ ಬಾಕಿ ಇಟ್ಟಿರುವ ಪುತ್ತೂರು ಮಂಡಲ ಅಧ್ಯಕ್ಷತೆಗೆ ಆಯ್ಕೆ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ. ಇದಕ್ಕೆ ಅರುಣ್ ಪುತ್ತಿಲ ಅವರ ಹೆಸರನ್ನೇ ಸೂಚಿಸುವ ಸಾಧ್ಯತೆ ಇದೆ.