ಕಾರಿಗೆ ಬೆಂಕಿ ಹಚ್ಚಿ ಯುವಕನೋರ್ವನನ್ನು ಭೀಕರ ಕೊಲೆ!
– ಭತ್ತ, ಒಣ ಹುಲ್ಲಿಗೆ ಬೆಂಕಿ ತಗುಲಿ ಭಸ್ಮ
– ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವರ ಸ್ಥಿತಿ ಗಂಭೀರ.!
– ನೇಣು ಬೀಗಿದ ರೀತಿಯಲ್ಲಿ ಶವ ಪತ್ತೆ.!
– ಬೈಕ್ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸಾವು.!
NAMMUR EXPRESS NEWS
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ, ಶಿವಮೊಗ್ಗದ ಯುವಕನೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದ್ದು, ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಗಾಡಿಕೊಪ್ಪದ ಮೈಸೂರು ಬೀದಿ ನಿವಾಸಿ ವೀರೇಶ್ (27) ಹತ್ಯೆಗೀಡಾದ ಯುವಕ ಎಂದು ಹೇಳಲಾಗಿದ್ದು, ತೋಗರ್ಸಿ ಹೊರವಲಯದ ಸ್ಮಶಾನದ ಬಳಿ ಈ ಘಟನೆ ನಡೆದಿದೆ. ಆತ ಕೊಂಡೊಯ್ದ ಇನ್ನೋವಾ ಕಾರಿನ ಡಿಕ್ಕಿಯಲ್ಲಿ, ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹಂತಕರು ಕಾರಿಗೆ ಬೆಂಕಿ ಹಚ್ಚಿ ಸುಟ್ಟಿರುವುದರಿಂದ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ರಾತ್ರಿ ಗಾಡಿಕೊಪ್ಪದ ಮನೆಯಲ್ಲಿದ್ದ ಯುವಕನಿಗೆ, ಕೆಲ ಪರಿಚಿತರು ಆತನ ಮೊಬೈಲ್ ಫೋನ್ ಗೆ ಕರೆ ಮಾಡಿದ್ದರು.
ಸ್ನೇಹಿತರೋರ್ವರ ಇನ್ನೋವಾ ಕಾರಿನಲ್ಲಿ ವೀರೇಶ್ ತೆರಳಿದ್ದರು. ನಂತರ ಮನೆಗೆ ಹಿಂದಿರುಗಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಡಿವೈಎಸ್ಪಿ ಕೇಶವ್, ಇನ್ಸ್ ಪೆಕ್ಟರ್ ರುದ್ರೇಶ್, ಶಿರಾಳಕೊಪ್ಪ ಠಾಣೆ ಸಬ್ ಇನ್ಸ್’ಪೆಕ್ಟರ್ ರಮೇಶ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ.
– ಭತ್ತ, ಒಣ ಹುಲ್ಲಿಗೆ ಬೆಂಕಿ ತಗುಲಿ ಭಸ್ಮ
ಸೊರಬ : ಚಂದ್ರಗುತ್ತಿ ಸಮೀಪ ಕಮಲಾಪುರ ಗ್ರಾಮದಲ್ಲಿ ಬೆಂಕಿ ತಗುಲಿ ಭತ್ತದ ಹುಲ್ಲಿನ ಪೆಂಡಿ ಹಾಗೂ ಭತ್ತ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟವಾದ ಘಟನೆ ಬೆಳಿಗ್ಗೆ ಸಂಭವಿಸಿದೆ. ಕಮಲಾಪುರ ಗ್ರಾಮದ ಸರ್ವೆ ನಂ. 6ರಲ್ಲಿನ ನಾಗರಾಜ ಮತ್ತು 7ರಲ್ಲಿನ ಶೇಖರ ಎಂಬುವವರಿಗೆ ಸೇರಿದ ಪಕ್ಕದ ಜಮೀನಿನಲ್ಲಿ ಯಾರೋ ತರಗೆಲೆಗಳಿಗೆ ಹಚ್ಚಿದ ಬೆಂಕಿಯ ಕಿಡಿ ಇವರ ಜಮೀನಿಗೆ ಆವರಿಸಿ ಜಮೀನಿನಲ್ಲಿದ್ದ ಭತ್ತದ ಹುಲ್ಲು ಮತ್ತು ಕಟಾವು ಮಾಡಿದ್ದ ಭತ್ತಕ್ಕೆ ಆವರಿಸಿ ಸುಮಾರು ಮೂರು ಸಾವಿರ ಹುಲ್ಲಿನ ಪೆಂಡಿ ಮತ್ತು ಹತ್ತು ಕ್ವಿಂಟಾಲ್ ಭತ್ತ ಸಂಪೂರ್ಣ ಭಸ್ಮವಾಗಿದೆ. ಇದರಲ್ಲಿ ನಾಗರಾಜ ಅವರಿಗೆ ಸೇರಿದ 2 ಸಾವಿರ ಹುಲ್ಲಿನ ಪೆಂಡಿ, 10 ಕ್ವಿಂಟಾಲ್ ಭತ್ತ ಹಾಗೂ ಶೇಖರ ಅವರಿಗೆ ಸೇರಿದ 1 ಸಾವಿರ ಹುಲ್ಲಿನ ಪೆಂಡಿ ಎಂದು ತಿಳಿದು ಬಂದಿದೆ. ಅಕ್ಕಪಕ್ಕದ ಜಮೀನಿನಲ್ಲಿ ಯಾವುದೇ ಬೆಳೆ ಇಲ್ಲದ ಕಾರಣ ಬೆಂಕಿ ಮುಂದುರೆದಿಲ್ಲ. ತಾಲೂಕಿನಲ್ಲಿ ಆವರಿಸಿರುವ ಬರದ ನಡುವೆಯೂ ಭತ್ತ ಬೆಳೆದ ತಮಗೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಮಾರು ಒಂದು ಲಕ್ಷ ರೂ.ಗಳಷ್ಟು ಫಸಲು ನಾಶವಾಗಿದೆ.
ಬ್ಯಾಂಕ್ ಮತ್ತು ಖಾಸಗಿ ಸಂಘ-ಸಂಸ್ಥೆಗಳಲ್ಲಿ ಬೆಳೆಗಾಗಿ ಸಾಲ ಮಾಡಿದ್ದ ನಮಗೆ ಇದರಿಂದ ಜೀವನ ನಿರ್ವಹಣೆ ಇನ್ನಷ್ಟು ಬಿಗಡಾಯಿಸಿದೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಪ್ರಕರಣ ದಾಖಲಿಸಿಕೊಂಡು ಪರಿಹಾರ ನೀಡುವಂತೆ ಹುಲ್ಲು ಮತ್ತು ಭತ್ತ ಕಳೆದುಕೊಂಡ ನಾಗರಾಜ ಮತ್ತು ಶೇಖರ ಅಧಿಕಾರಿಗಳ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಚಂದ್ರಗುತ್ತಿ ಪೊಲೀಸ್ ಠಾಣೆಯ ದಫೇದಾರ್ ಸಂತೋಷ್ ಮತ್ತು ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿ ರಮೇಶ್ ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
– ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವರ ಸ್ಥಿತಿ ಗಂಭೀರ.!
ಸಾಗರ : ತಾಲೂಕಿನ ಆನಂದಪುರದ ಸಂತೆ ಮಾರ್ಕೆಟ್ ರಸ್ತೆಯ ಬಳಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಆನಂದಪುರದಿಂದ ತಾವರೆಹಳ್ಳಿ ಹೋಗುವ ಬೈಕ್ ಸವಾರರಿಗೂ ಹಾಗೂ ಎಡೆ ಹಳ್ಳಿಯಿಂದ ಆನಂದಪುರದ ಕಡೆ ಬರುತ್ತಿದ್ದ ಬೈಕ್ ಸವಾರರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಸತ್ಯನಾರಾಯಣ ಎಂಬುವರಿಗೆ ತೀವ್ರ ಪೆಟ್ಟಾಗಿದ್ದು ಅವರನ್ನು ತಕ್ಷಣವೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಬೈಕ್ ಸವಾರನನ್ನು ಕೂಡ ಅಲ್ಲಿಯ ಆಸ್ಪತ್ರೆಗೆ ರವಾನಿಸಲಾಗಿದೆ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.
– ನೇಣು ಬೀಗಿದ ರೀತಿಯಲ್ಲಿ ಶವ ಪತ್ತೆ.!
ಸಾಗರ: ತಾಲೂಕಿನ ಆಲಳ್ಳಿ ಸಮೀಪ ಕುಮಟಾದಲ್ಲಿ ಸುಮಾರು 45 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು. ಶವವು ನೋಡಲು ನೇಣು ಬೀಗಿದ ರೀತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಹೆಸರು ಉಪೇಂದ್ರ ಎಂದು ಗುರುತಿಸಲಾಗಿದೆ. ಹಾಗೂ ಮೃತರ ಕುಟುಂಬ ಸಿದ್ದಾಪುರದಲ್ಲಿ ನೆಲೆಸಿದ್ದು, ಸ್ಥಳಕ್ಕೆ ಪೋಲೀಸರು ಆಗಮಿಸಿ ತನಿಕೆ ನಡೆಸಿದ್ದಾರೆ. ಮೃತರ ಕುಟುಂಬಸ್ತರ ಸುಳಿವು ಇನ್ನು ಪತ್ತೆಯಾಗಿಲ್ಲ.ಆದರಿಂದ ಕುಟುಂಬದವರ ಪತ್ತೆಗಾಗಿ ಶೋಧ ನಡೆಯುತ್ತಿದೆ. ಹಾಗೂ ಪ್ರಕರಣ ವನ್ನು ಗ್ರಾಮಾಂತರ ಪೋಲಿಸ್ ಠಾಣೆಯುಲ್ಲಿ ದಾಖಲಾಗಿದೆ.
-ಬೈಕ್ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸಾವು.!
ಸಾಗರ : ತಾಲೂಕಿನ ಆನಂದಪುರ ಸಮೀಪದ ಹೊಸಕೊಪ್ಪ ಸಂಜೆ 7 ಗಂಟೆಗೆ ಹೊಸಕೊಪ್ಪ ಗ್ರಾಮಕ್ಕೆ ಬೈಕ್ ಸವಾರ ತಿರುಗುತ್ತಿದ್ದ ವೇಳೆ ಹಿಂಬದಿ ಯಿಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ತಕ್ಷಣ ಗಾಯಾಳುಗಳನ್ನು ಆನಂದಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ವಿರೂಪಾಕ್ಷಪ್ಪ ಹಾಗೂ ಷಣ್ಮುಖಪ್ಪ ಎಂಬವರಿಗೆ ತೀವ್ರ ಗಾಯವಾಗಿತ್ತು. ಮೆಣಸಿನಸರ ಗ್ರಾಮದ ನಿವಾಸಿ ಷಣ್ಮುಖಪ್ಪ ( 65 ) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಎರಡು ಬೈಕ್ ಗಳನ್ನು ಆನಂದಪುರ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.