ಎಮ್ಮೆ ಹಾಲಿಗೆ ಡಿಮ್ಯಾಂಡ್ ಇಲ್ಲ!
– ಕೆಎಂಎಫ್ ಎಮ್ಮೆ ಹಾಲು ಮಾರಾಟ ಸ್ಥಗಿತ
– ಎಮ್ಮೆ ಹಾಲು ಲಾಭಕ್ಕಿಂತ ನಷ್ಟವೇ ಹೆಚ್ಚು..!
NAMMUR EXPRESS NEWS
ಬೆಂಗಳೂರು: ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯಿಂದಾಗಿ, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮಾರುಕಟ್ಟೆಗೆ ಎಮ್ಮೆ ಹಾಲನ್ನು ಡಿಸೆಂಬರ್ 21 ಮತ್ತು 22 ರಿಂದ ಬಿಡುಗಡೆ ಮಾಡಿತ್ತು. ಮಾರುಕಟ್ಟೆಗೆ ಮೂರು ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿದ್ದ ಎಮ್ಮೆ ಹಾಲಿನ ಮಾರಾಟವನ್ನು ಸ್ಥಗಿತಗೊಳಿಸಲು ಚಿಂತನೆ ನಡೆಯುತ್ತಿದೆ. ಕೇವಲ ಮೂರು ತಿಂಗಳಿಗೆನೇ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಎಮ್ಮೆ ಹಾಲು ಮಾರಾಟ ನಿಲ್ಲಿಸಲು ಗಂಭೀರ ಚಿಂತನೆ ನಡೆಸಿದೆ. ಬೇಡಿಕೆ ಹೆಚ್ಚಾಗಿದೆ ಎಂದು ಮಾರುಕಟ್ಟೆಗೆ ಎಮ್ಮೆ ಹಾಲು ಬಿಡುಗಡೆ ಮಾಡಿ ಈಗ ಮತ್ತೆ ಬೇಡಿಕೆ ಕಡಿಮೆಯಾಗಿದೆ ಎಂದು ಹಾಳು ಮಾರಾಟ ಸ್ಥಗಿತಗೊಳಿಸಲಾಗುತ್ತಿದೆ.
ಕಳೆದ ಡಿಸೆಂಬರ್ 21 ಮತ್ತು 22 ರಂದು ರಾಜ್ಯಾದ್ಯಂತ ಕೆಎಂಎಫ್ ರಾಜ್ಯಾದ್ಯಂತ ಮಾರುಕಟ್ಟೆಗೆ ಎಮ್ಮೆ ಹಾಲು ಬಿಡುಗಡೆ ಮಾಡಿತ್ತು. ಬೆಂಗಳೂರು ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೂ ಎಮ್ಮೆ ಹಾಲು ಸರಬರಾಜು ಮಾಡುವ ಉದ್ದೇಶವನ್ನು ಕೆಎಂಎಫ್ ಹೊಂದಿತ್ತು. ಆದರೆ, ಕೆಎಂಎಫ್ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ಎಮ್ಮೆ ಹಾಲಿಗೆ ಬೇಡಿಕೆ ಕಡಿಮೆಯಾಗಿದೆ. ಒಂದು ದಿನಕ್ಕೆ ಕೇವಲ ಎರಡು ಸಾವಿರ ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ ಎಂಬ ಮಾಹಿತಿಯಿದೆ. ಕೇವಲ ಎರಡು ಸಾವಿರ ಲೀಟರ್ ಹಾಲು ಮಾರಾಟದಿಂದ ಸಂಸ್ಥೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಾಗಿ ಎಮ್ಮೆ ಹಾಲಿನ ಮಾರಾಟ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಎಮ್ಮೆ ಹಾಲಿಗೆ ಪ್ರತಿ ಲೀಟರ್ಗೆ 60 ರೂಪಾಯಿ ನಿಗದಿಪಡಿಸಲಾಗಿದೆ. ರೈತರಿಂದ ಪ್ರತಿ ಲೀಟರ್ಗೆ 39.50 ರೂಪಾಯಿಯಂತೆ ಹಾಲು ಖರೀದಿ ಮಾಡಲಾಗುತ್ತದೆ.
ಎರಡು ವರ್ಷಗಳ ಹಿಂದೆ, ಕೆಎಂಎಫ್ ಅಂದಾಜು 4,000 ರಿಂದ 5,000 ಲೀಟರ್ ಎಮ್ಮೆ ಹಾಲನ್ನು ಮಾರಾಟ ಮಾಡುತ್ತಿತ್ತು. ಆದರೆ ಪೂರೈಕೆ ಕೊರತೆಯಿಂದಾಗಿ ಮಾರಾಟವನ್ನು ನಿಲ್ಲಿಸಬೇಕಾಯಿತು. ಆದರೆ, ಎಮ್ಮೆ ಹಾಲಿಗೆ ಬೇಡಿಕೆ ಮಾತ್ರ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಮೂರು ತಿಂಗಳ ಹಿಂದೆ ಮತ್ತೆ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಕರ್ನಾಟಕ ಹಾಲು ಒಕ್ಕೂಟವು ಪ್ರತಿನಿತ್ಯ ರಾಜ್ಯದಲ್ಲಿ 46 ಲಕ್ಷ ಲೀಟರ್ ಹಾಲು ಮತ್ತು 10 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿದೆ. ಎಲ್ಲಾ ಒಕ್ಕೂಟಗಳು ಎಮ್ಮೆ ಹಾಲು ಪೂರೈಕೆಗೆ ಸಾಕಷ್ಟು ಸಂಖ್ಯೆಯ ಎಮ್ಮೆಗಳನ್ನು ಹೊಂದಿಲ್ಲದ ಕಾರಣ ವಿಜಯಪುರ ಮತ್ತು ಬೆಳಗಾವಿಯ ರೈತರಿಂದ ಹಾಲು ಪಡೆಯಲಾಗುತ್ತಿತ್ತು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಎಮ್ಮೆಗಳ ಸಂಖ್ಯೆ ಇರುವುದರಿಂದ ಆ ಪ್ರದೇಶದಿಂದ ಖರೀದಿ ನಡೆಸಲಾಗುತ್ತಿತ್ತು. ಎಮ್ಮೆ ಹಾಲು ಮಾರಾಟ ಸ್ಥಗಿತದಿಂದಾಗಿ ರೈತರಿಗೆ ಹೆಚ್ಚು ನಷ್ಟವಾಗಲಿದೆ.