- ಲಸಿಕೆ ಪ್ರಯೋಗ, ತಯಾರಿಕೆ ಹಂತದಲ್ಲಿ ಹಲವು ಅಡತಡೆ
ನ್ಯೂಯಾರ್ಕ್: ವಿಶ್ವವನ್ನೇ ಜೀವ ಭಯಕ್ಕೆ ತಳ್ಳಿರುವ ಕರೋನಾ ಮಹಾಮಾರಿಗೆ ಇನ್ನೂ ಲಸಿಕೆ ಸಿದ್ಧಗೊಂಡಿಲ್ಲ. ಯಾವ ದೇಶ ಯಶಸ್ವಿ ಲಸಿಕೆ ಕಂಡು ಹಿಡಿಯುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಹಲವು ದೇಶಗಳು ಲಸಿಕೆ ಉತ್ಪಾದನೆಯಲ್ಲಿ ತೊಡಗಿವೆ. ಡಿಸೆಂಬರ್ ಅಥವಾ 2021ರ ಮಧ್ಯದೊಳಗೆ ಲಸಿಕೆ ಸಿಗುವುದು ಅನುಮಾನ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಮೂಲಕ ಮತ್ತಷ್ಟು ಜಾಗೃತರಾಗಿರಲು ಸೂಚನೆ ನೀಡಿದೆ.
ಜನರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಕಂಪನಿಯಲ್ಲಿ ಮುಂಚೂಣಿಯಲ್ಲಿರುವ ಮೂರನೇ ಹಂತದ ಪ್ರಯೋಗ ನಡೆಸುತ್ತಿರುವವರು ವೈಯಕ್ತಿಕ ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಹಲವು ತಿಂಗಳು ಬೇಕಾಗಲಿವೆ. ಪ್ರಯೋಗ ಪೂರ್ಣಗೊಂಡ ಬಳಿಕ ಪರವಾನಗಿ, ಬಳಕೆಗೆ ಅಧಿಕಾರ ಮತ್ತು ಸಾಮೂಹಿಕ ಉತ್ಪಾದನೆಗೆ ತೆಗೆದುಕೊಂಡ ಸಮಯದ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಕೆಲವೊಂದು ಲಸಿಕೆಗಳಿಗೆ ಅನುದಾನದ ಕೊರತೆ ಇದೆ ಎಂದು ಹೇಳಲಾಗಿದೆ.
ಕೋವ್ಯಾಕ್ಸ್ ಪಡೆಯಲು 184 ದೇಶಗಳು ಸಹಿ ಹಾಕಿವೆ. 92 ಕಡಿಮೆ ಆದಾಯ ಇರುವ ದೇಶಗಳು ಕೂಡ ಸೇರಿವೆ. ಆಕ್ಸ್ಫರ್ಡ್ ಯೂನಿವರ್ಸಿಟಿಯ ಆಸ್ಟ್ರಾಜೆನೆಕಾ, ಸಿನೋವಾಕ್, ಸಿನೋಫಾರ್ಮ್, ಕ್ಯಾನ್ಸಿನೋ, ಸ್ಪುಟ್ನಿಕ್ ಗಿ, ಮಾಡೆರ್ನಾ ಲಸಿಕೆಗಳು ಪ್ರಯೋಗವನ್ನು ನಡೆಸುತ್ತಿವೆ. ಹೀಗಾಗಿ ಯಾವ ಲಸಿಕೆ ಪರಿಣಾಮಕಾರಿ ಎಂಬುದು ಇನ್ನೂ ಗೊಂದಲ ಇದೆ. ಹೀಗಾಗಿ 2021ರ ಮಧ್ಯ ಭಾಗದಲ್ಲಿ ಲಸಿಕೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ ಎಂದು ವಿಶ್ವ ಸಂಸ್ಥೆ ಹೇಳಿದೆ.