ಇಬ್ಬರು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾನೂ ಆಹುತಿಯಾದ ತಾಯಿ
– ಹೆಂಡತಿ ಮೇಲೆ ಆಸಿಡ್ ದಾಳಿ ನಡೆಸಿದ ಗಂಡ
– ದೇವರಿಗೆ ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು
– ವಿಜಯಪುರದ ಗ್ರಾಮದಲ್ಲಿ ಕುಡಿಯುವ ನೀರಿಲ್ಲವೆಂದು ಮೊಬೈಲ್ ಟವರ್ ಏರಿದ ಯುವಕ!
NAMMUR EXPRESS NEWS
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲ ಸಮುದ್ರ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊನೆಗೆ ತಾನೂ ಅಗ್ನಿ ಪ್ರವೇಶ ಮಾಡಿದ್ದಾಳೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ದುರಂತ ನಡೆದಿದೆ ಎಂದು ಹೇಳಲಾಗಿದೆ. ಮಾರಕ್ಕ ಎಂಬ 24 ವರ್ಷದ ಮಹಿಳೆಯೇ ತನ್ನ ಇಬ್ಬರು ಪುಟ್ಟ ಕಂದಮ್ಮಗಳಾದ ನಯನ (4) ಮತ್ತು ಹರ್ಷ ವರ್ಧನ್ (2)ಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ತಾನೂ ಸಾವನ್ನಪ್ಪಿದವರು. ಮಕ್ಕಳನ್ನು ಮನೆಯಿಂದ ಹೊರಡಿಸಿ ಗ್ರಾಮದ ಹೊರವಲಯಕ್ಕೆ ಹೋಗಿ ಅಲ್ಲಿ ಈ ಅತಿರೇಕದ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ. ಕೌಟುಂಬಿಕ ಕಲಹದಿಂದ ತೀವ್ರವಾಗಿ ನೊಂದಿದ್ದ ಆಕೆ ಬದುಕು ಬೇಡವೆಂದು ತೀರ್ಮಾನಿಸಿದ್ದಾರೆ.
ನಾನು ಇಲ್ಲದಿದ್ದರೆ ಈ ಪುಟ್ಟ ಮಕ್ಕಳು ಹೇಗೆ ಬದುಕಿಯಾವು ಎಂಬ ಯೋಚನೆ ಬರುತ್ತಿದ್ದಂತೆಯೇ ಮೊದಲು ಅವರನ್ನು ಬೆಂಕಿಗೆ ಹಾಕಿ ಕೊನೆಗೆ ತಾನೂ ಆಹುತಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಯಲ್ಲಿ ಮಕ್ಕಳು ಮತ್ತು ತಾಯಿ ಸುಟ್ಟು ಹೋದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಮಾರಕ್ಕ ಎದುರಿಸುತ್ತಿದ್ದ ಮಾನಸಿಕ ಹಿಂಸೆ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
– ಹೆಂಡತಿ ಮೇಲೆ ಆಸಿಡ್ ದಾಳಿ ನಡೆಸಿದ ಗಂಡ
ಆನೇಕಲ್: ಹೆಣ್ಮಕ್ಕಳ ಮೇಲೆ ದುಷ್ಟರು, ಕಾಮುಕರು ಆಸಿಡ್ ದಾಳಿ ನಡೆಸುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ದುಷ್ಟ ಪತಿಯೇ ತನ್ನ ಹೆಂಡತಿಯ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಘಟನೆ ನಡೆದಿರುವುದು ಬೆಂಗಳೂರು ಹೊರವಲಯದ ಆನೆಕಲ್ ತಾಲೂಕಿನ ಗೌರೇನ ಹಳ್ಳಿಯಲ್ಲಿ. ಚಾಂದ್ ಪಾಷಾ (45) ಎಂಬಾತ ತನ್ನ ಪತ್ನಿಯಾದ ನಾಜಿಯಾ ಬೇಗಂ (40) ಮೇಲೆ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಾಜಿಯಾ ಬೇಗಂ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಂದ್ ಪಾಷಾ ಮತ್ತು ನಾಜಿಯಾ ಬೇಗಂ ಹಲವು ವರ್ಷದ ಹಿಂದೆ ಮದುವೆಯಾದವರು. ಆದರೆ, ಹಿಂದಿನಿಂದಲೇ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. ಗಂಡನ ಕಿರಿಕಿರಿಯಿಂದ ನಾಜಿಯಾ ಹತಾಶರಾಗಿದ್ದರು. ಆತ ಆಗಾಗ ಹೊಡೆಯುವುದು, ಮನೆಯಿಂದ ಹೊರಹಾಕುವ ಹಿಂಸೆ ನೀಡುತ್ತಿದ್ದ. ಆದರೆ ನಾಜಿಯಾ ಅದನ್ನೆಲ್ಲ ಸಹಿಸಿಕೊಂಡಿದ್ದರು. ಕೌಟುಂಬಿಕ ಕಲಹ ಇತ್ತೀಚೆಗೆ ತೀವ್ರವಾಗಿತ್ತು.
ಈ ಹಂತದಲ್ಲಿ ಗಂಡ ತನ್ನ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ. ಮಾರ್ಚ್ 17ನೇ ತಾರೀಖಿನ ರಾತ್ರಿ ಪತ್ನಿ ಮಲಗಿದ್ದನ್ನು ಗಮನಿಸಿದ ಗಂಡ ಆಕೆಯ ಮೇಲೆ ಮಲಗಿದಲ್ಲಿಗೇ ಆಸಿಡ್ ದಾಳಿ ನಡೆಸಿದ್ದಾನೆ. ಮನೆಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆಸಿಡನ್ನೇ ಆತ ಆಕೆಯ ಮೇಲೆ ಎರಚಿದ್ದ. ಮಲಗಿದ್ದಾಗ ಒಮ್ಮಿಂದೊಮ್ಮೆಗೇ ಮುಖದ ಮೇಲೆ ಏನೋ ಬಿದ್ದು ಉರಿ ಏಳುತ್ತಿದ್ದಂತೆಯೇ ನಾಜಿಯಾ ಎದ್ದು ಜೋರಾಗಿ ಬೊಬ್ಬೆ ಹೊಡೆದರು. ಹೆಂಡತಿ ಕಿರುಚಾಡುತ್ತಿದ್ದಂತೆಯೇ ಚಾಂದ್ ಪಾಷಾ ಬೈಕ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಸೇರಿ ನಾಜಿಯಾ ಅವರನ್ನು ಆನೇಕಲ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಾಯ್ಲೆಟ್ಗೆ ಬಳಸುವ ಆಸಿಡ್ ಆಗಿದ್ದರಿಂದ ಸ್ವಲ್ಪ ದುರ್ಬಲವಾಗಿದೆ. ಹೀಗಾಗಿ ಆಕೆಯ ಪ್ರಾಣ ಉಳಿದಿದೆ ಎನ್ನಲಾಗಿದೆ.
– ದೇವರಿಗೆ ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು
ತುಮಕೂರು : ಶಾಲೆಯ ಸಮೀಪದ ದೇವಸ್ಥಾನವೊಂದರಲ್ಲಿ ದೀಪ ಹಚ್ಚಲು ಹೋದ ಸಂದರ್ಧದಲ್ಲಿ ಬಟ್ಟೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಗೌಡಗೆರೆ ಹೋಬಳಿ ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ದೀಕ್ಷಾ ಮೃತಪಟ್ಟ ದುರ್ದೈವಿ ಬಾಲಕಿ . ಶಾಲೆಯಲ್ಲಿ ಮಧ್ಯಾಹ್ನದ ಊಟದ ವಿರಾಮದ ವೇಳೆ ಆಕೆ ಶಾಲೆಯ ಪಕ್ಕದಲ್ಲೇ ಇರುವ ದೇವಾಲಯದಲ್ಲಿ ದೀಪ ಹಚ್ಚಲು ಹೋಗಿದ್ದಳು. ಹಿರಿಯರು ಮಾಡುವ ಸಂಪ್ರದಾಯಗಳನ್ನು ಗಮನಿಸಿದ್ದ ಆಕೆ ಭಕ್ತಿಯಿಂದ ಆಕೆ ಈ ಕೆಲಸವನ್ನು ಮಾಡಿದ್ದಳು. ತನ್ನ ಜತೆಗೆ ತರಗತಿಯ ಇತರ ಕೆಲವು ಮಕ್ಕಳನ್ನು ಕೂಡಾ ಆಕೆ ಕರೆದುಕೊಂಡು ಹೋಗಿದ್ದಳು. ಆ ಬಾಲಕಿಗೆ ದೀಪ ಹಚ್ಚಿದರೆ ಒಳ್ಳೆಯದಾಗುತ್ತದೆ ಎನ್ನುವುದು ಗೊತ್ತಿತ್ತೇ ವಿನಃ ಬೆಂಕಿಯಿಂದ ಆಗಬಹುದಾದ ಅನಾಹುತಗಳ ಅರಿವು ಇರಲಿಲ್ಲ. ಆದರೆ, ದುರದೃಷ್ಟವಶಾತ್ ಅಲ್ಲಿ ದುರಂತ ಸಂಭವಿಸಿಯೇ ಬಿಟ್ಟಿತು.
ಗೆಳತಿಯರೊಂದಿಗೆ ಖುಷಿ ಖುಷಿಯಾಗಿ ಹೋಗಿ ದೇವರಿಗೆ ದೀಪ ಹಚ್ಚಿದ ಆಕೆ ಈ ಸಂಭ್ರಮದಲ್ಲಿ ಮೈಮರೆತಿದ್ದಳೋ ಗೊತ್ತಿಲ್ಲ. ಅಂತೂ ಆಕೆಯ ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಬಟ್ಟೆಗೆ ತಗುಲಿ ಮೈಗೆ ಸುಟ್ಟ ಗಾಯಗಳಾಗಿತ್ತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಇದೀಗ ಆಕೆ ಚಿಕಿತ್ಸೆ ಫಲಿಸದೆ ಮಾರ್ಚ್ 19ರಂದು ಮೃತಪಟ್ಟಿದ್ದಾಳೆ.
– ವಿಜಯಪುರದ ಗ್ರಾಮದಲ್ಲಿ ಕುಡಿಯುವ ನೀರಿಲ್ಲವೆಂದು ಮೊಬೈಲ್ ಟವರ್ ಏರಿದ ಯುವಕ!
ವಿಜಯಪುರ: ರಾಜ್ಯದಲ್ಲಿ ಭೀಕರ ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಗರ ಸೇರಿ ಹಲವಾರು ಹಳ್ಳಿಗಳಲ್ಲೂ ಈಗ ನೀರಿಗೆ ಹಾಹಾಕಾರ ಎದುರಾಗಿದೆ. ನೀರು ಪೂರೈಕೆ ಮಾಡಲು ಕಷ್ಟಪಡುತ್ತಿರುವ ಸ್ಥಳೀಯ ಆಡಳಿತಗಳು ಹೈರಾಣಾಗಿವೆ. ಈ ವೇಳೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಯುವಕನೊಬ್ಬ ಮೊಬೈಲ್ ಟವರ್ ಏರಿ ಹುಚ್ಚಾಟ ನಡೆಸಿದ್ದಾನೆ. ಅರೆಬೆತ್ತಲೆಯಾಗಿ ಕೂಗಾಡಿದ್ದಾನೆ. ನನ್ನ ಗ್ರಾಮಕ್ಕೆ ಕುಡಿಯುವ ನೀರಿಲ್ಲ. ಪಿಡಿಒ, ತಾಲೂಕು ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪ ಮಾಡಿದ್ದಾನೆ.
ಇಂಡಿ ಬಸವೇಶ್ವರ ಸರ್ಕಲ್ನಲ್ಲಿರುವ ಜಿಯೋ ಟವರ್ ಅನ್ನು ಯುವಕ ಏರಿದ್ದಾನೆ. ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಯುವಕ ಸತೀಶ್ ಚಂದ್ರಶೇಖರ ಕಡಣಿ ಎಂಬಾತನೇ ಟವರ್ ಏರಿರುವುದು ಎಂದು ತಿಳಿದುಬಂದಿದೆ. 250 ಅಡಿ ಎತ್ತರದ ಟವರ್ನ ತುದಿಗೆ ಯುವಕ ಏರಿದ್ದಾನೆ. ಸತೀಶ್ ಚಂದ್ರಶೇಖರ ಕಡಣಿ ಬಿಎಸ್ಎನ್ಎಲ್ ಟವರ್ ಹತ್ತಿದ್ದು, ನೀರಿಗಾಗಿ ಆಗ್ರಹಿಸುತ್ತಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಯುವಕನನ್ನು ಕೆಳಗೆ ಇಳಿಸಲು ಹರಸಾಹಸಪಡುತ್ತಿದ್ದಾರೆ. ಕೆಳಗಿಳಿಸುವಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಯಶಸ್ವಿಯಾದರು.