ಚಾಮರಾಜನಗರದಲ್ಲಿ ಆನೆ ದಾಳಿಗೆ ಯುವಕ ಬಲಿ
– ನಿಧಿ ಆಸೆಗೆ ದೇವರಿಗೆ ವಾಮಾಚಾರ ಗರ್ಭ ಗುಡಿಗೆ ಕನ್ನ
– ತುಮಕೂರು ಬಳಿ ಗಣಪತಿ ಬಸ್ಸಿನಲ್ಲಿ ನಿಗೂಢ ಸ್ಫೋಟ
– 50 ಸಾವಿರ ರೂ. ಲಂಚ ಕೇಳಿದ್ದ ಸಬ್ ರಿಜಿಸ್ಟ್ರಾರ್ ಲೋಕಾಯುಕ್ತ ದಾಳಿ ವೇಳೆ ಎಸ್ಕೇಪ್!
NAMMUR EXPRESS NEWS
ಚಾಮರಾಜನಗರ : ಆನೆ ದಾಳಿಗೆ ಯುವಕನೊಬ್ಬ ಮೃತಪಟ್ಟಿದ್ದಾನೆ. ಚಾಮರಾಜನಗರದ ಹನೂರು ತಾಲೂಕಿನ ಕತ್ತೆಕಾಲು ಪೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಕತ್ತೆಕಾಲು ಪೋಡು ಗ್ರಾಮದ ಮಾದ (23) ಮೃತ ದುರ್ದೈವಿ. ಮಾದ ಹಿರಿಯಂಬಲ ಗ್ರಾಮಕ್ಕೆ ಹೋಗಿ ವಾಪಾಸ್ ಬರುತ್ತಿರುವಾಗ ಆನೆಯು ದಾಳಿ ನಡೆಸಿದೆ. ಆನೆ ದಾಳಿಯಿಂದ ಗಂಭೀರ ಗಾಯಗೊಂಡ ಮಾದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿ ಬೈಲೂರು ವಲಯದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಗ್ರಾಮಸ್ಥರು ಆನೆಗಳನ್ನು ಕಾಡಿಗೆ ಓಡಿಸುವಂತೆ ಮನವಿ ಮಾಡಿದ್ದಾರೆ. ಜಮೀನು ಕೆಲಸಗಳಿಗೆ ಭಯದಲ್ಲೇ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
– ನಿಧಿ ಆಸೆಗೆ ದೇವರಿಗೆ ವಾಮಾಚಾರ ಗರ್ಭ ಗುಡಿಗೆ ಕನ್ನ
ವಿಜಯನಗರ: ನಿಧಿ ಇರಬಹುದು ಎಂಬ ಆಸೆಗೆ ಖದೀಮರು ದೇವಸ್ಥಾನದ ಗರ್ಭ ಗುಡಿಗೆ ಕನ್ನ ಹಾಕಿರುವ ವಿದ್ಯಮಾನ ವಿಜಯನಗರದ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ ಜಮೀನನಲ್ಲಿ ಘಟನೆ ನಡೆದಿದೆ. ನಿಧಿಗಾಗಿ ಪುರಾತನ ಕಾಲದ ದೇವಸ್ಥಾನಕ್ಕೆ ರಾತ್ರೋರಾತ್ರಿ ಬಂದ ಚೋರರು ಜೆಸಿಬಿ ಮೂಲಕ ದೇಗುಲ ಗರ್ಭ ಗುಡಿಯನ್ನು ಅಗೆದಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಭೀರಪ್ಪ ದೇವಸ್ಥಾನದಲ್ಲಿ ಸುಮಾರು ಹತ್ತು ಅಡಿಗಳಷ್ಟು ಮಣ್ಣು ಅಗೆದಿದ್ದಾರೆ. ಪುರಾತನ ದೇವಸ್ಥಾನ ಎಂಬ ಕಾರಣಕ್ಕೆ ಕೆಳಗೆ ನಿಧಿ ಇರಲೇಬೇಕೆಂದು ಅಂದುಕೊಂಡಿರುವ ದುಷ್ಕರ್ಮಿಗಳು ಬುಧವಾರ ಮಧ್ಯ ರಾತ್ರಿ ನಂತರ ದೇಗುಲಕ್ಕೆ ನುಗ್ಗಿದ್ದಾರೆ. ದೇವಸ್ಥಾನದ ಮುಂಭಾಗ ಮಣ್ಣು ಅಗೆದು ಕೊನೆಗೆ ನಿಧಿ ಸಿಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ಪುರಾತನ ದೇವಸ್ಥಾನದಲ್ಲಿ ನಿಧಿ ಆಸೆಗಾಗಿ ದುಷ್ಕರ್ಮಿಗಳು ಹೊಂಚು ಹಾಕಿ ಗರ್ಭ ಗುಡಿ ಮುಂದೆ ಅಗೆದು ನಿಧಿ ಶೋಧಿಸಲು ಪ್ರಯತ್ನಿಸಿದ್ದಾರೆ. ಮಾತ್ರವಲ್ಲ ನಿಧಿಗಾಗಿ ಅಗೆದ ಸ್ಥಳದಲ್ಲಿ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ. ಮಣ್ಣು ಅಗೆದ ಸ್ಥಳದಲ್ಲಿ ನಿಂಬೆಹಣ್ಣು, ಕುಂಕುಮ ಇನ್ನಿತರ ಸಾಮಾಗ್ರಿ ಪತ್ತೆಯಾಗಿದೆ. ದೇವಸ್ಥಾನದ ಅರ್ಚಕರು ಬೆಳಗ್ಗೆ ಪೂಜೆಗೆಂದು ಬಂದಾಗ ಕಳ್ಳರ ಕೃತ್ಯ ಬಯಲಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಿಧಿಗಾಗಿ ದೇವಸ್ಥಾನ ಅಗೆದ ಸುದ್ದಿ ತಿಳಿದು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು. ಪುರಾತನ ಕಾಲದ ದೇಗುಲವನ್ನು ಅಗೆದು ಧ್ವಂಸ ಮಾಡಿದವರಿಗೆ ಶಿಕ್ಷೆ ಆಗಬೇಕೆಂದು ಪಟ್ಟು ಹಿಡಿದರು.
– ತುಮಕೂರು ಬಳಿ ಗಣಪತಿ ಬಸ್ಸಿನಲ್ಲಿ ನಿಗೂಢ ಸ್ಫೋಟ
ತುಮಕೂರು: ತುಮಕೂರಿನ ಗೂಳೂರು ಎಂಬಲ್ಲಿ ಕುಣಿಗಲ್ನಿಂದ ತುಮಕೂರಿಗೆ ಬರುತ್ತಿದ್ದ ಶ್ರೀ ಗಣಪತಿ ಎಂಬ ಹೆಸರಿನ ಖಾಸಗಿ ಬಸ್ನಲ್ಲಿ ಬುಧವಾರ ಸಂಜೆ ನಿಗೂಢ ಸ್ಫೋಟವೊಂದು ಸಂಭವಿಸಿದ್ದು ಭಾರಿ ಆತಂಕಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುಸ್ಲಿಂ ಮಹಿಳೆಯೊಬ್ಬರ ಕೈಯಲ್ಲಿದ್ದ ಆ್ಯಸಿಡ್ ಬಾಟಲ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ತುಮಕೂರು ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಿಂದ ಬರ್ತಿದ್ದ ಮಹಿಳೆ ಶಕೀಲಾ ಬಾನು (48) ಕೈಯಲ್ಲಿ ಟಾಯ್ಲೆಟ್ಗೆ ಬಳಸುವ ಆ್ಯಸಿಡ್ ತುಂಬಿದ್ದ ಬಾಟಲನ್ನು ಹಿಡಿದುಕೊಂಡಿದ್ದರು ಎನ್ನಲಾಗಿದೆ.
ಅದು ಒಮ್ಮೆಗೇ ಸ್ಫೋಟಗೊಂಡು ಸದ್ದಿನೊಂದಿಗೆ ಸಿಡಿದಿದೆ. ಘಟನೆಯಿಂದಾಗಿ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರು ಶಾಕ್ಗೆ ಒಳಗಾಗಿದ್ದಾರೆ. ಸಣ್ಣ ಪುಟ್ಟ ಗಾಯವಾದವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ಪ್ರಾಣಾಪಾಯವಿಲ್ಲ. ಮೇಲ್ನೋಟಕ್ಕೆ ಇದು ಆಸಿಡ್ ಒತ್ತಡಕ್ಕೆ ಒಳಗಾಗಿ ಸ್ಫೋಟಿಸಿದೆ ಎಂದು ನಂಬಲಾಗಿದೆ. ಸದ್ಯ ಜಿಲ್ಲೆಯಲ್ಲಿ ಆಸಿಡ್ ಮಾರಾಟಕ್ಕೆ ನಿಷೇಧವಿದೆ. ಈ ಮಹಿಳೆ ತಾನು ಕೆಲಸ ಮಾಡುತ್ತಿದ್ದ ಗುಜರಿ ಅಂಗಡಿಯಿಂದ ಆ್ಯಸಿಡ್ ತಂದಿರುವುದಾಗಿ ಹೇಳಿದ್ದಾರೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– 50 ಸಾವಿರ ರೂ. ಲಂಚ ಕೇಳಿದ್ದ ಸಬ್ ರಿಜಿಸ್ಟ್ರಾರ್ ಲೋಕಾಯುಕ್ತ ದಾಳಿ ವೇಳೆ ಎಸ್ಕೇಪ್!
ಕೊಡಗು: ಅಧಿಕಾರಿಗಳಿಗೆ ಕೈ ತುಂಬಾ ಸಂಬಳ ಬಂದರೂ ಲಂಚದ ಮೇಲೆ ಆಸೆ ನಿಂತಿಲ್ಲ. ಅದರಲ್ಲೂ ಸರ್ಕಾರಗಳು ಪಾರದರ್ಶಕ ಆನ್ಲೈನ್ ಸಿಸ್ಟಮ್, ಲಂಚರಹಿತ ವ್ಯವಸ್ಥೆ ಎಂದೆಲ್ಲ ಹೇಳುತ್ತಿದ್ದರೂ ಖದೀಮ ಅಧಿಕಾರಿಗಳು ರಂಗೋಲಿ ಕೆಳಗೆ ತೂರುತ್ತಲೇ ಇದ್ದಾರೆ. ಇಂಥವರನ್ನು ಹಿಡಿದು ಹಾಕುವ ಕೆಲಸಗಳು ಆಗಾಗ ನಡೆಯುತ್ತವೆ. ಕೊಡಗಿನಲ್ಲಿ ಲಂಚವನ್ನೇ ಹಾಸಿ ಹೊದೆಯುತ್ತಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬುಧವಾರ ಲೋಕಾಯುಕ್ತ ದಾಳಿ ನಡೆದಿದೆ. ಈ ವೇಳೆ ಸಬ್ ರಿಜಿಸ್ಟ್ರಾರ್ ಸೌಮ್ಯಲತಾ ಎಸ್ಕೇಪ್ ಆಗಿದ್ದರೆ, ಬ್ರೋಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಮಡಿಕೇರಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟ್ರಾರ್ ಆಗಿರುವ ಸೌಮ್ಯಲತಾ ಅವರು ಪೌತಿ ಖಾತೆ ರಿಜಿಸ್ಟ್ರೇಷನ್ಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಕೋರಂಗಾಲ ಗ್ರಾಮದ ನಂಗಾರು ಕುಮಾರ್ ಅವರು ಪೌತಿ ಖಾತೆ ನೋಂದಣಿ ಮಾಡಿಸಲು 50,000 ರೂ. ಕೇಳಿದ್ದರು. ಕಳೆದ ಎರಡು ತಿಂಗಳುಗಳಿಂದ ರಿಜಿಸ್ಟ್ರೇಷನ್ ಮಾಡಲು ಸತಾಯಿಸುತ್ತಿದ್ದ ಸೌಮ್ಯಲತಾ ಅವರು ಕೊನೆಗೆ ಬ್ರೋಕರ್ ಮೂಲಕ ಹಣ ಕೇಳಿದ್ದರು. ಅದರಂತೆ ಹಣ ಕೊಡಲು ಕುಮಾರ್ ಒಪ್ಪಿದ್ದರು. ಬುಧವಾರ ಹಣ ಕೊಡಲು ದಿನ ನಿಗದಿಯಾಗಿತ್ತು. ಇದರ ನಡುವೆ ಲೋಕಾಯುಕ್ತ ಪೊಲೀಸರಿಗೆ ಈ ರೀತಿಯ ನಿರ್ದಿಷ್ಟ ಹಣ ನೀಡುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರು ನಂಗಾರು ಕುಮಾರ್ ಅವರು ಹಣ ಕೊಡಲು ಸಿದ್ಧವಾಗುವ ಹೊತ್ತಿಗೆ ಎಂಟ್ರಿ ಕೊಟ್ಟರು. ಕುಮಾರ್ ಅವರು ಬ್ರೋಕರ್ ಹರಿದತ್ತ ಅವರಿಗೆ ಹಣ ನೀಡುತ್ತಿದ್ದಂತೆಯೇ ಹಿಡಿದುಕೊಂಡರು.
ಈ ನಡುವೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ರಿಜಿಸ್ಟ್ರಾರ್ ಸೌಮ್ಯಲತಾ ಅವರನ್ನು ವಿಚಾರಿಸೋಣ ಎಂದು ಹೋದರೆ ಸೌಮ್ಯಲತಾ ಅವರು ಅದ್ಯಾವುದೋ ಮಾಯದಿಂದ ಆಫೀಸಿನಿಂದ ಪರಾರಿಯಾಗಿದ್ದರು. ಲೋಕಾಯುಕ್ತ ಎಸ್ಪಿ ಸುಜಿತ್ ಅವರ ನಿರ್ದೇಶನದಂತೆ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್ ಮತ್ತು ಇನ್ಸ್ಪೆಕ್ಟರ್ ರೂಪಶ್ರೀ ನೇತೃತ್ವದಲ್ಲಿ ನಡೆದ ದಾಳಿಐಲ್ಲಿ ಏಜೆಂಟ್ ಹರಿದತ್ತ ಸಿಕ್ಕಿಬಿದ್ದಿದ್ದಾನೆ. ಇದೀಗ ಸೌಮ್ಯಲತಾ ಅವರಿಗೂ ನೋಟಿಸ್ ನೀಡಲಾಗಿದ್ದು, ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿದೆ.