ಮಂಗಳೂರಿನ ಒಂದೇ ಕುಟುಂಬದ ನಾಲ್ವರು ಸಾವು!
– ಸೌದಿಯಲ್ಲಿ ಭೀಕರ ಅಪಘಾತ: ಕಾರು ಅಪಘಾತ
– ಇಬ್ಬರು ಪವಾಡ ರೀತಿಯಲ್ಲಿ ಪಾರು
NAMMUR EXPRESS NEWS
ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಕತಾರ್ನಿಂದ ಮದೀನಾಕ್ಕೆ ಉಮ್ರಾ ನಿರ್ವಹಿಸಲು ಬುಧವಾರ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದಾಗ ರಿಯಾದ್ ಹೊರವಲಯದ ಝುಲ್ಫಾ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮೃತ ನಾಲ್ವರು ಒಂದೇ ಕುಟುಂಬದವರಾಗಿದ್ದು, ಮೂಲತಃ ದಕ್ಷಿಣ ಕನ್ನಡದ ಹಳೆಯಂಗಡಿಯ ತೋಕೂರಿನ ನಿವಾಸಿಗಳಾಗಿದ್ದಾರೆ. ಮೃತರನ್ನು ಇಲ್ಲಿನ ಶಮೀಮ್ ಹಾಗೂ ಝರೀನಾ ದಂಪತಿಯ ಪುತ್ರಿ ಹಿಬಾ(29), ಆಕೆಯ ಪತಿ ಮುಹ್ಮದ್ ರಮೀಝ್(34), ಅವರ ಮಕ್ಕಳಾದ ಆರೂಶ್(3) ಹಾಗೂ ಮೂರು ತಿಂಗಳ ರಾಹ ಎಂದು ಗುರುತಿಸಲಾಗಿದೆ.
ಹಿಬಾ ಹಾಗೂ ಕುಟುಂಬಸ್ಥರು ಚಲಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿಯಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರು ಸಂಪೂರ್ಣ ನುಜ್ಜು-ಗುಜ್ಜಾಗಿದ್ದು, ನಾಲ್ಕವರು ಕೂಡ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಕಾರಿನಲ್ಲಿ ಹಿಬಾ ಅವರ ಸಹೋದರಿ ಶಬ್ನಮ್ ಅವರ ಮಗಳು ಫಾತಿ(19) ಸಂಚರಿಸುತ್ತಿದ್ದು, ಅವರು ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಈ ಕಾರಿನಲ್ಲಿದ್ದ ಹಿಬಾ ಅವರ ಮತ್ತೊಬ್ಬರು ಸಹೋದರಿ ಲುಬ್ನಾ ಅವರ 4 ವರ್ಷದ ಈಸ ಎಂಬ ಮಗು ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸದೃಶವಾಗಿ ಬದುಕಿಳಿದಿದೆ.
ಮೃತ ಹಿಬಾ ಅವರ ತಂದೆ ಶಮೀಮ್, ತಾಯಿ ಝರೀನಾ ಹಾಗೂ ಮೊಮ್ಮಕ್ಕಳು ಒಂದು ಕಾರಿನಲ್ಲಿ ಹಾಗೂ ಹಿಬಾ ಹಾಗೂ ಅವರ ಪತಿ, ಮಕ್ಕಳು ಇನ್ನೊಂದು ಕಾರಿನಲ್ಲಿ ಸಂಚರಿಸುತ್ತಿದ್ದರು. ಅವರು ಮಂಗಳವಾರ ಫಜರ್ ನಮಾಝ್ ಮುಗಿಸಿಕೊಂಡು ಉಮ್ರಾ ಯಾತ್ರೆಗೆ ತೆರಳಿದ್ದರು. ಈ ಕುಟುಂಬದ ಅಷ್ಟು ಮಂದಿ ಸದಸ್ಯರು ಮಂಗಳವಾರ ರಾತ್ರಿ ರಿಯಾದ್ ತಲುಪಿದ್ದು, ಅಲ್ಲಿ ತಮ್ಮ ಕುಟುಂಬಸ್ಥರ ಮನೆಯಲ್ಲಿ ಉಳಿದುಕೊಂಡು ಬುಧವಾರ ಬೆಳಗ್ಗೆ ರಿಯಾದ್ನಿಂದ ಮತ್ತೆ ಉಮ್ರಾ ಯಾತ್ರೆ ಪ್ರಾರಂಭಿಸಿದ್ದರು.