ಬಿಜೆಪಿ ಪಕ್ಷಕ್ಕೆ ಶಾಕ್!
– ವಿಕಸಿತ ಭಾರತ ಮೆಸೇಜ್ ಮಾಡದಂತೆ ಆದೇಶ
– ಪಕ್ಷದ ವಿರುದ್ಧ ಸಣ್ಣ ದನಿ ಎತ್ತಿದ ಸದಾನಂದ ಗೌಡ
– ಬಿಜೆಪಿ ಈ ಬಾರಿ ಅಬ್ಬರದ ಪ್ರಚಾರಕ್ಕೆ ಬ್ರೇಕ್!?
– ಜೆಡಿಎಸ್ – ಬಿಜೆಪಿ ಸಮನ್ವಯ ಸಮಿತಿ ರಚನೆ
– ಚುನಾವಣೆ ಹಿನ್ನೆಲೆ: ಹಲವು ಪರೀಕ್ಷೆ ಮುಂದೂಡಿಕೆ
– ಕೇಜ್ರಿವಾಲ್ ಬಂಧನ: ಜೈಲಿನಿಂದಲೇ ಆಡಳಿತ ಎಂದ ಕೇಜ್ರಿವಾಲ್
NAMMUR EXPRESS NEWS
ನವ ದೆಹಲಿ: ಅಭಿವೃದ್ಧಿ ಹೊಂದಿದ ಭಾರತದ ಸಂದೇಶಗಳನ್ನು ವಾಟ್ಸಾಪ್ನಲ್ಲಿ ಕಳುಹಿಸುವುದನ್ನು ತಕ್ಷಣ ನಿಲ್ಲಿಸುವಂತೆ ಚುನಾವಣಾ ಆಯೋಗವು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆದೇಶಿಸಿದೆ. ಲೋಕಸಭಾ ಚುನಾವಣೆ 2024ರ ದಿನಾಂಕಗಳನ್ನ ಘೋಷಿಸಿದ ನಂತರ, ದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಆಯೋಗ ತಿಳಿಸಿದೆ. ಹೀಗಾಗಿ ಅಂತಹ ಸಂದೇಶವನ್ನ ಕಳುಹಿಸುವಂತಿಲ್ಲ ಎಂದು ತಾಕೀತು ಮಾಡಿದೆ. ಹೌದು, ಕೇಂದ್ರ ಸರ್ಕಾರವು ವಾಟ್ಸಾಪ್’ನಲ್ಲಿ ಕಳುಹಿಸುತ್ತಿರುವ ವಿಕಸಿತ್ ಭಾರತ್ ಸಂದೇಶಗಳ ಬಗ್ಗೆ ಚುನಾವಣಾ ಆಯೋಗವು ಗಂಭೀರವಾಗಿದೆ. ಆ ಸಂದೇಶಗಳನ್ನ ಕಳುಹಿಸುವುದನ್ನ ತಕ್ಷಣವೇ ನಿಲ್ಲಿಸಿ, ಮಾದರಿ ನೀತಿ ಸಂಹಿತೆ ಅನುಸರಿಸುವಂತೆ ನಿರ್ದೇಶನ ನೀಡಲಾಗಿದೆ. ಅಷ್ಟೇ ಅಲ್ಲ. ಈ ಬಗ್ಗೆ ಸಂಪೂರ್ಣ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆಗೆ ಸೂಚಿಸಲಾಗಿದೆ.
ಕೇಜ್ರಿವಾಲ್ ಬಂಧನ: ಜೈಲಿನಿಂದಲೇ ಆಡಳಿತ ಎಂದ ಕೇಜ್ರಿವಾಲ್
ಮದ್ಯನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಇದೀಗ ಜೈಲಿನಿಂದಲೇ ಆಡಳಿತ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಅರವಿಂದ್ ಕುಟುಂಬದವರನ್ನು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಂಧನದ ಕುರಿತು ಪ್ರತಿಕ್ರಿಯಿಸಿದ ದೆಹಲಿ ಸಚಿವ ಮತ್ತು ಆಮ್ ಆದ್ಮ ಪಕ್ಷದ ನಾಯಕ ಅತಿಶಿ, ಜಾರಿ ನಿರ್ದೇಶನಾಲಯದ ಹಿಂದೆ ರಾಜಕೀಯ ಮಾಡುವುದನ್ನು ಬಿಜೆಪಿ ನಿಲ್ಲಿಸುವಂತೆ ಕೇಳಿಕೊಂಡರು.ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ. ಇವೆಲ್ಲಾ ಮಾಡಿ ಚುನಾವಣೆ ಗೆಲ್ಲಬಹುದು ಎಂದು ಬಿಜೆಪಿ ಅಂದುಕೊಂಡಿರಬೇಕು ಎಂದು ಅತಿಶಿ ಹೇಳಿದ್ದಾರೆ.
ಬಿಜೆಪಿಯನ್ನು ಶುದ್ಧೀಕರಣ ಮಾಡುವುದಾಗಿ ಘೋಷಣೆ
ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ವಿ. ಸದಾನಂದ ಗೌಡ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇದ್ದಂತಹ ಊಹಾ-ಪೋಹಾಗಳಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಸುದ್ಧಿಗೋಷ್ಠಿ ಮೂಲಕ ಮಾಹಿತಿ ನೀಡಿದ ಡಿ.ವಿ. ಸದಾನಂದ ಗೌಡ ಅವರು ಕಾಂಗ್ರೆಸ್ ಸೇರುವ ವಿಚಾರವನ್ನು ಅಲ್ಲಗಳೆದಿದ್ದಾರೆ. ಕೇಂದ್ರದಲ್ಲಿ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಕರ್ನಾಟಕದ ಬಿಜೆಪಿಯನ್ನು ಶುದ್ಧೀಕರಣ ಮಾಡುವವರೆಗೆ ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಕರ್ನಾಟಕದ ಬಿಜೆಪಿಯನ್ನು ಶುದ್ಧೀಕರಣ ಮಾಡುವವರೆಗೆ ವಿರಮಿಸುವುದಿಲ್ಲ. ರಾಜ್ಯದಲ್ಲಿ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ತನಗೆ., ತನ್ನ ಮನೆಯವರಿಗೆ, ತನ್ನ ಚೇಲಾಗಳಿಗೆ ಅಂತಾಗಿದೆ ಇದು ಆಗ್ಬಾರ್ದು ಎಂದಿದ್ದಾರೆ.
ಬಿಜೆಪಿಯಿಂದ ನೋ ಮೈಕ್, ನೋ ಚೇರ್ಸ್ ಪ್ರಚಾರ
ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಸಣ್ಣಮಟ್ಟಿನ ಜನ ಸಮುದಾಯವನ್ನು ತಲುಪಿ ಪ್ರಚಾರ ಮಾಡುವವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೋ ಮೈಕ್, ನೋ ಚೇರ್ಸ್ ಅಭಿಯಾನ ಹಮ್ಮಿಕೊಂಡಿದೆ. ತಳಮಟ್ಟದಲ್ಲಿ ಜನರನ್ನು ತಲುಪುವ ಉದ್ದೇಶದೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಏಪ್ರಿಲ್ 5ರ ಒಳಗೆ ರಾಜ್ಯದ ಎಲ್ಲಾ ಕಡೆಗಳಲ್ಲಿ ಚುನಾವಣಾ ಪ್ರಚಾರ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಅಭಿಯಾನದಡಿ ರಸ್ತೆ ಬದಿಗಳಲ್ಲಿ, ಸಣ್ಣಪುಟ್ಟ ಹಳ್ಳಿಗಳ ಮರಗಳ ಅಡಿಯಲ್ಲಿ ಅಥವಾ ಮನೆಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಗುತ್ತದೆ. ಒಂದು ಬಾರಿಯ ಸಭೆಯ ವೇಳೆ ಸುಮಾರು ನೂರು ಜನರನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ದೊಡ್ಡ ದೊಡ್ಡ ರ್ಯಾಲಿಗಳನ್ನು ನಡೆಸುವ ಬದಲು ಸಣ್ಣಪುಟ್ಟ ಸಭೆಗಳನ್ನು ನಡೆಸುವ ಮೂಲಕ ಜನರನ್ನು ತಲುಪುವುದು ಉತ್ತಮ ವಿಧಾನವಾಗಿದೆ. ಈ ಮೂಲಕ ಪ್ರತಿಯೊಬ್ಬರಿಗೂ ನಾವು ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡಬಹುದು ಎಂದು ಪಕ್ಷದ ವಿವಿಧ ಘಟಕಗಳ ಮುಖ್ಯಸ್ಥರ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ . ಸಣ್ಣ ಮಟ್ಟದ ಸ್ಥಳೀಯ ಚುನಾವಣಾ ಪ್ರಚಾರ ಸಭೆಗಳಿಗೆ ಪಕ್ಷದ ರಾಜ್ಯ ಘಟಕವು 22 ವಿವಿಧ ಘಟಕಗಳನ್ನು ಸ್ಥಾಪಿಸಿದೆ. ಇದರಲ್ಲಿ ರೈತರು, ವಕೀಲರು, ವೈದ್ಯರು ಹಾಗೂ ಕೇಂದ್ರ ಸರ್ಕಾರ ಯೋಜನೆಗಳ ಫಲಾನುಭವಿಗಳು ಸೇರಿದ್ದಾರೆ.
ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಉಭಯ ಪಕ್ಷಗಳ ನಡುವೆ ಮೂಡುವ ವೈಮನಸ್ಸು ಹಾಗೂ ಗೊಂದಲಗಳನ್ನು ಪರಿಹರಿಸುವ ಸಲುವಾಗಿ ಸಮನ್ವಯ ಸಮಿತಿಯನ್ನು ರಚಿಸಲು ಉದ್ದೇಶಿಸಲಾಗಿದೆ. ಸಮಿತಿಯಲ್ಲಿ ಎರಡು ಪಕ್ಷಗಳ ನಾಯಕರು ಇರಲಿದ್ದಾರೆ. ಕ್ಷೇತ್ರ ಮಟ್ಟದಲ್ಲಿ ಈ ನಾಯಕರು ಕಾರ್ಯನಿರ್ವಹಿಸಲಿದ್ದಾರೆ.
ಮೇ 8ಕ್ಕೆ ನಿಗದಿಯಾಗಿದ್ದ ಪಿಎಸ್ಐ ಪರೀಕ್ಷೆ ಮುಂದೂಡಿಕೆ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 8 ಕ್ಕೆ ನಿಗದಿಯಾಗಿದ್ದ ಪಿಎಸ್ಐ ಪರೀಕ್ಷೆಯನ್ನು ಮುಂದೂಡಲಾಗಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್), ಕಲ್ಯಾಣ ಕರ್ನಾಟಕದ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 402 ಖಾಲಿ ಹುದ್ದೆಗಳ ನೇರ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿತ್ತು. ಅದರಂತೆ ಮೇ. 8ಕ್ಕೆ ಪರೀಕ್ಷಾ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದ ಮೇ.8ಕ್ಕೆ ನಡೆಯಬೇಕಿದ್ದ ಎಲ್ಲ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷೆಯ ದಿನಾಂಕವನ್ನು ಪ್ರಾಧಿಕಾರದ ವೈಬ್ಸೈಟ್ನಲ್ಲಿ ಹೊರಡಿಸಲಾಗುವುದು ಎಂದು ಪ್ರಕಟಣೆ ಹೊರಡಿಸಿದೆ.