ಹೊಸನಗರದಲ್ಲೊಂದು ದುರಂತ ಘಟನೆ ಪತ್ನಿಯ ಸಾವಿನ ಕೊರಗು ಪತಿ ನೇಣಿಗೆ ಶರಣು
– ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಗಾಜು ಒಡೆದ ದುಷ್ಕರ್ಮಿಗಳು
– ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು
– ಹೊಳೆಹೊನ್ನೂರಿನಲ್ಲಿ ಅಪಘಾತ, ಚಿಕಿತ್ಸೆ ಫಲಿಸದೆ ಸಾವು
NAMMUR EXPRESS NEWS
ಹೊಸನಗರ : ಪಟ್ಟಣದ ಮಾವಿನಕೊಪ್ಪ ನಿವಾಸಿ ಬಸ್ ಏಜೆಂಟ್ ರಾಘವೇಂದ್ರ ರವರ ತಂದೆ 67 ವರ್ಷದ ಎಸ್ ಎಂ ವಿಶ್ವನಾಥ ರವರು ಮಾರ್ಚ್ 21ರ ಗುರುವಾರ ಸಂಜೆ ಸುಮಾರು 7:30ರ ನಂತರ ತಮ್ಮ ಮನೆಯಲ್ಲಿ ಫ್ಯಾನ್ ನೇತಾಕಲು ಬಿಟ್ಟಿರುವ ಕಬ್ಬಿಣದ ಕೊಂಡಿಗೆ ಬಟ್ಟೆ ಸಿಕ್ಕಿಸಿ ನೇಣಿಗೆ ಶರಣಾದ ದುರಂತ ಘಟನೆ ಸಂಭವಿಸಿದೆ. ವಿಶ್ವನಾಥ್ ರವರ ಪುತ್ರ ಏಜೆಂಟ್ ರಾಘು ಸಂಜೆ ತನ್ನ ತಂದೆಗೆ ಕಾಫಿ ಮಾಡಿ ಕೊಟ್ಟು ಬಸ್ ಬುಕ್ ಮಾಡಲು ಬಸ್ಟ್ಯಾಂಡಿಗೆ ತೆರಳಿದ್ದು ರಾತ್ರಿ 9:30ರ ನಂತರ ಮನೆಗೆ ತೆರಳಿದಾಗ ತಂದೆ ನೇಣಿಗೆ ಶರಣಾಗಿದ್ದು ಕಂಡು ಸ್ತಂ ಬೀಭೂತರಾಗಿದ್ದರು. ರಾಘವೇಂದ್ರ ಅವರ ತಾಯಿ ಶ್ರೀಮತಿ ಲೀಲಾವತಿಯವರು ಆರು ತಿಂಗಳ ಹಿಂದೆ ಅಕಾಲ ಮರಣ ಹೊಂದಿದ್ದು ಪತ್ನಿಯ ಮರಣ ನಂತರ ವಿಶ್ವನಾಥ್ ರವರು ಪತ್ನಿಯ ಕೊರಗಿನಲ್ಲಿ ದಿನ ದೂಡುತ್ತಿದ್ದರೆಂದು ತಿಳಿದು ಬಂದಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ
ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಗಾಜು ಒಡೆದ ದುಷ್ಕರ್ಮಿಗಳು
ಶಿವಮೊಗ್ಗ : ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಗಾಜನ್ನು ಕಿಡಿಗೇಡಿಗಳು ಒಡೆದಿದ್ದಾರೆ. ಮನೆಯೊಂದಕ್ಕೆ ನುಗ್ಗಿ ಪೀಠೋಪಕರಣಗಳನ್ನು ಮುರಿದಿದ್ದಾರೆ. ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ಕಳೆದ ರಾತ್ರಿ ಬೈಕುಗಳಲ್ಲಿ ಬಂದ ದುಷ್ಕರ್ಮಿಗಳು ಮನೆಯೊಂದರ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿನ ಗಾಜು ಒಡೆದಿದ್ದಾರೆ. ಬೈಕ್ ಒಂದರ ಲೈಟ್ ಒಡೆದು ಹಾಕಿದ್ದಾರೆ. ಇನ್ನು ಮನೆಯೊಂದಕ್ಕೆ ನುಗ್ಗಿ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ. ರಾತ್ರಿ ಬೈಕಿನಲ್ಲಿ ಬಂದ ಗ್ಯಾಂಗ್ ಲಾಂಗು, ಮಚ್ಚು ಹಿಡಿದು ಸುತ್ತಾಡಿದೆ. ಇದೆ ಗ್ಯಾಂಗ್ ದುಷ್ಕೃತ್ಯ ಎಸಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ
ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು
ಬೈಕೋಡು : ಮನೆ ಸಮೀಪದ ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಐದು ವರ್ಷದ ಬಾಲಕಿ ಪ್ರಜ್ಞಾ ಮೃತಪಟ್ಟಿದ್ದಾಳೆ. ಬ್ಯಾಕೋಡು ಸಮೀಪದ ಚಂಗೊಳ್ಳಿಯಲ್ಲಿ ಘಟನೆ ಸಂಭವಿಸಿದೆ. ರವಿಚಂದ್ರ, ವೀಣಾ ದಂಪತಿ ಪುತ್ರಿ ಪ್ರಜ್ಞಾ, ಶಾಲೆಯಿಂದ ಮನೆಗೆ ಬಂದು ತನ್ನ ತಮ್ಮನೊಂದಿಗೆ ಆಟವಾಡುತ್ತಿದ್ದ ಸಂದರ್ಭ ಕೃಷಿ ಹೊಂಡಕ್ಕೆ ಕಾಲು ಜಾರಿ ಇಬ್ಬರೂ ಬಿದ್ದಿದ್ದಾರೆ. ಇವರ ಚೀರಾಟ ಕೇಳಿದ ಮನೆಯವರು ಸ್ಥಳಕ್ಕೆ ಬರುವಷ್ಟರಲ್ಲಿ ತಮ್ಮನನ್ನು ರಕ್ಷಿಸಿದ ಪ್ರಜ್ಞಾ, ತಾನು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳೆಹೊನ್ನೂರಿನಲ್ಲಿ ಅಪಘಾತ, ಚಿಕಿತ್ಸೆ ಫಲಿಸದೆ ಸಾವು
ಹೊಳೆಹೊನ್ನೂರು : ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಿದ್ದಲಿಂಗಪ್ಪ (45) ಎಂಬುವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ ಕವಿತಾ, ಪುತ್ರ, ಪುತ್ರಿ ಇದ್ದಾರೆ. ಹೊಳೆಹೊನ್ನೂರು ಪಟ್ಟಣಕ್ಕೆ ಬರಲು ವಿವೇಕಾನಂದ ಲಯನ್ಸ್ ವಿದ್ಯಾಶಾಲೆ ಎದುರು ರಸ್ತೆ ಪಕ್ಕದಲ್ಲಿ ನಿಂತಿದ್ದ ಸಿದ್ದಲಿಂಗಪ್ಪ ಅವರಿಗೆ ಬೈಕ್ ಡಿಕ್ಕಿಯಾಗಿ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು. ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸಿದ್ದಲಿಂಗಪ್ಪ ಅವರ ನೇತ್ರಗಳನ್ನು ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ದಾನ ಮಾಡಿ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.