ಕುಚ್ಚಂಗಿ ಕೆರೆಯಲ್ಲಿ ಭಸ್ಮವಾದ ಕಾರು ಪತ್ತೆ, ಒಳಗೆ 3 ಶವಗಳು!
– ಅಜ್ಜಿ ಮತ್ತು ಮೊಮ್ಮಗಳನ್ನು ಮೂಟೆ ಕಟ್ಟಿ ಎಸೆದ ದುರುಳರು
– ತೋಟಕ್ಕೆ ಹೋದ ಕಾರ್ಮಿಕನನ್ನು ಅಟ್ಟಾಡಿಸಿ ಕೊಂದ ಒಂಟಿ ಸಲಗ
– ಸಮುದ್ರದಲ್ಲಿ ಮೀನು ಹಿಡಿಯುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋದ ವಿದ್ಯಾರ್ಥಿ
NAMMUR EXPRESS NEWS
ತುಮಕೂರು: ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿದೆ . ಅದರಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂರು ಶವಗಳಿವೆ . ಇದೊಂದು ಭಯಾನಕ ಕೊಲೆ ಪ್ರಕರಣ ಎಂದು ಹೇಳಲಾಗುತ್ತಿದೆ. ಕೆಎ 43 ರಿಜಿಸ್ಟ್ರೇಷನ್ ನಂಬರಿನ ಮಾರುತಿ ಕಂಪನಿಯ ಎಸ್ ಪ್ರೆಸ್ಸೋ ಕಾರು ಇದಾಗಿದ್ದು, ಕಾರಿನಲ್ಲಿ ಮೂವರು ಮೃತದೇಹಗಳು ಸುಟ್ಟ ರೀತಿಯಲ್ಲಿ ಪತ್ತೆಯಾಗಿವೆ. ಮೃತರ ಗುರುತು ಪತ್ತೆಯಾಗಿಲ್ಲ. ತಡರಾತ್ರಿ ಕಾರನ್ನು ಈ ನೀರಿಲ್ಲದ ಕೆರೆಗೆ ಇಳಿಸಿ ಬೆಂಕಿ ಹಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಅಥವಾ ಬೆಂಕಿ ಹಚ್ಚಿ ಕೆಳಗೆ ತಳ್ಳಿರುವ ಸಾಧ್ಯತೆಯೂ ಇದೆ. ದಕ್ಷಿಣ ಕನ್ನಡ ಮೂಲದ ರಫಿಕ್ ಎಂಬುವರಿಗೆ ಸೇರಿದ ಕಾರು ಎನ್ನಲಾಗಿದೆ. ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ್ ಕೆ.ವಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಆದರೆ, ಕಾರಿನಲ್ಲಿ ಇದ್ದ ಮೂವರು ಯಾರು? ಅವರನ್ನು ಬೆಂಕಿ ಹಚ್ಚಿ ಕೊಲ್ಲಲಾಯಿತೇ? ಕಾರು ಬೆಂಕಿ ಹತ್ತಿಕೊಂಡು ಹೊರಗೆ ಬರಲಾಗದೆ ಸುಟ್ಟು ಹೋದರೇ? ಹೀಗೆ ಹಲವು ಸಂಶಯಗಳಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
– ಅಜ್ಜಿ ಮತ್ತು ಮೊಮ್ಮಗಳನ್ನು ಮೂಟೆ ಕಟ್ಟಿ ಎಸೆದ ದುರುಳರು
ಮಂಡ್ಯ : ಭೀಕರ ಜೋಡಿ ಕೊಲೆಗೆ ಮಂಡ್ಯ ಜಿಲ್ಲೆ ಬೆಚ್ಚಿ ಬಿದ್ದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚುಂಚನಗಿರಿ ಬಳಿ ಅಜ್ಜಿ ಮತ್ತು ಮೊಮ್ಮಗಳನ್ನು ಕೊಂದು ಮೂಟೆ ಕಟ್ಟಿ ಹೊಂಡಕ್ಕೆ ಎಸೆದ ಭೀಕರ ಘಟನೆ ನಡೆದಿದೆ. ಅಜ್ಜಿ ಮತ್ತು ಮೊಮ್ಮಗಳ ಜೋಡಿ ಶವ ಹೊಂಡದಲ್ಲಿ ಪತ್ತೆಯಾಗುತ್ತಿದ್ದಂತೆಯೇ ಜನರು ಹೌಹಾರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಲ್ಕೆರೆ ಗ್ರಾಮದ ಜಯಮ್ಮ(45) ಮತ್ತು ರಿಷಿಕ (3) ಎಂಬವರೇ ಕೊಲೆಯಾದ ದುರ್ದೈವಿಗಳು. ದುಷ್ಕರ್ಮಿಗಳು ಇವರಿಬ್ಬರನ್ನು ಕೊಂದು ಮೂಟೆಯಲ್ಲಿ ಕಟ್ಟಿ ಹೊಂಡಕ್ಕೆ ಎಸೆದಿದ್ದಾರೆ. ಮೂರು ದಿನಗಳ ಹಿಂದೆ ಈ ಕೊಲೆ ಮಾಡಲಾಗಿದ್ದು, ಮೂರು ದಿನಗಳ ಬಳಿಕ ಹೊಂಡದಲ್ಲಿ ಕೊಳೆತ ಸ್ಥಿತಿಯಲ್ಲಿ ಅಜ್ಜಿ ಮತ್ತು ಮೊಮ್ಮಗಳ ಕಳೇಬರ ಪತ್ತೆಯಾಗಿದೆ.
ಇವರು ಅಲೆಮಾರಿ ಜನಾಂಗಕ್ಕೆ ಸೇರಿದವರಾಗಿದ್ದು, ಇತ್ತೀಚೆಗಷ್ಟೇ ಚುಂಚನಗಿರಿ ಸಮೀಪದ ಪಾಳ್ಯ ಗ್ರಾಮಕ್ಕೆ ಬಂದು ನೆಲೆಸಿದ್ದರು. ಚುಂಚನಗಿರಿ ಬಳಿ ಹೊಂಡದಲ್ಲಿ ಮೂಟೆ ತೇಲುತ್ತಿರುವ ಬಗ್ಗೆ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂಟೆ ಹೊರ ತೆಗೆದು ಪರಿಶೀಲನೆ ನಡೆಸಿದರು. ಮೂಟೆಯಲ್ಲಿ ಅಜ್ಜಿ ಮತ್ತು ಮೊಮ್ಮಗಳ ಶವ ಕಂಡು ಪೊಲೀಸರೇ ಹೌಹಾರಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಮೃತರ ಗುರುತು ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಸಾಗುತ್ತಿದೆ.
– ತೋಟಕ್ಕೆ ಹೋದ ಕಾರ್ಮಿಕನನ್ನು ಅಟ್ಟಾಡಿಸಿ ಕೊಂದ ಒಂಟಿ ಸಲಗ
ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ಎರಗಿದ ಒಂಟಿ ಸಲಗವು ಕೊಂದು ಹಾಕಿದೆ. ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿಯಲ್ಲಿ ಘಟನೆ ನಡೆದಿದೆ. ತಮಿಳುನಾಡು ಮೂಲದ ಕೂಲಿ ಕಾರ್ಮಿಕ ಶ್ರೀಧರ್ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಶ್ರೀಧರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೂಲಿ ಕಾರ್ಮಿಕ ಶ್ರೀಧರ್ ಉಸಿರು ಚೆಲ್ಲಿದ್ದಾರೆ. ಶ್ರೀಧರ್ನ ಇಡೀ ಕುಟುಂಬವು ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ತೋಟಕ್ಕೆ ತೆರಳುತ್ತಿದ್ದಾಗ ಎದುರಿಗೆ ಒಂಟಿ ಸಲಗ ಬಂದಿದೆ.
ಈ ವೇಳೆ ಆನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆ ಬಳಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದೊಂದು ವರ್ಷದಿಂದ ಆನೆ ದಾಳಿಗೆ ಆರು ಮಂದಿ ಬಲಿಯಾಗಿದ್ದಾರೆ. ಕೆಆರ್ ಪೇಟೆ, ಕಂಚಿನ ಹಳ್ಳಿ ಸುತ್ತಮುತ್ತ ಒಂಟಿ ಸಲಗ ಓಡಾಡುತ್ತಿದೆ. ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕಿಡಿಕಾರಿದ್ದಾರೆ. ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ
– ಸಮುದ್ರದಲ್ಲಿ ಮೀನು ಹಿಡಿಯುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋದ ವಿದ್ಯಾರ್ಥಿ
ಮಂಗಳೂರು: ಮಂಗಳೂರಿನ ತೋಟಬೇಂಗ್ರೆಯ ಕಡಲ ತೀರದಲ್ಲಿ ಮೀನು ಹಿಡಿಯಲೆಂದು ಹೋಗಿದ್ದ ವಿದ್ಯಾರ್ಥಿ ಗಾಳಿ ಹಾಗೂ ನೀರಿನ ರಭಸಕ್ಕೆ ಸಿಲುಕಿ ದುರ್ಮರಣ ಹೊಂದಿದ್ದಾನೆ. ಪ್ರಜೀತ್ ಎಂ ತಿಂಗಳಾಯ(15) ಮೃತ ದುರ್ದೈವಿ. ಪ್ರಜೀತ್ ಬೆಂಗ್ರೆಯ ನಿವಾಸಿ ಮಿಥುನ್ ಎಂಬುವವರ ಪುತ್ರನಾಗಿದ್ದಾನೆ. ಮನೆಯ ಬಡತನ ಹಾಗೂ ವಿದ್ಯಾಭ್ಯಾಸದ ಖರ್ಚಿಗೆಂದು ತಂದೆ ಜತೆಗೆ ಪ್ರಜೀತ್ ಮೀನುಗಾರಿಕೆಗೆ ಹೋಗುತ್ತಿದ್ದ. ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಗಾಳಿ ಮತ್ತು ನೀರಿನ ರಭಸಕ್ಕೆ ಸಿಲುಕಿ ನೀರುಪಾಲಾಗಿದ್ದಾನೆ. ಸ್ಥಳೀಯರು ಪ್ರಜೀತ್ಗಾಗಿ ಹುಡುಕಾಟ ನಡೆಸಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಪ್ರಜೀತ್ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಪಣಂಬೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.