- ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ಸಿಟ್ಟು
- ತಕ್ಷಣ ಹಿಂಪಡೆಯುವಂತೆ ಸಿಎಂಗೆ ಪತ್ರ
ಬೆಂಗಳೂರು: ಮಲೆನಾಡಿನ ಅರಣ್ಯ ಪ್ರದೇಶವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ನಿರ್ಧಾರ ಇದೀಗ ಮಲೆನಾಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ ರಾಜ್ಯ ರಾಜಕೀಯದ ಹೊಸ ವಸ್ತುವಾಗಿದೆ. ಬಿಜೆಪಿ ಸರ್ಕಾರದಲ್ಲಿ ಹಿಡಿತ ಇರುವ ಮುಖ್ಯಮಂತ್ರಿ ಆಪ್ತರು ಈ ಡೀಲ್ ಹಿಂದೆ ಇದ್ದಾರೆ ಎಂಬ ಊಹಾಪೋಹದ ನಡುವೆ ನಿರ್ಧಾರ ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶ್ವದ ಪಾರಂಪರಿಕ ಕಾಡು ಹೊಂದಿರುವ ಮಲೆನಾಡು ಪ್ರದೇಶದ ಅರಣ್ಯ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಸರ್ಕಾರ ಚಿಂತನೆ ನಡೆಸುತ್ತಿರುವುದು ದುರದೃಷ್ಟಕರ. 1980ರಲ್ಲಿ ಭದ್ರಾವತಿ ಎಂಪಿಎಂ ಕಾರ್ಖಾನೆಗೆ 40 ವರ್ಷಗಳ ಸೀಮಿತ ಅವಧಿಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೇರಿದ ಅರಣ್ಯ ಪ್ರದೇಶ ಲೀಸ್ಗೆ ನೀಡಲಾಗಿತ್ತು. ಲೀಸ್ ಅವಧಿ ಮುಗಿದ ಕೂಡಲೇ ಈ ಪ್ರದೇಶ ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಪ್ರಸಕ್ತ ವರ್ಷ ಆಗಸ್ಟ್ ತಿಂಗಳಿನಲ್ಲಿ ಲೀಸ್ ಅವಧಿ ಮುಗಿದಿದೆ. ಎಂಪಿಎಂ ಕಾರ್ಖಾನೆ ಸ್ಥಗಿತವಾಗಿ ವರ್ಷಗಳೇ ಕಳೆದಿವೆ. ಹಾಗಾಗಿ ನಿಯಮಾನುಸಾರ ನೆಡುತೋಪುಗಳನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಮೂಲಕ ಸರ್ಕಾರದ ನಿರ್ಧಾರಕ್ಕೆ ದೊಡ್ಡ ಸವಾಲು ಎದುರಾಗಿದೆ. ಮತ್ತೆ ಮಲೆನಾಡಿನಲ್ಲಿ ಜನರಿಗೆ ಕಿರಿಕಿರಿ ಆಗಿದ್ದ ಅಕೇಶಿಯಾ ಹಟಾವೋ ಹೋರಾಟಕ್ಕೂ ಬಲ ಬಂದಂತಾಗಿದೆ.
ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ನೀಡುವುದರ ವಿರುದ್ಧ ಮಲೆನಾಡಿನ ಜಿಲ್ಲೆಗಳಲ್ಲಿ ಪ್ರತಿಭಟನೆಗಳೂ ಆರಂಭವಾಗಿದೆ. ಪ್ರಗತಿಪರರು, ಪರಿಸರ ಹೋರಾಟಗಾರರು, ಜನಸಾಮಾನ್ಯರೂ ಆತಂಕ ವ್ಯಕ್ತಪಡಿಸಿ, ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೂ ಸರ್ಕಾರ ಮಲೆನಾಡಿನ ಜನಜೀವನ, ಭವಿಷ್ಯದ ಜೊತೆಗೆ ಆಡವಾಡುತ್ತಿದೆ ಎಂದು ದೂರಿದ್ದಾರೆ. ಇದು ಈಗ ದೊಡ್ಡ ಸುದ್ದಿಯಾಗುತ್ತಿದೆ.