ಭೂಗತ ಪಾತಕಿ ಪ್ರಸಾದ್ ಪೂಜಾರಿ ಚೀನಾದಿಂದ ಗಡಿಪಾರು!
– ದಶಕಗಳಿಂದ ಭಾರತಕ್ಕೆ ಬೇಕಾಗಿದ್ದ ಅಂಡರ್ ವರ್ಲ್ಡ್ ಡಾನ್
– ಕರಾವಳಿ ನಂಟು ಹೊಂದಿರುವ ಈ ಪ್ರಸಾದ್ ಪೂಜಾರಿ ಯಾರು? ಚೀನಾಕ್ಕೆ ಆತ ಹೋಗಿದ್ದು ಏಕೆ?
NAMMUR EXPRESS NEWS
ಮಂಗಳೂರು: ರವಿ ಪೂಜಾರಿ, ಬನ್ನಂಜೆ ರಾಜ, ವಿಕ್ಕಿ ಶೆಟ್ಟಿ ಹೀಗೆ ಭೂಗತ ಪಾತಕಿಗಳ ಸಾಲಿನಲ್ಲಿ ಕರಾವಳಿಯ ನಂಟು ಹೊಂದಿರುವ ಮುಂಬೈಯ ಮತ್ತೊಬ್ಬ ಅಂಡರ್ ವರ್ಲ್ಡ್ ಡಾನ್ ಪ್ರಸಾದ್ ಪೂಜಾರಿ. ಪ್ರಸಾದ್ ಪೂಜಾರಿ ಮುಂಬೈನಲ್ಲಿ ತನ್ನ ಪಾತಕ ಕೃತ್ಯವನ್ನು ಆರಂಭಿಸಿ ಸುಮಾರು 20 ವರ್ಷಗಳಿಂದ ಚೀನಾದಲ್ಲಿ ನೆಲೆಸಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದ.
ಇದೀಗ, ಪ್ರಸಾದ್ ಪೂಜಾರಿಯನ್ನು ಮುಂಬೈ ಕ್ರೈಂ ಬ್ರಾಂಚ್ ಮುಂಬೈಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಪ್ರಸಾದ್ ಪೂಜಾರಿ ಚೀನಾದಿಂದ ಗಡಿಪಾರುಮುಂಬೈನಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಭೂಗತ ಪಾತಕಿ ಪ್ರಸಾದ್ ಪೂಜಾರಿಯನ್ನು ಚೀನಾ ಗಡಿಪಾರು ಮಾಡಿದ್ದು, ಪೊಲೀಸರು ಈತನನ್ನು ದೇಶಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ದಶಕದ ಹಿಂದೆ ಚೀನಾಕ್ಕೆ ಓಡಿಹೋಗಿ ಕೊಲೆ, ಹಫ್ತಾ ವಸೂಲಿ ಸೇರಿ ಮುಂಬೈನ ಪಾತಕ ಲೋಕದಲ್ಲಿ ತೊಡಗಿಸಿಕೊಂಡಿದ್ದ ಈತನನ್ನು ಕೆಲವು ತಿಂಗಳ ಹಿಂದೆ ಚೀನಾದಲ್ಲಿ ನಕಲಿ ಪಾಸ್ಪೋರ್ಟ್ ಆರೋಪದಡಿ ಬಂಧಿಸಿತ್ತು. ಚೀನಾದ ಮಹಿಳೆಯನ್ನು ಮದುವೆಯಾಗಿದ್ದ ಈತ ಹಾಕಾಂಗ್ಗೆ ಪತ್ನಿ ಜತೆ ಹೋಗುವಾಗ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆತ ಅಲ್ಲಿನ ಮಹಿಳೆಯನ್ನೇ ಮದುವೆಯಾಗಿದ್ದ ಕಾರಣ ಕೂಡಲೇ ಗಡಿಪಾರು ಮಾಡುವುದು ಅಷ್ಟೊಂದು ಸುಲಭದ ಪ್ರಕ್ರಿಯೆ ಆಗಿರಲಿಲ್ಲ. ಆದರೆ, ಇಂಟರ್ ಪೋಲ್ ಮೂಲಕ ಭಾರತದ ರಾಜತಾಂತ್ರಿಕ ಅಧಿಕಾರಿಗಳು ನಡೆಸಿದ್ದ ಸತತ ಪರಿಶ್ರಮದ ಬಳಿಕ ಪ್ರಸಾದ್ ಪೂಜಾರಿಯನ್ನು ಭಾರತಕ್ಕೆ ಗಡಿಪಾರು ಮಾಡುವುದಕ್ಕೆ ಅಲ್ಲಿನ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಅದರಂತೆ ಇಂದು ಬೆಳಗ್ಗೆ ಈತನನ್ನು ಭಾರತಕ್ಕೆ ಕರೆತಂದು ಮಧ್ಯಾಹ್ನ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ.
ಆರಂಭದಲ್ಲಿ ಭೂತಕ ಪಾತಕಿ ಛೋಟಾ ರಾಜನ್ ಹಾಗೂ ಕುಮಾರ್ ಪಿಳ್ಳೆ ಸಹಚರನಾಗಿ ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ. ಮುಂಬೈನ ಉದ್ಯಮಿಗಳು ರಾಜಕಾರಣಿಗಳನ್ನು ಬೆದರಿಸಿ ಅವರಿಂದ ಹಫ್ತಾ ವಸೂಲಿ ಮಾಡುವುದು, ಹಣ ಕೊಡದವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದ. ಚೀನಾದ ಗ್ವಾಂಗ್ ಡಾಂಗ್ ಪ್ರಾಂತ್ಯದ ಶೆನ್ಝೆನ್ ನಗರದ ಲೌಹು ಎಂಬಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯಲ್ಲಿ ಆತ ಉಳಿದುಕೊಂಡಿದ್ದ. ಈತನಿಗೆ ಒಂದು ಮಗು ಕೂಡ ಇದೆ ಎನ್ನಲಾಗುತ್ತಿದೆ. 2020ರಲ್ಲಿ ಮುಂಬೈನಲ್ಲಿ ನಡೆದಿದ್ದ ಹಫ್ತಾ ವಸೂಲಿ ಪ್ರಕರಣದಲ್ಲಿ ಆತನ ತಾಯಿ ಇಂದಿರಾ ವಿಠಲ ಪೂಜಾರಿ ಹಾಗೂ ಇಬ್ಬರು ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದರು.
ಸದ್ಯ ಭಾರತಕ್ಕೆ ಗಡಿಪಾರುಗೊಂಡಿರುವ ಪ್ರಸಾದ್ ಪೂಜಾರಿಯನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಆ ಮೂಲಕ ಹಲವು ಪ್ರಕರಣಗಳಲ್ಲಿ ಆತನ ಕೈವಾಡದ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕಲಿದ್ದಾರೆ. ಕರಾವಳಿ ಭಾಗದ ನಂಟು ಹೊಂದಿರುವ ಕಾರಣ ಇಲ್ಲಿಯ ಕೆಲವು ಪ್ರಕರಣಗಳಲ್ಲಿಯೂ ಆತನ ಕೈವಾಡದ ಬಗ್ಗೆ ಮುಂದಿನ ದಿನಗಳಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ.