ಶಿವರಾಜ್ ಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು!
– ಸಿನಿಮಾ, ಜಾಹೀರಾತು ನಿಷೇಧಿಸುವಂತೆ ಮನವಿ
– ಮತ್ತೆ ಬಿಜೆಪಿ ಸೇರಿದ ಜನಾರ್ದನ ರೆಡ್ಡಿ
NAMMUR EXPRESS NEWS
ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರ ಸಿನಿಮಾ, ಜಾಹೀರಾತು ಹಾಗೂ ಬಿಲ್ ಬೋರ್ಡ್ ಗಳನ್ನು ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಸಿನಿಮಾ ಮತ್ತು ವೈಯಕ್ತಿಕ ವರ್ಚಸ್ಸಿನ ಮೂಲಕ ಅವರು ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ತನಕ ಶಿವರಾಜ್ ಕುಮಾರ್ ಅವರ ಸಿನಿಮಾ, ಜಾಹೀರಾತು, ಬಿಲ್ ಬೋರ್ಡ್ಗಳನ್ನು ಪ್ರದರ್ಶನ ಮಾಡದಂತೆ ಚಿತ್ರಮಂದಿರ, ಟಿವಿ ಚಾನೆಲ್, ಸೋಶಿಯಲ್ ಮೀಡಿಯಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ರಘು ಮನವಿ ಮಾಡಿದ್ದಾರೆ.
ಮತ್ತೆ ಬಿಜೆಪಿ ಸೇರಿದ ಜನಾರ್ದನ ರೆಡ್ಡಿ
ಕೆಆರ್ಪಿಪಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ, ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೋಮವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಪಕ್ಷವನ್ನೂ ಅವರು ಬಿಜೆಪಿ ಜೊತೆ ವಿಲೀನ ಮಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಅವರು ತಮ್ಮ ಪತ್ನಿ ಅರುಣಾ ರೆಡ್ಡಿ ಹಾಗೂ ಕಾರ್ಯಕರ್ತರ ಜೊತೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, “ಬಹಳ ಸಂತೋಷ ತರುವಂತಹ ಸಂಗತಿ ಇದಾಗಿದೆ. ಬಿಜೆಪಿಗೆ ಸೇರ್ಪಡೆ ಆಗಿರುವುದರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಮೆಚ್ಚಿ, ಬಿಜೆಪಿ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಮರು ಸೇರ್ಪಡೆ ಆಗಿದ್ದಾರೆ,” ಎಂದರು. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪರವಾಗಿ ವಾತಾವರಣ ನಿರ್ಮಾಣವಾಗ್ತಿದೆ. ಮುಂದಿನ ಲೋಕಸಭೆ ಚುನಾವಣೆ ದೇಶದ ಭವಿಷ್ಯ ರೂಪಿಸುವ ಚುನಾವಣೆ. ಕರ್ನಾಟಕ ರಾಜ್ಯದಲ್ಲಿ ಐತಿಹಾಸಿಕ ಗೆಲುವು ಬಿಜೆಪಿಗೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
– ಯಾವುದೇ ಷರತ್ತು, ಫಲಾಪೇಕ್ಷೆ ಇಲ್ಲದೆ ಬಿಜೆಪಿ ಸೇರ್ಪಡೆ
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಮಾಜಿ ಸಚಿವರೂ ಆಗಿರುವ ಗಾಲಿ ಜನಾರ್ದನ ರೆಡ್ಡಿ, “ಯಾವುದೇ ಷರತ್ತು, ಫಲಾಪೇಕ್ಷೆ ಇಲ್ಲದೆ ಬಿಜೆಪಿಗೆ ಸೇರ್ಪಡೆ ಆಗಿದ್ದೇನೆ. ಮರಳಿ ತಾಯಿಯ ಮಡಿಲಿಗೆ ಬಂದಂತಾಗಿದೆ,” ಎಂದು ಹೇಳಿದರು. ದೇಶದ ಸಮಗ್ರತೆ ಅಭಿವೃದ್ಧಿಗೆ ಕೆಲಸ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಲ್ಲಿಗೆ ಆಹ್ವಾನಿಸಿ ಬಿಜೆಪಿಗೆ ಬಂದು ಕೆಲಸ ಮಾಡಬೇಕು ಎಂದು ಆಹ್ವಾನ ನೀಡಿದ್ದರು. ಇದನ್ನು ಒಪ್ಪಿಕೊಂಡು ಪಕ್ಷ ಸೇರ್ಪಡೆ ಆಗಿದ್ದೇನೆ,” ಎಂದರು.
ಬಿಜೆಪಿ ಕರ್ನಾಟಕದಲ್ಲಿ ನೆಲವೂರಲು ಬಿಎಸ್ ಯಡಿಯೂರಪ್ಪ ಎಂಬ ಅಭೂತಪೂರ್ವ ಸೃಷ್ಟಿ ಕಾರಣ. ಬಿಎಸ್ವೈ ಸಂಪುಟದಲ್ಲಿ ಸಚಿವನಾಗಿ ನಾನು ಕೆಲಸ ಮಾಡಿದ್ದೆ. ಇವಾಗ ತಂದೆ ಹಾಗೂ ಮಗನ ಜೊತೆಗೆ ಕೆಲಸ ಮಾಡುವ ಅದೃಷ್ಟ ಒದಗಿ ಬಂದಿದೆ ಎಂದು ತಿಳಿಸಿದರು. ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ದೇಶ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಷರತ್ತು, ಫಲಾಪೇಕ್ಷೆ ಇಲ್ಲದೆ ಬಿಜೆಪಿಗೆ ಬಂದಿದ್ದೇನೆ. ನಾನು ಎಲ್ಲಾ ಏಳು ಬೀಳು ನೋಡಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಕಾರ್ಯಕರ್ತನಾಗಿ ದುಡಿಯುತ್ತೇನೆ. ನನ್ನ ಮನೆಗೆ ವಾಪಸ್ ಬಂದಂತಾಗಿದೆ ಎಂದು ಸಂತಸ ಹಂಚಿಕೊಂಡರು.