ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ನೀರು ಪಾಲು!
– ಕುಡಿದು ಬರ್ತಿದ್ದ ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಚಪ್ಪಲಿ ಸೇವೆ!
• ಚಪ್ಪಲಿಯಿಂದ ಅಟ್ಟಾಡಿಸಿದ ವಿದ್ಯಾರ್ಥಿಗಳು
– IPLಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಕೋಟ್ಯಾಂತರ ರೂ ಕಳೆದುಕೊಂಡ ಪತಿ
• ಸಾಲಗಾರರ ಕಾಟಕ್ಕೆ ಪತ್ನಿ ಆತ್ಮಹತ್ಯೆ
NAMMUR EXPRESS NEWS
ಮೈಸೂರು: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ. ಮೃತರು ಮೈಸೂರು ಮೂಲದ ನಾಗೇಶ್(40), ಭರತ್(17), ಗುರು(32), ಮಹದೇವ್(16) ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ. ಕುಟುಂಬಸ್ಥರು, ಸ್ನೇಹಿತರು ಸೇರಿ ಒಂದೇ ಬಸ್ನಲ್ಲಿ 40 ಜನ ಮೈಸೂರಿನಿಂದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ನಾಲ್ವರು ಕಾವೇರಿ ನದಿಯಲ್ಲಿ ಈಜಾಡಲು ಹೋಗಿದ್ದು, ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ರಕ್ಷಣೆ ಮಾಡಲು ಉಳಿದ ಮೂವರು ಹೋಗಿ ದುರಂತ ಅಂತ್ಯಕಂಡಿದ್ದಾರೆ.
– ಕುಡಿದು ಬರ್ತಿದ್ದ ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಚಪ್ಪಲಿ ಸೇವೆ!
• ಚಪ್ಪಲಿಯಿಂದ ಅಟ್ಟಾಡಿಸಿದ ವಿದ್ಯಾರ್ಥಿಗಳು
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಸಾಕಷ್ಟು ಜನ ಇರುತ್ತಾರೆ. ಅವರು ಲಕ್ಷಾಂತರ ಮಕ್ಕಳನ್ನು ದೊಡ್ಡ ವ್ಯಕ್ತಿಗಳನ್ನಾಗಿ ಮಾಡಿದ್ದಾರೆ. ಅವರ ಮಧ್ಯೆ ಕೆಲವರಿಗೆ ಸರ್ಕಾರಿ ಶಾಲೆಗಳೆಂದರೆ ಅದೇನೋ ನಿರ್ಲಕ್ಷ್ಯ. ಶಿಕ್ಷಕರಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಶಕ್ತಿ ಇದ್ದರೂ ನಿರ್ಲಕ್ಷ್ಯ ತೋರುತ್ತಾರೆ. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ನಿದ್ದೆ ಮಾಡಿ ಸಂಬಳ ತೆಗೆದುಕೊಳ್ಳುವವರಿದ್ದಾರೆ. ಕಾಟಾಚಾರಕ್ಕೆ ಶಾಲೆಗೆ ಬರುವ ಶಿಕ್ಷಕರೂ ಇದ್ದಾರೆ. ಇನ್ನೂ ಕೆಲವರು ಕುಡಿತದ ದಾಸರಾಗಿರುತ್ತಾರೆ.. ಕುಡಿದೇ ಶಾಲೆಗೆ ಬರುತ್ತಾರೆ. ಶಾಲೆಯಲ್ಲೇ ಕುಡಿಯುತ್ತಾರೆ. ಇದೇ ರೀತಿ ಶಿಕ್ಷಕನೊಬ್ಬ ಕುಡಿದು ಬಂದು ವಿದ್ಯಾರ್ಥಿಗಳಿಂದ ಧರ್ಮದೇಟು ತಿಂದಿದ್ದಾನೆ.
• ಚಪ್ಪಲಿಯಿಂದ ಅಟ್ಟಾಡಿಸಿದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರು ಬುದ್ಧಿ ಕಲಿಸಬೇಕು. ಆದ್ರೆ ಇಲ್ಲಿ ವಿದ್ಯಾರ್ಥಿಗಳೇ ಶಿಕ್ಷಕನೊಬ್ಬನಿಗೆ ಬುದ್ಧಿ ಕಲಿಸಿದ್ದಾರೆ. ದಿನಾ ಕಂಠಪೂರ್ತಿ ಕುಡಿದು ಶಾಲೆಗೆ ಬರ್ತಿದ್ದ ಶಿಕ್ಷಕನಿಗೆ ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ. ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ಚಪ್ಪಲಿ ಸೇವೆ ಮಾಡಿದ್ದಾರೆ. ಶಾಲಾ ಆವರಣದಲ್ಲೆಲ್ಲಾ ಆಟ್ಟಾಡಿಸಿದ್ದಾರೆ. ಕೊನೆಗೆ ವಿದ್ಯಾರ್ಥಿಗಳ ಆಕ್ರೋಶದಿಂದ ಭಯಭೀತನಾದ ಶಿಕ್ಷಕ ಬೈಕ್ ಏರಿ ಪರಾರಿಯಾಗಿದ್ದಾರೆ.
IPLಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಕೋಟ್ಯಾಂತರ ರೂ ಕಳೆದುಕೊಂಡ ಪತಿ
• ಸಾಲಗಾರರ ಕಾಟಕ್ಕೆ ಪತ್ನಿ ಆತ್ಮಹತ್ಯೆ
ಐಪಿಎಲ್ IPL ಕ್ರಿಕೆಟ್ ಬೆಟ್ಟಿಂಗ್ ಗೀಳಿಗೆ ಬಿದ್ದ ಪತಿ ಬರೋಬ್ಬರಿ 1.5 ಕೋಟಿ ರೂ. ಸಾಲ ಮಾಡಿಕೊಂಡಿದ್ದ. ಇತ್ತ ಸಾಲ ಕೊಟ್ಟವವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಮಾ.20ರಂದು ಚಿತ್ರದುರ್ಗ ನಗರದ ಹೊಳಲ್ಕೆರೆ ನಗರದ ಬಸವ ಲೇಔಟ್ ನಿವಾಸಿ ರಂಜಿತಾ (23) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪತ್ನಿ ಸಾವಿಗೆ ಸಾಲಗಾರರೆ ಕಾರಣ ಎಂದು ರಂಜಿತಾ ಪತಿ ದರ್ಶನ್ ಆರೋಪಿಸಿದ್ದಾರೆ. ದರ್ಶನ್ ಹಾಗೂ ರಂಜಿತಾ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗುವು ಇದೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ದರ್ಶನ್, ಕ್ರಿಕೆಟ್ ಬೆಟ್ಟಿಂಗ್ ವ್ಯಾಮೋಹಕ್ಕೆ ಬಿದ್ದು ಬರೋಬ್ಬರಿ 1.5 ಕೋಟಿ ಹಣ ಕಳೆದುಕೊಂಡಿದ್ದ. ಇತ್ತ ದಿನನಿತ್ಯ ಹಣ ನೀಡುವಂತೆ ಸಾಲಗಾರರು ಮನೆಗೆ ಬರುತ್ತಿದ್ದರು. ಹಣಕ್ಕಾಗಿ ಮನೆ ಹತ್ತಿರ ಬಂದು ದಂಪತಿಗೆ ಕಿರುಕುಳ ನೀಡುತ್ತಿದ್ದರು ಎಂದು ಡೆತ್ ನೋಟ್ನಲ್ಲಿ ರಂಜಿತಾ ಉಲ್ಲೇಖಿಸಿದ್ದಾರೆ.
ಸದ್ಯ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ರಂಜಿತಾ ತಂದೆ ವೆಂಕಟೇಶ್ ಅವರು ಅಳಿಯ ದರ್ಶನ್ಗೆ ಕಾನೂನು ಬಾಹಿರವಾಗಿ ಸಾಲ ನೀಡಿದ್ದ 13 ಮಂದಿ ವಿರುದ್ಧ ದೂರು ನೀಡಿದ್ದಾರೆ. ವೆಂಕಟೇಶ್ ಕೊಟ್ಟ ದೂರಿನ ಆಧಾರದ ಮೇಲೆ ಐಪಿಸಿ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಶಿವು, ಗಿರೀಶ್,ವೆಂಕಟೇಶ್ ಎಂಬುವವರುನ್ನು ಬಂಧಿಸಲಾಗಿದೆ. ಇನ್ನುಳಿದವರು ತಲೆಮರೆಸಿಕೊಂಡಿದ್ದು, ಹೊಳಲ್ಕೆರೆ ಪೊಲೀಸರು ಶೋಧ ನಡೆಸಿದ್ದಾರೆ. ಅಳಿಯನಿಗೆ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಲು ಇಷ್ಟವಿರಲಿಲ್ಲ. ಆದರೆ ಕೆಲವು ವ್ಯಕ್ತಿಗಳು ಶ್ರೀಮಂತರಾಗಲು ಇದು ಸುಲಭ ಮಾರ್ಗ ಎಂದೇಳಿ ಬಲವಂತವಾಗಿ ಬೆಟ್ಟಿಂಗ್ ಚಟುವಟಿಕೆಗಳಿಗೆ ಹಣ ನೀಡಿದ್ದಾರೆ ಎಂದು ರಂಜಿತಾ ತಂದೆ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ದರ್ಶನ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ 1.5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಆದರೆ ಆತ ಮಾಡಿದ್ದ ಸಾಲಕ್ಕಿಂತ ಹೆಚ್ಚಿನ ಹಣವನ್ನು ಮರುಪಾವತಿ ಮಾಡಿದ್ದಾರೆ. 2021 ಮತ್ತು 2023ರಲ್ಲಿ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿ ದರ್ಶನ್ ಎಲ್ಲವನ್ನೂ ಕಳೆದುಕೊಂಡಿದ್ದರು. ಇತ್ತ ಸಾಲಗಾರರು ಹಣವನ್ನು ತಕ್ಷಣ ಹಿಂದಿರುಗಿಸುವಂತೆ ಒತ್ತಾಯಿಸಿದ್ದರು ಎಂದಿದ್ದಾರೆ.