ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರೋಧಿಸಿ ಮತ ಬಹಿಷ್ಕಾರ ಅಭಿಯಾನ.!
– ನಾನು ಮತ ನೀಡುವುದಿಲ್ಲ ಎಂಬ ಸ್ವಯಂ ಘೋಷಣ ಪತ್ರಕ್ಕೆ ಸಹಿ
– ಇದು ಅಂತ್ಯವಲ್ಲ ಆರಂಭ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಉದ್ದೇಶಿತ ಜಲ ಜೀವನ್ ಮಿಷನ್ ಅಡಿಯಲ್ಲಿ ಅವೈಜ್ಞಾನಿಕ ಕೇಂದ್ರೀಕೃತ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಜಾರಿಯನ್ನು ವಿರೋಧಿಸಿ ರೈತರು ಹಾಗೂ ಸಾರ್ವಜನಿಕರು ಕಳೆದ ಎಂಟು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಕಳೆದ ಫೆಬ್ರುವರಿ 26 ರಂದು ಈ ಯೋಜನೆಯ ಕಾಮಗಾರಿ ನಡೆಸಲು ಶಸ್ತ್ರ ಸಜ್ಜಿತ ಪೋಲೀಸರನ್ನು ನೇಮಿಸಿ ಸ್ಥಳೀಯ ಜನರ ದಿನ ನಿತ್ಯದ ಚಟುವಟಿಕೆಗಳಿಗೂ ಅವಕಾಶ ಕೊಡದೆ ಸರ್ಕಾರ ದಬ್ಬಾಳಿಕೆ ನಡೆಸಿದೆ. ಇದನ್ನು ವಿರೋಧಿಸಿ ಆ ಕ್ಷಣದಿಂದಲೇ ಸ್ಥಳೀಯ ಜನತೆ ಅಲ್ಲಿಯೇ ಧರಣಿ ಸತ್ಯಾಗ್ರಹ ಆರಂಭಿಸಿದ್ದು ಇಂದಿಗೆ ಒಂದು ತಿಂಗಳಾದರೂ ಸರ್ಕಾರ ಮತ್ತು ಆಡಳಿತ ಯಂತ್ರ ಚಳುವಳಿಯನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದರೂ ಸತ್ಯಾಗ್ರಹ ನಿಂತಿರಲಿಲ್ಲ.
ಈ ಮಧ್ಯೆ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಚಳುವಳಿಯ ಪ್ರಮುಖರು ಚರ್ಚೆ ನಡೆಸಿ ಪ್ರತಿಭಟನೆಯ ಇನ್ನೊಂದು ಮಾರ್ಗ ಅನುಸರಿಸಲು ತೀರ್ಮಾನಿಸಿ ಮತ ಬಹಿಷ್ಕಾರ ಅಭಿಯಾನ ಕೈಗೊಂಡಿದ್ದಾರೆ. ಈ ಅಭಿಯಾನವನ್ನು ಗಂಭಿರವಾಗಿ ಮುಂದುವರಿಸಲು ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಿದ್ದಾರೆ. ಒಂದು ತಿಂಗಳ ಕಾಲದ ಈ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮುನ್ನ ಅಲ್ಲಿ ಸೇರಿದ್ದ ಸತ್ಯಾಗ್ರಹಿಗಳು ಈ ಲೋಕಸಭಾ ಚುನಾವಣೆಯಲ್ಲಿ ನಾನು ಮತ ನೀಡುವುದಿಲ್ಲ ಎಂಬ ಸ್ವಯಂ ಘೋಷಣ ಪತ್ರಕ್ಕೆ ಸಹಿ ಹಾಕಿ ಸಾಂಕೇತಿಕವಾಗಿ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಇದು ಅಂತ್ಯವಲ್ಲ ಆರಂಭ ಎಂಬ ಘೋಷಣೆಯೊಂದಿಗೆ ಪ್ರತಿಭಟನೆಯ ಹೊಸ ಮಜಲಿಗೆ ಕಾರ್ಯಕರ್ತರು ಸಜ್ಜಾದರು.