ತೀರ್ಥಹಳ್ಳಿಯಲ್ಲಿ ಉಗ್ರರ ನಂಟಿನ ಶೋಧ!
– 5ಕ್ಕೂ ಹೆಚ್ಚು ಕಡೆ ಮಧ್ಯಾಹ್ನದವರೆಗೆ ತಪಾಸಣೆ
– ತೀರ್ಥಹಳ್ಳಿಯಲ್ಲಿ ಎನ್. ಐ. ಎ ದಾಳಿ
– ಐದಕ್ಕೂ ಹೆಚ್ಚು ಮಂದಿ ತೀರ್ಥಹಳ್ಳಿಯ ಶಂಕಿತರು?!
– ಮನೆಯವರು, ಸ್ನೇಹಿತರು, ಪರಿಚಯಸ್ಥರಿಗೆ ನೋಟೀಸ್
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಎನ್ಐಎ ಅಧಿಕಾರಿಗಳು ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ದಾಳಿ ನಡೆಸಿದ್ದು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಬುಧವಾರ ಬೆಳಿಗ್ಗೆಯೇ ತೀರ್ಥಹಳ್ಳಿ ಪಟ್ಟಣದಲ್ಲಿ ಎನ್ಐಎ ಟೀಂ ದಾಳಿ ನಡೆಸಿದ್ದು, ತೀರ್ಥಹಳ್ಳಿಯ ಸೊಪ್ಪುಗುಡ್ಡೆ, ಮಾರ್ಕೆಟ್ನಲ್ಲಿರುವ ಒಂದು ಮನೆ, ಹಾಗೂ ಇನ್ನು 2 ಮನೆ, ಒಂದು ಮಳಿಗೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಬಂದಿರುವ ಅಧಿಕಾರಿಗಳು ತೀರ್ಥಹಳ್ಳಿ ಪೊಲೀಸ್ ಮೂಲಗಳನ್ನು ಬಳಸಿಕೊಂಡು ಈ ದಾಳಿ ನಡೆಸಿದ್ದಾರೆ. ಅಲ್ಲದೆ ರಾಮೇಶ್ವರಂ ಕಥೆ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ
ಶಿವಮೊಗ್ಗ ಜಿಲ್ಲೆ ಪೊಲೀಸರು ಇತ್ತೀಚೆಗೆ ಗಾಂಜಾ ಕೇಸ್ನಲ್ಲಿ ಓರ್ವ ಆರೋಪಿಯನ್ನ ಬಂಧಿಸಿದ್ದರು. ಆತ ರಾಮೇಶ್ವರಂ ಕಫೆ ಸ್ಪೋಟದ ಆರೋಪಿಯ ಗುರುತು ಪತ್ತೆ ಮಾಡಿದ್ದ. ಆತನ ಸಹೋದರನೇ ಆರೋಪಿಯಾಗಿದ್ದು, ಪೊಲೀಸರ ಬಳಿ ರಾಮೇಶ್ವರಂ ಕಫೆ ಸ್ಫೋಟದ ಆರೋಪಿಯ ಗುರುತು ಖಾತರಿಗೊಳಿಸಿದ್ದ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಯು ಮಾಹಿತಿ ಪಡೆದುಕೊಂಡಿದ್ದು ಎನ್ಐಎ ಅಧಿಕಾರಿಗಳು ಇದೀಗ ದಾಳಿ ನಡೆಸಿದ್ದಾರೆ. ಶಿವಮೊಗ್ಗ ಐಸಿಸ್ ಮ್ಯಾಡುಲ್ ಮೇಲೆ ಎನ್ಐಎ ಅಧಿಕಾರಿಗಳ ಕಣ್ಣು ನೆಟ್ಟಿದ್ದು, ಮಹತ್ವದ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಪೊಲೀಸರು ಈ ಹಿಂದೆ ಅರೆಸ್ಟ್ ಮಾಡಿದ್ದ ಆರೋಪಿಗಳು ಜಬೀ, ಯಾಸಿನ್, ಮಾಜ್ ಸೇರಿದಂತೆ ಹಲವರು ಕೇರಳ ಐಸಿಸ್ ಮ್ಯಾಡುಲ್ ಜೊತೆಗೆ ಸಂಪರ್ಕದಲ್ಲಿದ್ದರ ಬಗ್ಗೆ ಮಾಹಿತಿ ಸ್ಪಷ್ಟವಾಗಿದೆ.
ಇವರೆಲ್ಲರೂ ಐಸಿಸ್ ಸಂಘಟನೆ ಸೇರುವ ಸಲುವಾಗಿ ದುಷ್ಕೃತ್ಯಗಳನ್ನು ಎಸೆಗುತ್ತಿದ್ದರು. ಈ ಮೂಲಕ ತಮ್ಮ ಸಾಮರ್ಥ್ಯ ತೋರಿ ಸಂಘಟನೆಗೆ ಸೇರಲು ಮುಂದಾಗಿದ್ದರು ಎನ್ನಲಾಗಿದೆ. ಐಸಿಸ್ ಸಂಘಟನೆಗೆ ರಿಕ್ಯೂಟ್ ಮಾಡುತ್ತಿರುವ ಆರೋಪಿಗಳಲ್ಲಿ ಅಪ್ಸರ್ ಫಾಷಾ, ಅರಾಫತ್ ಅಲಿ ಹಾಗೂ ಶಾರೀಖ್ ಮುಖ್ಯ ವ್ಯಕ್ತಿಗಳಾಗಿದ್ದಾರೆ. ದೇಶದ ಭದ್ರತಾ ಸಂಸ್ಥೆ ಇಂತಹ ವ್ಯಕ್ತಿಗಳ ಮೇಲೆ ಹಾಗೂ ಸಂಘಟನೆ ಮೇಲೆ ಕಣ್ಣಿಟ್ಟಿರುವ ಹಿನ್ನೆಲೆಯಲ್ಲಿ ಶಂಕಿತರು ತಮ್ಮ ಕಾರ್ಯತಂತ್ರವನ್ನು ಸಹ ಬದಲಾಯಿಸಿದ್ದರು ಎಂಬ ಮಾಹಿತಿ ಇದೆ. ಆರೋಪಿಗಳು ಯಾವುದೋ ಒಂದು ಶಂಕಿತ ಚಟುವಟಿಕೆ ನಡೆಸಿ ಎನ್ಐಎ ಅಧಿಕಾರಿಗಳ ಟಾರ್ಗೆಟ್ ಆದ ಬಳಿಕವಷ್ಟೆ ಅವರನ್ನ ಆತಂಕವಾದಿ ಸಂಘಟನೆಗಳು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುತ್ತಿವೆ.
ಈ ಕಾರಣಕ್ಕೆ ಮೊದಲು ಯಾಸೀನ್, ಮಾಜ್, ನಂತರ ಶಾರೀಖ್, ಇದೀಗ ಮುಸಾವೀರ್ ಅಲಿಯಾಸ್ ಶಾಜೀಬ್ ದುಷ್ಕೃತ್ಯಗಳನ್ನು ಎಸೆಗಿದ್ದಾರೆ ಎನ್ನಲಾಗಿದೆ. ಶಾಜಿಬ್ ಹಾಗೂ ಮತೀನ್ ಬೆಂಗಳೂರಿನಲ್ಲಿ ನಡೆದ ಸ್ಫೋಟದ ಕೃತ್ಯದಲ್ಲಿ ಪಾಲ್ಗೊಂಡಿದ್ದು, ಅವರ ಕೈವಾಡ ಶಿವಮೊಗ್ಗ ತುಂಗಾ ನದಿ ತೀರದ ಟ್ರಯಲ್ ಬ್ಲಾಸ್ಟ್ ಹಾಗೂ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿಯು ಇರುವುದು ಎನ್ಐಎ ಅಧಿಕಾರಿಗಳಿಗೆ ತಿಳಿದಿದೆ. ಇಷ್ಟೆ ಅಲ್ಲದೆ ತೀರ್ಥಹಳ್ಳಿಯಲ್ಲಿ ಐದಕ್ಕೂ ಹೆಚ್ಚು ಮಂದಿ ಮಿಸ್ಸಿಂಗ್ ಇದ್ದು, ಅವರ ಸುಳಿವು ಇದುವರೆಗೂ ಪತ್ತೆಯಾಗಿಲ್ಲ. ಈ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆಯು ಹೆಚ್ಚಿನ ಗಮನ ಹರಿಸುತ್ತಿದೆ. ಇದರ ನಡುವೆ ಎನ್ಐಎ ಅಧಿಕಾರಿಗಳು ತೀರ್ಥಹಳ್ಳಿಯಲ್ಲಿ ಹೆಚ್ಚಿನ ವಿಚಾರಣೆ ನಡೆಸಿದೆ.
ತೀರ್ಥಹಳ್ಳಿ ಶಾಸಕರ ಬೇಸರ
ಎನ್ಐಎ ಬೆಂಗಳೂರು ಅಧಿಕಾರಿಗಳು ರಾಮೇಶ್ವರ ಕೆಫೆ ಬ್ಲಾಸ್ಟ್ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದು ಇವರು ತೀರ್ಥಹಳ್ಳಿಯವರಾಗಿರುವುದು ಬೇಸರ ಹಾಗೂ ನೋವಿನ ಸಂಗತಿ ಎಂದು ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮನೆಯವರು, ಸ್ನೇಹಿತರು, ಪರಿಚಯಸ್ಥರಿಗೆ ನೋಟೀಸ್
ಬೆಂಗಳೂರಿಂದ ಮುಂಜಾನೆ ಬಂದ ಅಧಿಕಾರಿಗಳು ಮಧ್ಯಾಹ್ನದವರೆಗೆ ತನಿಖೆ ಹಾಗೂ ವಿಚಾರಣೆ ನಡೆಸಿದ್ದಾರೆ. ಅನೇಕ ಮನೆಗಳು, ಕೆಲ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಶಂಕಿತರ ಮನೆಯವರು, ಸ್ನೇಹಿತರು, ಪರಿಚಯಸ್ಥರಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.