– ಬೆಂಗಳೂರು: ಕೆಲಸ ಮಾಡ್ತಿದ್ದ ಸಂಸ್ಥೆಗೆ ಬಾಂಬ್ ಬೆದರಿಕೆ: ನೌಕರ ಅರೆಸ್ಟ್!
– ಉಡುಪಿ: ಅಧಿಕ ಹಣದಾಸೆಗೆ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ!
– ಸಾಗರ: ಕಲರ್ ಜೆರಾಕ್ಸ್ ನೋಟ್ ನೀಡಿದ ವಂಚಕ ಅರೆಸ್ಟ್
– ಬೆಂಗಳೂರು: ಕಾನೂನು ಬಾಹಿರವಾಗಿ ಆಟೋ ಜಪ್ತಿ: ಇಬ್ಬರು ಸೆರೆ!
– ಬೆಂಗಳೂರು: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್ನ ಹತ್ಯೆ!
– ಯಾದಗಿರಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!
– ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅಕ್ರಮ: ರಾಜ್ಯದ 9 ವಿದ್ಯಾರ್ಥಿಗಳು ಡಿಬಾರ್
– ಬೆಂಗಳೂರು: ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ರೌಡಿ ಹತ್ಯೆ!
– ಲಂಚಕ್ಕೆ ಬೇಡಿಕೆ: ಪೊಲೀಸ್ ಸಿಬ್ಬಂದಿ ಲೋಕಾಯುಕ್ತ ವಶಕ್ಕೆ!
– ಬೈಕ್ನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 25 ಲಕ್ಷ ರೂ. ವಶ!
NAMMUR EXPRESS NEWS
ಬೆಂಗಳೂರು : ಸಂಬಳ ಕೊಟ್ಟಿಲ್ಲ ಎಂದು ರೆಸ್ಟೋರೆಂಟ್ ಗೆ ಹುಸಿ ಬಾಂಬ್ ಕರೆದ ಮಾಡಿದ ನೌಕರ ಪೊಲೀಸರ ಅತಿಥಿಯಾಗಿದ್ದಾರೆ. ವೇಲು ಎಂಬಾತ ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದನು. ಸಂಬಳ ಕೊಟ್ಟಿಲ್ಲ ಎಂದು ರೆಸ್ಟೋರೆಂಟ್ ಗೆ ಹುಸಿ ಬಾಂಬ್ ಕರೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.
ಸ್ಯಾಲರಿ ಕೊಟ್ಟಿಲ್ಲ ಎಂದು ಕುಡಿದು ರೆಸ್ಟೋರೆಂಟ್ ಮಾಲೀಕರಿಗೆ ಕೆಲಸಗಾರನೇ ಬಾಂಬ್ ಇಟ್ಟಿರೋದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕರೆ ಮಾಡಿದ್ದ ವ್ಯಕ್ತಿ ಶೀಘ್ರವೇ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಹೇಳಿ ಫೋನ್ ಕಟ್ ಮಾಡಿದ್ದನು. ನಂತರ ಸುದ್ದಿ ತಿಳಿದ ಪೊಲೀಸರು ರೆಸ್ಟೋರೆಂಟ್ ಗೆ ಬಂದು ತಪಾಸಣೆ ನಡೆಸಿದ್ದಾರೆ. ರೆಸ್ಟೋರೆಂಟ್ ಪರಿಶೀಲನೆ ನಡೆಸಿ ಕೊನೆಗೆ ಹುಸಿ ಬೆದರಿಕೆ ಕರೆ ಎಂದು ಖಚಿತಪಡಿಸಿಕೊಂಡಿದ್ದರು. ನಂತರ ವಿಚಾರಣೆ ನಡೆಸಿ ವೇಲು ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ, ತನಿಖೆ ಬಳಿಕ ಅಸಲಿ ಸತ್ಯ ಬಯಲಾಗಿದೆ.
ಅಧಿಕ ಹಣದಾಸೆಗೆ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ:
ಉಡುಪಿ: ಅನಾಮಧೇಯ ಆಯಪ್ ಮೂಲಕ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಗಳು ಕಳುಹಿಸಿದ ವಾಟ್ಸಾಪ್ ಅಪ್ಲಿಕೇಶನ್ ಲಿಂಕ್ವೊಂದನ್ನು ಉಡುಪಿಯ ಜಗದೀಶ್ ಡೌನ್ಲೋಡ್ ಮಾಡಿದ್ದರು. ಆ ಬಳಿಕ ಅದರಲ್ಲಿ ಟ್ರೆಡಿಂಗ್ ಬಗ್ಗೆ ಮಾಹಿತಿ ನೀಡಿ ಟ್ರೆಡಿಂಗ್ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಲಾಗಿತ್ತು. ಇದನ್ನು ನಂಬಿದ ಅವರು ಆಯಪ್ ಮೂಲಕ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಫೆ.25ರಿಂದ ಮಾ. 14ರ ವರೆಗೆ ಹಂತ ಹಂತವಾಗಿ 32,40,000 ರೂ. ಪಾವತಿಸಿದ್ದು, ಆದರೆ ಈ ತನಕ ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನು ನೀಡದೆ ವಂಚಿಸಿದ್ದಾರೆ. ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಸಲಿ ನೋಟಿನ ಜತೆ ಕಲರ್ ಜೆರಾಕ್ಸ್ ನೋಟ್ ನೀಡಿದ ವಂಚಕ ಅರೆಸ್ಟ್:
ಶಿವಮೊಗ್ಗ: ಪಡೆದುಕೊಂಡ ಸಾಲ ವಾಪಸ್ ಕೊಡುವಾಗ ಅಸಲಿ ನೋಟುಗಳೊಂದಿಗೆ ಕಲರ್ ಜೆರಾಕ್ಸ್ ನೋಟುಗಳನ್ನು ನೀಡಿ ವಂಚಿಸಿದ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆ ಸಾಗರ ನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ. ಸಾಗರ ಸಮೀಪದ ಚಿಪ್ಪಿ ಗ್ರಾಮದ ಪಾನಿಪುರಿ ಮಾರಾಟಗಾರ ಸಂತೋಷ್ ಬಂಧಿತ ವ್ಯಕ್ತಿ. ಸಾಗರದ ಶಿವಪ್ಪನಾಯಕ ಬಡಾವಣೆಯ ಮನೋಜ್ ಅವರಿಂದ 30,000 ರೂ.ಸಾಲ ಪಡೆದುಕೊಂಡಿದ್ದ ಸಂತೋಷ್ ಸಾಲ ಮರುಪಾವತಿಸುವ ಸಂದರ್ಭದಲ್ಲಿ ಅಸಲಿ ನೋಟುಗಳೊಂದಿಗೆ ಕಲರ್ ಜೆರಾಕ್ಸ್ ಮಾಡಿದ 500 ರೂಪಾಯಿ ಮುಖಬೆಲೆಯ ಕೆಲವು ನೋಟುಗಳನ್ನು ಸೇರಿಸಿ ಕೊಟ್ಟಿದ್ದಾರೆ.
ಮನೋಜ್ ಮನೆಗೆ ತೆರಳಿ ಹಣ ಪರಿಶೀಲಿಸಿದಾಗ ನಕಲಿ ನೋಟುಗಳು ಪತ್ತೆಯಾಗಿದೆ. ಮನೋಜ್ ನೀಡಿದ ದೂರಿನ ಮೇರೆಗೆ ಸಾಗರ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತೋಷ್ ನನ್ನು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರು: ಕಾನೂನು ಬಾಹಿರವಾಗಿ ಆಟೋ ಜಪ್ತಿ ಮಾಡಿದ ಆರೋಪ: ಇಬ್ಬರು ಸೆರೆ:
ಬೆಂಗಳೂರು: ರಿಕವರಿ ಏಜೆಂಟ್ ಎಂದು ಹೇಳಿ ಆಟೋ ಚಾಲಕನಿಗೆ ಧಮ್ಕಿ ಹಾಕಿ ಕಾನೂನು ಬಾಹಿರವಾಗಿ ಆಟೋ ಜಪ್ತಿ ಮಾಡಿದ ಆರೋಪದಡಿ ಇಬ್ಬರನ್ನು ಇಲ್ಲಿನ ತಿಲಕ್ನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಬಿಟಿಎಂ ನಿವಾಸಿಯಾಗಿರುವ ಆಟೋ ಚಾಲಕ ಜಗನ್ನಾಥ ಎಂಬುವರು ನೀಡಿದ ದೂರಿನ ಮೇರೆಗೆ ಸಲ್ಮಾನ್ ಹಾಗೂ ಪಠಾಣ್ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂ.ಜಿ. ರಸ್ತೆಯಲ್ಲಿರುವ ವರ್ಧಮಾನ್ ಫೈನಾನ್ಸ್ ಕಂಪೆನಿಯಲ್ಲಿ ಆಟೋ ಚಾಲಕ 2 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಮಧ್ಯವರ್ತಿ ಹಾಗೂ ಡೀಲರ್ ಆಗಿದ್ದ ರಂಗಸ್ವಾಮಿ ಇದಕ್ಕೆ ನಾಮಿನಿ ಆಗಿದ್ದರು. ಮೊದಲ ಎರಡು ತಿಂಗಳು ಸಾಲದ ಕಂತನ್ನು ಜಗನ್ನಾಥ ಪಾವತಿಸಿದ್ದರು. ಮಾರ್ಚ್ ನಲ್ಲಿ ಕಂತನ್ನು ಕಟ್ಟಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರಂಗಸ್ವಾಮಿ ಆರೋಪಿತರನ್ನು ಸಂಪರ್ಕಿಸಿ ಆಟೋ ಜಪ್ತಿ ಮಾಡುವಂತೆ ಹೇಳಿದ್ದ. ಅದರಂತೆ ಮಾ.25ರ ಸೋಮವಾರ ರಾತ್ರಿ ಪ್ಯಾಸೆಂಜರ್ ಹತ್ತಿಸಿಕೊಂಡು ಬಿಟಿಎಂ ಲೇಔಟ್ ಕಡೆ ಹೋಗುವಾಗ ಆರು ಮಂದಿ ಯುವಕರು ಜಗನ್ನಾಥ ಅವರ ಆಟೋಗೆ ಅಡ್ಡ ಹಾಕಿ ಕರ್ನಾಟಕ ರಿಕವರಿ ಏಜೆನ್ಸಿ ಎಂದು ಹೇಳಿ ಗಾಡಿ ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡದಂತೆ ಮನವಿ ಮಾಡಿದರೂ ಸೊಪ್ಪು ಹಾಕದೆ ಡೀಲರ್ ಆಗಿರುವ ರಂಗಸ್ವಾಮಿ ಎಂಬಾತ ಕಾನೂನು ಗಾಳಿಗೆ ತೂರಿ ಅವರ ಸೂಚನೆಯಂತೆ ಆರೋಪಿತರಿಂದ ಬಲವಂತವಾಗಿ ಆಟೋ ಕೀಯನ್ನು ಕಸಿದುಕೊಂಡು ಜಪ್ತಿ ಮಾಡಿದ್ದಾರೆ ಎಂದು ಜಗನ್ನಾಥ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಡೀಲರ್ ಆಗಿರುವ ರಂಗಸ್ವಾಮಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್ನ ಹತ್ಯೆ:
ಬೆಂಗಳೂರು: ಸುಪಾರಿ ಹಂತಕ ಹಾಗೂ ರೌಡಿಶೀಟರ್ ದಿನೇಶ್ನನ್ನು ಮಾರಕಾಸ್ತ್ರಗಳಿಂದ ಆತನ ಸ್ನೇಹಿತರೇ ಭೀಕರವಾಗಿ ಹತ್ಯೆಗೈದಿರುವ ಘಟನೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ದಿನೇಶ್ (37) ಕೊಲೆಯಾದ ರೌಡಿಶೀಟರ್. ಕೃತ್ಯ ಎಸಗಿದ ಆತನ ಸ್ನೇಹಿತರ ಪೈಕಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.
ರೌಡಿಶೀಟರ್ ದಿನೇಶ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಸುಪಾರಿ ಪಡೆದ ಆರೋಪದಡಿ ಪ್ರಕರಣಗಳು ದಾಖಲಾಗಿವೆ. ಬುಧವಾರ ಮಧ್ಯಾಹ್ನ ತನ್ನ 7 ಮಂದಿ ಸ್ನೇಹಿತರ ಜತೆ ಕಮ್ಮನಹಳ್ಳಿಯ ಓಯೋ ಹೋಟೆಲ್ಗೆ ರೂಮ್ ಬಾಡಿಗೆ ಪಡೆಯಲು ಬಂದಿದ್ದಾನೆ. ಈ ವೇಳೆ ಹೋಟೆಲ್ನ ಸ್ವಾಗತಕಾರರ ಜತೆ ದಿನೇಶ್ನ ಇಬ್ಬರು ಸ್ನೇಹಿತರು ಹಣ ಪಾವತಿ ಬಗ್ಗೆ ಚರ್ಚಿಸುತ್ತಿದ್ದರು. ಆಗ ನಗದು ಇಲ್ಲ. ಕಾರ್ಡ್ ಕೊಡುವುದಾಗಿ ಹೇಳಿದ್ದಾರೆ. ಆಗ ಸ್ವಾಗತಕಾರರು ನಗದು ರೂಪದಲ್ಲೇ ಕೊಡಬೇಕು. ಕಾರ್ಡ್ ಬಳಕೆ ಮಾಡುವುದಿಲ್ಲ ಎಂದಿದ್ದಾರೆ. ಹೀಗಾಗಿ ಇಬ್ಬರು ಆರೋಪಿಗಳು ಹಣ ತರಲು ಹೊರಗಡೆ ಹೋಗಿದ್ದಾರೆ.
ಈ ವೇಳೆ ಸೋಫಾ ಮೇಲೆ ದಿನೇಶ್ ಜತೆ ಕೂತಿದ್ದ ಐವರು ಏಕಾಏಕಿ ದಿನೇಶ್ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಅದೇ ವೇಳೆ ಹೊರಗಡೆಯಿಂದ ಮತ್ತೆ ಐದು ಮಂದಿ ಆರೋಪಿಗಳು ಮಾರಕಾಸ್ತ್ರಗಳನ್ನು ತಂದು ದಿನೇಶ್ ಮೇಲೆ ಸಾಮೂಹಿಕ ದಾಳಿ ನಡೆಸಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಸೋಫಾ ಮೇಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಹೇಳಿದರು. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಪೂರ್ವವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!
ಯಾದಗಿರಿ: ಕುಡಿಯುವ ನೀರಿಗಾಗಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಜರುಗಿದೆ. ನೀರಿನ ವಿಚಾರವಾಗಿ ಅಜ್ಜಿ ಜೊತೆ ಆರೋಪಿತರು ಜಗಳ ತೆಗೆದಿದ್ದಾರೆ. ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಮೊಮ್ಮಗ ಮದ್ಯ ಪ್ರವೇಶ ಮಾಡಿ ನೀವು ಯಾಕೆ ಜಗಳ ಮಾಡಿದ್ದಿರಿ ಎಂದು ಪ್ರಶ್ನೆ ಮಾಡಿದ್ದಾನೆ. ಪಶ್ನೆ ಮಾಡಿದಕ್ಕೆ ಸಂಬಂಧಿಕರಿಂದಲೇ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಹಣಮಂತ ಹಾಗೂ ಹಣಮವ್ವ ಸೇರಿ ಚಾಕು ಇರಿದು ಕೊಲೆ ಮಾಡಲಾಗಿದೆ.
ನಂದಕುಮಾರ ಕಟ್ಟಿಮನಿ ( 21)ಕೊಲೆಯಾದ ಯುವಕ ಎನ್ನಲಾಗಿದೆ. ಕೊಲೆಯಾದ ನಂದಕುಮಾರ ತಮ್ಮ ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಆರೋಪಿತರಿಗೆ ಪ್ರಶ್ನೆ ಮಾಡಿದ್ದ. ಈ ವೇಳೆ ನಂದಕುಮಾರ ತಾಯಿಗು ಹಲ್ಲೆ ನಡೆಸಲಾಗಿದೆ. ಹುಣಸಗಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.
ಎಸ್ಎಸ್ಎಲ್ ಸಿ ಪರೀಕ್ಷೆ: ಅಕ್ರಮದಲ್ಲಿ ತೊಡಗಿದ್ದ ರಾಜ್ಯದ 9 ವಿದ್ಯಾರ್ಥಿಗಳು ಡಿಬಾರ್
ಬೆಂಗಳೂರು : ರಾಜ್ಯಾದ್ಯಂತ ಬುಧವಾರ ನಡೆದ SSLC ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಅಕ್ರಮದಲ್ಲಿ ತೊಡಗಿದ್ದ 9 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಸಮಾಜ ವಿಜ್ಞಾನ ಪರೀಕ್ಷೆಗೆ 8.27 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅಕ್ರಮದಲ್ಲಿ ತೊಡ ಗಿದ್ದ 9 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.
ಸಮಾಜ ವಿಜ್ಞಾನ ಪರೀಕ್ಷೆಗೆ 8.27 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅಕ್ರಮದಲ್ಲಿ ತೊಡ ಗಿದ್ದ 9 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ನಕಲು ಮಾಡುತ್ತಿದ್ದ ರಾಯಚೂರಿನ 3, ಧಾರವಾಡದ 4, ಕಲಬುರಗಿ ಮತ್ತು ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ತಲಾ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. 8,41,120 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು. ಈ ಪೈಕಿ 8,27,773 (ಶೇ.98.4) ವಿದ್ಯಾರ್ಥಿಗಳು ಹಾಜರಾಗಿದ್ದರುಮಾ.28 ಮತ್ತು 29 ರಂದು ಯಾವುದೇ ಪರೀಕ್ಷೆ ಇರುವುದಿಲ್ಲ.
ಬೆಂಗಳೂರು: ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ರೌಡಿ ಹತ್ಯೆ:
ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ರೌಡಿ ದಿನೇಶ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ರೌಡಿ ದಿನೇಶ್, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕಮ್ಮನಹಳ್ಳಿ ಬಳಿಯ ಸರ್ವೀಸ್ ಅಪಾರ್ಟ್ಮೆಂಟ್ವೊಂದಕ್ಕೆ ಸಹಚರರ ಜೊತೆ ಬುಧವಾರ ಬಂದಿದ್ದ. ಇದೇ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡ, ದಾಳಿ ಮಾಡಿ ಕೊಂದಿದೆ’ ಎಂದು ಪೊಲೀಸರು ಹೇಳಿದರು. ತೀವ್ರ ಗಾಯಗೊಂಡಿದ್ದ ದಿನೇಶ್, ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿಯೇ ಮೃತಪಟ್ಟಿದ್ದಾನೆ. ಸೋಫಾ ಮೇಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ತಿಳಿಸಿದರು.
ಬೆಂಗಳೂರು: ಲಂಚಕ್ಕೆ ಬೇಡಿಕೆ ಆರೋಪ : ಇಬ್ಬರು ಪೊಲೀಸ್ ಸಿಬ್ಬಂದಿ ಲೋಕಾಯುಕ್ತ ವಶಕ್ಕೆ:
ಬೆಂಗಳೂರು: ಗ್ಯಾಸ್ ಸಿಲಿಂಡರ್ ಗಳ ವಿತರಣೆಗೆ ಅನುಮತಿ ಕೊಡಿಸಲು ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪೀಣ್ಯ ಉಪವಿಭಾಗದ ಎಸಿಪಿಯವರ ವಾಹನ ಚಾಲಕ ನಾಗರಾಜ್ ಹಾಗೂ ಪೀಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಂಗಹನುಮಯ್ಯರನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೈಕ್ನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 25 ಲಕ್ಷ ರೂ. ವಶ:
ಬೆಂಗಳೂರು: ಯಾವುದೇ ದಾಖಲೆಗಳಿಲ್ಲದೇ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 25 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ 2 ಬ್ಯಾಗ್ಗಳಲ್ಲಿ 25 ಲಕ್ಷ ಹಣವನ್ನು ಸಾಗಿಸುತ್ತಿದ್ದ ಮಾಹಿತಿ ಚುನಾವಣಾಧಿಕಾರಿಗಳಿಗೆ ಲಭಿಸಿದೆ. ತಕ್ಷಣ ಸಿಸಿಬಿ ಪೊಲೀಸರೊಂದಿಗೆ ಚುನಾವಣಾಧಿಕಾರಿಗಳು ದಾಳಿ ಮಾಡಿ ಬ್ಯಾಗ್ಗಳನ್ನು ಪರಿಶೀಲಿಸಿದಾಗ ಅದರಲ್ಲಿ 25 ಲಕ್ಷ ರೂ. ಹಣ ಇರುವುದು ಕಂಡುಬಂದಿದೆ. ದ್ವಿಚಕ್ರ ವಾಹನ ಸವಾರ ಈ ಹಣಕ್ಕೆ ಯಾವುದೇ ದಾಖಲೆ ನೀಡದ ಕಾರಣ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.