ಲೋಕಸಭಾ ಚುನಾವಣೆ: ಗಡಿಗಳಲ್ಲಿ ಚೆಕ್ ಪೋಸ್ಟ್ ಅವಾಂತರ!
– ಚುನಾವಣೆ ಹೆಸರಲ್ಲಿ ಜನ ಸಾಮಾನ್ಯರಿಗೆ ತೊಂದರೆ
– ಅಡಿಕೆ ಮಾರಿ ತಂದ ಹಣವನ್ನು ವಶಕ್ಕೆ ಪಡೆದ ಅಧಿಕಾರಿಗಳು!
– ಚೆಕ್ ಪೋಸ್ಟ್ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ/ ಕೊಪ್ಪ: ಲೋಕ ಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಎಲ್ಲೆಡೆ ತಾಲೂಕಿನ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಚುನಾವಣೆಯ ಪ್ರಯುಕ್ತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆದರೆ ಇದೀಗ ಈ ನಿಯಮ ಬಡವರು, ರೈತರು, ಜನ ಸಾಮಾನ್ಯರಿಗೆ ಭಾರೀ ತೊಂದರೆ ಆಗುತ್ತಿದೆ. ಚೆಕ್ ಪೋಸ್ಟ್ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನವೀಯತೆ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕು. ಪ್ರತಿಯೊಂದು ವಾಹನವನ್ನು ತಪಾಸಣೆಗೊಳಪಡಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರಿಂದ ತಾಲೂಕಿನ ಎಲ್ಲಾ ಗಡಿಭಾಗದಲ್ಲಿರುವ ಅಧಿಕಾರಿಗಳು ಪ್ರತಿಯೊಂದು ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾರೆ.
ಆದರೆ ಈಗ ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ರೈತರು ಅಡಿಕೆ ಕೊಯ್ಲು ಮುಗಿಸಿ ಅಡಿಕೆ ಮಾರುವ ಸಮಯವಾಗಿದ್ದು ಅಡಿಕೆ ಮಾರಿ ಬಂದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಐವತ್ತು ಸಾವಿರ ಒಂದು ಲಕ್ಷದ ಹಣವನ್ನೆಲ್ಲ ರೈತರು ತಮ್ಮ ತುರ್ತು ಪರಿಸ್ಥಿತಿಗಾಗಿ ಮನೆ ಮಾಡಲು, ಇಲ್ಲವೇ ಮಕ್ಕಳ ಮದುವೆ, ಸಾಲ ತೀರಿಸಲು, ಅಥವಾ ಇನ್ನಾವುದೇ ಶುಭ ಸಮಾರಂಭ ಮಾಡಲೊ ಅಥವಾ ಯಾವುದೇ ಅನಾರೋಗ್ಯ ಪರಿಸ್ಥಿತಿಯಿಂದಲೂ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದ್ಯಾವುದಕ್ಕೂ ಬಿಲ್ ತೆಗೆದುಕೊಂಡು ಹೋಗಲು ಆಗುತ್ತಿಲ್ಲ, ಇದರಿಂದ ಬಡವರಿಗೆ ಕಷ್ಟದಲ್ಲಿರುವವರಿಗೆ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಚುನಾವಣೆಯಿಂದಾಗಿ ಜನರು ತುರ್ತು ಸಂದರ್ಭದಲ್ಲಿ ಕೂಡ ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿಲ್ಲ. ಇದು ಜನಸಾಮಾನ್ಯರಿಗೆ ಬಹಳ ಗೊಂದಲಕ್ಕೀಡು ಮಾಡಿದೆ.
ಅಧಿಕಾರಿಗಳು, ಪೊಲೀಸರಿಗೆ ದಿನಕ್ಕೆ ಇಷ್ಟು ವಾಹನಗಳನ್ನು ತಪಾಸಣೆ ಮಾಡಿದ್ದೇವೆ ಎನ್ನುವ ಮಾಹಿತಿ ಕೊಡಬೇಕು. ಜನರ ಸಮಸ್ಯೆ ಅವರಿಗೆ ಗೊತ್ತಿರುವುದಿಲ್ಲ. ಜನರಿಗೆ ಇಷ್ಟೆಲ್ಲ ಸಮಸ್ಯೆ ಇರುವಾಗ ಅವರು ಜನರ ತುರ್ತು ಪರಿಸ್ಥಿತಿಯನ್ನು ಪರಿಶೀಲಿಸಿ, ಯಾವ ಕಾರಣಕ್ಕಾಗಿ ಜನರು ಹಣವನ್ನು ಸಾಗಿಸುತ್ತಿದ್ದಾರೆ ಎಂದು ತಿಳಿದು ನಂತರ ಜಿಲ್ಲಾಡಳಿತಕ್ಕೆ ಕಳುಹಿಸಬೇಕು. ಇಲ್ಲವಾದಲ್ಲಿ ಜನಸಾಮಾನ್ಯರಿಗೆ ಚುನಾವಣೆಯಿಂದ ತೊಂದರೆಯಾಗುತ್ತಿದೆ. ಕೊಪ್ಪ ತೀರ್ಥಹಳ್ಳಿ ಗಡಿಕಲ್ ಅಲ್ಲಿ ಬುಧವಾರ ರೈತನೊಬ್ಬನ ಹಣ ವಶಕ್ಕೆ ಪಡೆದು ಆತ ಚಿಕ್ಕಮಗಳೂರಿಗೆ ಹೋಗಿ ಹಣ ಪಡೆಯುವ ಸ್ಥಿತಿ ನಿರ್ಮಾಣ ಆಗಿದೆ.
ನಿಯಮವೇ ಗೊತ್ತಿಲ್ಲದ ಅಧಿಕಾರಿಗಳು!
ಯುವ ಮುಖಂಡ ಪಣಿರಾಜ್ ಕಟ್ಟೆಹಕ್ಕಲು ಆಕ್ರೋಶ
ತೀರ್ಥಹಳ್ಳಿ ತಾಲೂಕಿನ ಗಡಿಕಲ್ಲಿನಲ್ಲಿ ನಡೆದಿದ್ದು ಅಡಿಕೆ ಮಾರಿ ರೈತ ಹಣವನ್ನು ಮನೆಗೆ ತೆಗೆದುಕೊಂಡು ಹೋಗುವಾಗ ಅಧಿಕಾರಿಗಳು ವಶಪಡಿಸಿಕೊಂಡು ಜಿಲ್ಲಾ ಕೇಂದ್ರಕ್ಕೆ ಕೊಟ್ಟಿದ್ದಾರೆ. ಅವರಿಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದು, ಅದನ್ನು ವಾಪಸ್ ತೆಗೆದುಕೊಳ್ಳಲು ತೊಂದರೆ ಅನುಭವಿಸುವ ಸ್ಥಿತಿ ಬಂದಿದೆ. ಚುನಾವಣೆ ದೃಷ್ಟಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಚುನಾವಣೆಯು ಪ್ರತಿ ವರ್ಷವೂ ನಡೆಯುತ್ತದೆ, ಆದರೆ ಇವರ ಸ್ವಾರ್ಥದಿಂದ ಬಡ ಜನರಿಗೆ, ಸಾಮಾನ್ಯ ಜನರಿಗೆ, ರೈತರಿಗೆ ತುರ್ತು ಸಂದರ್ಭದಲ್ಲಿ ಕೂಡ ತೊಂದರೆಯಾಗುತ್ತಿದೆ. ತಕ್ಷಣ ಜಿಲ್ಲಾಡಳಿತ, ಚುನಾವಣಾ ಆಯೋಗ ಮತ್ತು ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಗಮನಿಸಿ ರೆಗುಲೇಷನ್ ಪಾಸ್ ಮಾಡಬೇಕು ಎಂದು ತೀರ್ಥಹಳ್ಳಿ ಯುವ ಮುಖಂಡ ಪಣಿರಾಜ್ ಕಟ್ಟೆಹಕ್ಕಲು ಆಗ್ರಹಿಸಿದ್ದಾರೆ.