ಮಾಜಿ ಸಚಿವ ಈಶ್ವರಪ್ಪ ಬಂಡಾಯ ಫಿಕ್ಸ್!
• ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
– ಏ.12ಕ್ಕೆ ನಾಮಪತ್ರ: ಸಮರಕ್ಕೆ ಸಿದ್ಧ
– ಮೋದಿಯಲ್ಲ ಬ್ರಹ್ಮ ಬಂದು ಹೇಳಿದರೂ ನಾನು ಚುನಾವಣೆಗೆ ನಿಲ್ಲುವುದು ಶತಸಿದ್ದ
NAMMUR EXPRESS NEWS
ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ತನ್ನ ಪುತ್ರ ಕಾಂತೇಶನಿಗೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷದ ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕರ ಮನವೊಲಿಕೆಯ ಮಾತಿಗೂ ಬಗ್ಗದೇ ಸ್ಪರ್ಧೆಯನ್ನು ಖಚಿತಪಡಿಸಿರುವ ಈಶ್ವರಪ್ಪ ನಾಮಪತ್ರ ಸಲ್ಲಿಕೆಗೂ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಬೆಂಬಲಿಗರ ಸಮಾವೇಶದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಬ್ರಹ್ಮ ಬಂದರೂ ನಾನು ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ. ಯಾರು ಏನೇ ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
25 ಸಾವಿರ ಜನರ ಸಮ್ಮುಖದಲ್ಲಿ ನಾಮಪತ್ರ
ಏಪ್ರಿಲ್ 12ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. 25,000 ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಈಶ್ವರಪ್ಪ ಘೋಷಿಸಿದ್ದಾರೆ. ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಸೋಲಿನ ಭೀತಿ ಹೆಚ್ಚಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಗೆಲುವಿಗಾಗಿ ಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದರು. ಹೀಗಾಗಿ ಕಾಂಗ್ರೆಸ್ ನಿಂದ ಡಮ್ಮಿ ಅಭ್ಯರ್ಥಿ ಹಾಕಿದ್ದರು. ಅದರಂತೆ ಹೊಂದಾಣಿಕೆ ಯಶಸ್ವಿಯಾಗಿತ್ತು. ಆದರೆ ಈ ಬಾರಿ ಹೊಂದಾಣಿಕೆ ರಾಜಕೀಯ ಯಶಸ್ವಿಯಾಗಲ್ಲ. ನಾನು 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ್ದಾರೆ.
– ಮೋದಿಯಲ್ಲ ಬ್ರಹ್ಮ ಬಂದು ಹೇಳಿದರೂ ನಿರ್ಧಾರ ಬದಲಿಸಲ್ಲ
ಕ್ಷೇತ್ರದ ಹಾಲಿ ಸಂಸದರ ಬಗ್ಗೆ ಜನರಲ್ಲಿ ಆಕ್ರೋಶವಿದ್ದು, ನನಗಾದ ಅನ್ಯಾಯವನ್ನು ಕಂಡು ಹೋದೆಡೆಯೆಲ್ಲಾ ಮತದಾರರು ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಚುನಾವಣಾ ಕಚೇರಿ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು, ಒಂದು ಕುಟುಂಬದ ಕೈಯಲ್ಲಿ ರಾಜ್ಯ ಬಿಜೆಪಿ ಇರುವುದು ಜನರಿಗೂ ಸಹ ಇಷ್ಟವಿಲ್ಲ. ಹಿಂದುತ್ವದ ಪರವಾಗಿ ಹೋರಾಟ ಮಾಡಿದ ಎಲ್ಲರಿಗೂ ಅನ್ಯಾಯವಾಗಿದೆ. ಅನೇಕ ಕಾರ್ಯಕರ್ತರು ತಮಗಾದ ನೋವನ್ನು ನನ್ನ ಬಳಿ ತೋಡಿಕೊಂಡಿದ್ದು, ನನ್ನ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ಪಕ್ಷ ನಿಷ್ಠೆ, ಹಿಂದುತ್ವದ ಹೋರಾಟ ಬೆಂಬಲಿಸಿ ನಿಮ್ಮ ಹಿಂದೆ ನಾವಿದ್ದೇವೆ ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ ಎಂದರು.
ನನ್ನ ನಿರ್ಧಾರ ಬೆಂಬಲಿಸಿ ನಮ್ಮ ಕಾರ್ಯಕರ್ತರು ಮಾತ್ರವಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಬಹಳಷ್ಟು ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ. ಈ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತವಾಗಿದ್ದು, ಗೆಲುವಿನ ನಂತರ ಮೋದಿ ಮತ್ತೆ ಪ್ರಧಾನಿಯಾಗಲು ಕ್ಷೇತ್ರದ ಮತದಾರರ ಪರವಾಗಿ ಕೈ ಎತ್ತುತ್ತೇನೆ. ಮೋದಿ ಹೇಳಿದ ಕೂಡಲೇ ನಾಮಪತ್ರ ವಾಪಾಸ್ಸು ಪಡೆಯಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಮೋದಿಯಲ್ಲ ಬ್ರಹ್ಮ ಬಂದು ಹೇಳಿದರು ನಾನು ಚುನಾವಣೆಗೆ ನಿಲ್ಲುವುದು ಶತಸಿದ್ಧ ಎಂದರು. ಕ್ಷೇತ್ರದಲ್ಲಿ ಹಾಲಿ ಸಂಸದರ ಬಗ್ಗೆ ಆಕ್ರೋಶವಿದೆ. ಭದ್ರಾವತಿ, ಶಿಕಾರಿಪುರ, ಸಾಗರ ಆಶ್ಚರ್ಯಕರ ರೀತಿಯಲ್ಲಿ ಬೈಂದೂರು ಮತ್ತು ಶಿವಮೊಗ್ಗ ಗ್ರಾಮಾಂತರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ಭೇಟಿಯಾದ ಎಲ್ಲಾ ಗುರುಗಳಿಗೂ ನನಗೆ ಆಶೀರ್ವಾದ ಮಾಡಿದ್ದಕ್ಕೆ ಕೆಲವರು ಅಸಹನೆ ವ್ಯಕ್ತಪಡಿಸಿದ್ದಾರೆ ಎಂದರು.