ವಾಟರ್ ಟ್ಯಾಂಕರ್ನಲ್ಲಿ ಕೊಳೆತ ಶವ: ನೀರು ಕುಡಿದವರು ಕಕ್ಕಾಬಿಕ್ಕಿ..!
– ದಾವಣಗೆರೆ: ಭದ್ರಾ ನಾಲೆಗೆ ಬಿದ್ದು ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಾವು
-ಮೈಸೂರು: ಮೂವರ ಜೀವ ತೆಗೆದ ಬಿಸಿಲು ಕಪಿಲಾ ನದಿಯ ಸುಳಿಗೆ ಸಿಲುಕಿ ಸಾವು
– ಯಾದಗಿರಿ: ಈಜಲು ಹೋಗಿ ನೀರುಪಾಲಾದ ಯುವಕ
– ತುಮಕೂರು : ವಿದ್ಯುತ್ ಶಾಕ್ನಿಂದ ದಿನಗೂಲಿ ಕಾರ್ಮಿಕ ಸಾವು
– ತುಮಕೂರು : ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು
– ಚಿಕ್ಕಬಳ್ಳಾಪುರ : ಅತ್ತೆಯನ್ನು ಎಳೆದೊಯ್ದು ತಿಪ್ಪೆಗೆ ಎಸೆದ ಕ್ರೂರ ಸೊಸೆ!
– ಬೆಂಗಳೂರು: ಬಸ್ ಏರಿ ಕುಳಿತಾಗಲೇ ಹಠಾತ್ ಹೃದಯಾಘಾತ
– ಹಾಸನ : ಅಕ್ರಮ ಗೋಮಾಂಸ ಜಾಲ; 60 ಗೋವುಗಳನ್ನು ಕೊಂದ ರಾಕ್ಷಸರು!
NAMMUR EXPRESS NEWS
ಬೀದರ್: ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಶವವೊಂದು ಪತ್ತೆಯಾಗಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಬೀದರ್ನ ಆಣದೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮನೆ ಮನೆಗೆ ಸರಬರಾಜು ಮಾಡುತ್ತಿದ್ದ ನೀರು ಗಬ್ಬು ನಾರುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಮೊದ ಮೊದಲು ಕುಡಿಯುವ ನೀರಿಗೆ ಚರಂಡಿ ನೀರು ಏನಾದರೂ ಮಿಶ್ರಣ ಎಂದು ಶಂಕಿಸಲಾಗಿತ್ತು. ಮನೆಗೆ ಸರಬರಾಜು ಆಗುತ್ತಿದ್ದ ನೀರಲ್ಲಿ ಕೂದಲು ಬರುತ್ತಿದ್ದವು. ಇತ್ತ ದೂರು ಬಂದ ಕಾರಣಕ್ಕೆ ವಾಟರ್ ಟ್ಯಾಂಕ್ ಪರಿಶೀಲನೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಟ್ಯಾಂಕ್ನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬಮ ಶವ ಪತ್ತೆಯಾಗಿದೆ.
ನೀರಿನ ಟ್ಯಾಂಕರ್ನಲ್ಲಿ ಎಷ್ಟು ದಿವಸದಿಂದ ಶವವಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೇ ಎಂಬುದು ತಿಳಿದು ಬಂದಿಲ್ಲ. ಗ್ರಾಮಸ್ಥರು ಹಲವು ದಿನದಿಂದ ಶವ ಬಿದ್ದಿದ್ದ ಟ್ಯಾಂಕಿನ ನೀರನ್ನೇ ಕುಡಿದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕುಡಿಯುವ ನೀರು ಗಬ್ಬು ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿದಾಗ ಶವ ಪತ್ತೆಯಾಗಿದೆ ಎಂದು ಗ್ರಾಮ ಪಂಚಾಯತಿ ಪಿಡಿಓ ಮಾಹಿತಿ ನೀಡಿದ್ದಾರೆ. ಮೊದಮೊದಲು ನೀರಿನೊಟ್ಟಿಗೆ ಕೂದಲು ಬಂದಿದೆ. ಜತೆಗೆ ಕುಡಿಯಲು ಆಗದಷ್ಟು ನೀರು ಗಬ್ಬು ನಾರುತ್ತಿತ್ತು. ಇದೀಗ ಸತ್ಯ ವಿಷಯವನ್ನು ತಿಳಿದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ದಾವಣಗೆರೆ: ಭದ್ರಾ ನಾಲೆಯಲ್ಲಿ ಸ್ನಾನಕ್ಕೆ ಹೋಗಿದ್ದ ವಿದ್ಯಾರ್ಥಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಮಣಿಕಂಠ (16) ಮೃತಪಟ್ಟ ದುರ್ದೈವಿ. ದಾವಣಗೆರೆ ಜಿಲ್ಲೆಯ ಬಸವಾಪಟ್ಟಣದಲ್ಲಿ ಘಟನೆ ನಡೆದಿದೆ. ಹೊನ್ನಾಳಿ ತಾಲೂಕಿನ ನೇರಲಗುಡಿ ಗ್ರಾಮದ ತಿಮ್ಮಪ್ಪ ಅವರ ಮಗ ಮಣಿಕಂಠ ಬಸವಾಪಟ್ಟಣ ಜನತಾ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಹೋಗಿದ್ದ. ಪರೀಕ್ಷೆ ಮುಗಿಸಿ ವಾಪಸ್ ಬರುವಾಗ ಸೆಕೆ ಎಂದು ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದಾನೆ. ಆದರೆ ಆಕಸ್ಮಿಕವಾಗಿ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಸಮೀಪದ ಹರೋಸಾಗರದ ಬಳಿ ಕಾಲುವೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮೈಸೂರು: ರಾಜ್ಯದಲ್ಲಿ ಸೆಕೆ ವಿಪರೀತವಾಗಿದೆ. ಬಿಸಿಲ ತಾಪದಿಂದ ತಪ್ಪಿಸಿಕೊಳ್ಳಲು ಜನರು ನಾನಾ ತಂತ್ರಗಳನ್ನು ಬಳಸುತ್ತಿದ್ದಾರೆ. ಕೆಲವರು ನೀರಿನಲ್ಲಿ ಈಜಲೂ ಹೋಗುವುದುಂಟು. ಆದರೆ ಮೈಸೂರಿನಲ್ಲಿ ಬಿಸಿಲ ತಾಪಮಾನವು ಮೂವರ ಜೀವ ತೆಗೆದಿದೆ. ಸೆಕೆ ತಾಳಲಾರದೆ ಮೂವರು ಕೆರೆಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರಿನ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಬಿಹಾರ ಮೂಲದ ಮಿಲನ್ (25), ಮೋಹನ್ (19), ತರುಣ್ (19) ಮೃತ ಕಾರ್ಮಿಕರು. ಈ ಮೂವರು ನೆಸ್ಲೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಹೊರ ಬಂದ ಯುವಕರು ಬೇಸಿಗೆಯ ಸೆಖೆ ತಾಳಲಾರದೆ ಕಪಿಲಾ ನದಿಗೆ ಇಳಿದಿದ್ದಾರೆ. ಆದರೆ ಕಪಿಲಾ ನದಿಗೆ ಇಳಿದವರು ಸುಳಿಗೆ ಸಿಲುಕಿ ಹೊರಬರಲು ಆಗದೆ ಮೃತಪಟ್ಟಿದ್ದಾರೆ.
ಯಾದಗಿರಿ : ಕೆರೆಯಲ್ಲಿ ಈಜಾಡಲು ಹೋಗಿ ಯುವಕನೊಬ್ಬ ನೀರುಪಾಲಾಗಿದ್ದಾನೆ. ಯಾದಗಿರಿ ತಾಲೂಕಿನ ಅರಕೇರಾ ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸವಲಿಂಗಪ್ಪ (18) ಮೃತ ದುರ್ದೈವಿ. ಬೆಳಗ್ಗೆ ಸ್ನೇಹಿತರ ಜತೆ ಬಣ್ಣದೋಕಳಿ ಆಡಿ ನಂತರ ತಮ್ಮನೊಟ್ಟಿಗೆ ಕೆರೆಗೆ ಈಜಾಡಲು ತೆರಳಿದ್ದಾನೆ. ಆದರೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳೀಯರು ಮೃತದೇಹವನ್ನು ಹೊರ ತೆಗೆದಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲೆ.
ಆನೇಕಲ್: ವೇಗವಾಗಿ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಮಿರ್ಜಾ ರಸ್ತೆಯಲ್ಲಿ ಘಟನೆ ನಡೆದಿದೆ. ರಾಕೇಶ್ (28) ಮೃತ ದುರ್ದೈವಿ. ಮತ್ತೋರ್ವ ಅರಣ್ಯ ಇಲಾಖೆ ಸಿಬ್ಬಂದಿ ವಿನಯ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಇವರಿಬ್ಬರು ಆನೇಕಲ್ ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಬೈಕ್ನಲ್ಲಿ ತೆರಳಿದ್ದರು.
ಈ ವೇಳೆ ಅತಿ ವೇಗವಾಗಿ ಬಂದ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ರಾಕೇಶ್ ತಲೆಯ ಮೇಲೆಯೇ ಲಾರಿಯ ಚಕ್ರ ಹರಿದಿದೆ. ಪರಿಣಾಮ ನಜ್ಜುಗುಜ್ಜಾದ ರಾಕೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅಪಘಾತದಲ್ಲಿ ವಿನಯ್ಗೂ ಗಂಭೀರ ಗಾಯವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ತುಮಕೂರು : ವಿದ್ಯುತ್ ಶಾಕ್ ಹೊಡೆದ ಪರಿಣಾಮ ದಿನಗೂಲಿ ಕಾರ್ಮಿಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ. ತುಮಕೂರಿನ ಕ್ಯಾದಗೊಂಡನಹಳ್ಳಿಯಲ್ಲಿ ಅವಘಡ ನಡೆದಿದೆ. ನರೇಂದ್ರ ಕುಮಾರ್ (25) ಮೃತ ದುರ್ದೈವಿ. ನರೇಂದ್ರ ಕುಮಾರ್ ತುಮಕೂರಿನ ಮಧುಗಿರಿ ತಾಲೂಕಿನ ದೊಡ್ಡಯಲ್ಕೂರು ಗ್ರಾಮದ ನಿವಾಸಿಯಾಗಿದ್ದಾರೆ. ವಿದ್ಯುತ್ ತಂತಿಗೆ ಅಡ್ಡಿಯಾಗಿದ್ದ ಮರವನ್ನು ಕಡಿಯುವಾಗ ವಿದ್ಯುತ್ ಸ್ಪರ್ಶ ಆಗಿದೆ. ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾರೆ. ಇತ್ತ ಮೃತ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು. ಮಧುಗಿರಿ ಸರ್ಕಾರಿ ಆಸ್ಪತ್ರೆ ಎದುರು ಮೃತ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು: ಹುಣಸೆ ಮರದಿಂದ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ತುಮಕೂರಿನ ಕೊರಟಗೆರೆ ತಾಲೂಕಿನ ಕಬ್ಬಿಗೆರೆ ಗ್ರಾಮದಲ್ಲಿ ನಡೆದಿದೆ. ಗುಬ್ಬಿ ತಾಲೂಕಿನ ಗುಡ್ಡದ ಜೋಗಿಹಳ್ಳಿ ಮೂಲದ ಮಂಜುನಾಥ್ (32) ಮೃತ ದುರ್ದೈವಿ. ಕಬ್ಬಿಗೆರೆ ಗ್ರಾಮದಲ್ಲಿ ಜವರೇಗೌಡ ಎಂಬುವವರ ಜಮೀನಿನಲ್ಲಿ ಹುಣಸೆ ಹಣ್ಣನ್ನು ಕೀಳಲು ಮಂಜುನಾಥ್ ಹೋಗಿದ್ದರು. ಮಂಜುನಾಥ್ ಹುಣಸೆ ಹಣ್ಣು ಬಡಿಯಲು ಮರ ಹತ್ತಿದ್ದರು.
ಮರ ಹತ್ತಿ ಕೋಲಿನಿಂದ ಹಣ್ಣು ಬಡಿಯುತ್ತಿದ್ದಾಗ ಆಯತಪ್ಪಿ ಮರದಿಂದ ಕೆಳಗೆ ಬಿದ್ದಿದ್ದಾರೆ. ಮರದಿಂದ ಕೆಳಗೆ ಬಿದ್ದ ರಭಸಕ್ಕೆ ಮಂಜುನಾಥ್ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರ: ಹೆತ್ತ ತಂದೆ-ತಾಯಿಯನ್ನೇ ವಯಸ್ಸಾಗುತ್ತಲೇ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳಿದ್ದಾರೆ. ಇನ್ನು, ತಾಯಿ ಸಮಾನಳಾದ ಅತ್ತೆ ಮೇಲೆ ಸೊಸೆಯಂದಿರುವ ತೋರುವ ದರ್ಪ, ಹಲ್ಲೆಯ ಸುದ್ದಿಗಳಂತೂ ಆಗಾಗ ಕೇಳಿಸುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 80 ವರ್ಷದ ಅತ್ತೆಯನ್ನು ಎಳೆದೊಯ್ದು, ತಿಪ್ಪೆಗೆ ಎಸೆಯುವ ಮೂಲಕ ಅಮಾನವೀಯತೆ ತೋರಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಿಪಲ್ಲಿ ಗ್ರಾಮದಲ್ಲಿ ಸೊಸೆಯು ಅತ್ತೆಯ ಮೇಲೆ ಮೃಗೀಯ ವರ್ತನೆ ತೋರಿದ್ದಾಳೆ.
80 ವರ್ಷದ ವೆಂಕಟಲಕ್ಷ್ಮಮ್ಮ ಅವರು ಮನೆಯ ಎದುರು ಮಲಗಿದ್ದಾಗ ಲಕ್ಷ್ಮೀದೇವಮ್ಮ ಎಂಬ ಮಹಿಳೆಯು ಅವರನ್ನು ಎಳೆದಿದ್ದಾರೆ. ವೃದ್ಧೆ ಎಂಬುದನ್ನೂ ಲೆಕ್ಕಿಸದ ಸೊಸೆಯು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಸಿಲು ಎಂದು ನೆರಳಿನಲ್ಲಿ ಮಲಗಿದ್ದ ಅತ್ತೆಯ ಮೇಲೆ ಸೊಸೆ ತೋರಿದ ಕ್ರೌರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಹೃದಯಾಘಾತ ವೃದ್ಧರೊಬ್ಬರ ಪ್ರಾಣವನ್ನು ಬಲಿ ಪಡೆದಿದೆ. ಈಗೀಗ ಹೃದಯಾಘಾತ ಯಾವುದೇ ಕ್ಷಣದಲ್ಲಿ ಆಗಿಬಿಡಬಹುದು ಎನ್ನುವಷ್ಟು ಭಯಾನಕವಾಗಿದೆ. ಕುಳಿತಲ್ಲೇ, ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುವ, ನಿಂತಲ್ಲೇ ಉಸಿರು ನಿಲ್ಲುವ, ಮಲಗಿದ್ದಲ್ಲೇ ಉಸಿರು ಚೆಲ್ಲುವ ವಿದ್ಯಮಾನಗಳು ಏಕಾಏಕಿ ಹೆಚ್ಚಾಗಿದೆ. ಇಂಥಹುದೇ ಒಂದು ಆತಂಕ ಮೂಡಿಸುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧರೊಬ್ಬರು ಕುಳಿತಲ್ಲೇ ಕುಸಿದಿದ್ದು, ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಹಠಾತ್ ಹೃದಯಾಘಾತದಿಂದ ವೃದ್ಧ ಪ್ರಾಣ ಕಳೆದುಕೊಂಡಿದ್ದಾರೆ.
ಕೃಷ್ಣ (60) ಮೃತ ದುರ್ದೈವಿ. 11 ಗಂಟೆ ಸುಮಾರಿಗೆ ಮೆಜೆಸ್ಟಿಕ್ ನಿಲ್ದಾಣದಿಂದ ಬಸ್ ಹತ್ತಿದ್ದ ಕೃಷ್ಣ ಅವರು ಟಿಕೆಟ್ ಪಡೆದು ಸೀಟ್ನಲ್ಲಿ ಕುಳಿತುಕೊಂಡಿದ್ದರು. ನವರಂಗ್ ಬಳಿ ಬರುತ್ತಿದ್ದಂತೆ ಹದಿನೈದು ನಿಮಿಷದಲ್ಲೇ ಹೃದಯಾಘಾತವಾಗಿದೆ. ನೋಡನೋಡುತ್ತಿದ್ದಂತೆ ಬಸ್ಸಿನಲ್ಲೇ ಉಸಿರು ಚೆಲ್ಲಿದ್ದಾರೆ. ಏಕಾಏಕಿ ವ್ಯಕ್ತಿ ಮೃತಪಟ್ಟಿದ್ದು ಕಂಡ ಸಹಪ್ರಯಾಣಿಕರು ಆತಂಕಗೊಂಡು ಕಿರುಚಾಡಿದ್ದಾರೆ. ಕೂಡಲೇ ಚಾಲಕ ಹಾಗು ನಿರ್ವಾಹಕರು ಬಿಎಂಟಿಸಿ ಬಸ್ನಲ್ಲೇ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಬಳಿಕ ಮೃತ ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ.
ಹಾಸನ: ಗೋವುಗಳ ಅಕ್ರಮ ಸಾಗಣೆ ಅಕ್ರಮವಾಗಿ ಗೋಮಾಂಸ ಮಾರಾಟ ನಿಯಂತ್ರಣಕ್ಕೆ ಎಷ್ಟೇ ಕಾನೂನು ಜಾರಿಯಲ್ಲಿದ್ದರೂ ಕೆಲವೆಡೆ ಯಥೇಚ್ಛವಾಗಿ ಗೋಮಾಂಸ ಮಾರಾಟ ದಂಧೆ ಮುಂದುವರಿದಿದೆ. ಇದಕ್ಕೆ ಉದಾಹರಣೆ ಎಂಬಂತೆ, ಹಾಸನದಲ್ಲಿ ಗೋಮಾಂಸದ ಅಕ್ರಮ ಮಾರಾಟದ ಜಾಲವೊಂದು ಬಯಲಾಗಿದೆ. ಮಾಂಸ ಮಾರಾಟಕ್ಕಾಗಿ ದುರುಳರು ಸುಮಾರು 60ಕ್ಕೂ ಅಧಿಕ ಗೋವುಗಳನ್ನು ವಧೆ ಮಾಡಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ಸುಮಾರು 60 ಗೋವುಗಳನ್ನು ಕೊಂದಿರುವ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಐದು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.
ಇನ್ನು 60 ಗೋವುಗಳನ್ನು ಕೊಂದ ದುಷ್ಕರ್ಮಿಗಳು, ಅವುಗಳನ್ನು ನೇತು ಹಾಕಿದ್ದಾರೆ. ಪೊಲೀಸರು ಸುಮಾರು 10 ಸಾವಿರ ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಎರಡು ಹಸುಗಳಿಗೆ ಗುಂಡಿಕ್ಕಿ ಕೊಂದ ಘಟನೆ ಹಾಸನದ ಬೇಲೂರು ತಾಲೂಕಿನ ಹಿರೇಹಸಡೆ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ವಸಂತ್ಕುಮಾರ್, ಶಿವಮ್ಮ ಎಂಬುವವರಿಗೆ ಸೇರಿದ ಹಸುಗಳು ಕಾಣೆಯಾಗಿದ್ದವು. ವಸಂತ್ಕುಮಾರ್, ಶಿವಮ್ಮ ಸೇರಿ ಗೋವುಗಳಿಗಾಗಿ ಹುಡುಕಾಡಿದ್ದರು. ಎರಡು ದಿನಗಳ ಐಬಿಸಿ ಎಸ್ಟೇಟ್ನಲ್ಲಿ ಗೋವುಗಳ ಮೃತದೇಹ ಪತ್ತೆಯಾಗಿದ್ದವು. ಕಿರಾಕತರು ಎರಡು ಗಬ್ಬದ ಹಸುಗಳನ್ನು ಗುಂಡು ಹಾರಿಸಿ ಕೊಂದಿದ್ದರು.