ಮಲ್ನಾಡ್ ಕ್ಲಬ್ ಸದಸ್ಯರ ಮಾನವೀಯ ಕಾರ್ಯ!
– ಮೃತ ಪೃಥ್ವಿನ್ ಕುಟುಂಬಕ್ಕೆ ಸಹಾಯ
– 6 ಲಕ್ಷ ರೂ.ಪೃಥ್ವಿನ್ ತಾಯಿಯ ಹೆಸರಿನಲ್ಲಿ ನಿಶ್ಚಿತ ಠೇವಣಿ
NAMMUR EXPRESS NEWS
ತೀರ್ಥಹಳ್ಳಿ: ತೋಟಕ್ಕೆ ನೀರು ಹಾಯಿಸಲು ಹೋಗಿ ಆಕಸ್ಮಿಕವಾಗಿ ಮೃತನಾದ ವಿದ್ಯಾರ್ಥಿ, ಮಲ್ನಾಡ್ ಕ್ಲಬ್ ಸಿಬ್ಬಂದಿ ಪೃಥ್ವಿನ್ ಕುಟುಂಬಕ್ಕೆ ಕ್ಲಬ್ ಸಹೃದಯಿ ಸದಸ್ಯರು, ಕ್ಲಬ್ ಸಿಬ್ಬಂದಿಗಳು,ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ಎಲ್ಲರ ಸಹಕಾರದಿಂದ ಸಂಗ್ರಹವಾದ ರೂ 6.00 ಲಕ್ಷ ಮೊತ್ತವನ್ನು ಪೃಥ್ವಿನ್ ತಾಯಿ ವೀಣಾ ಹೆಸರಿನಲ್ಲಿ ನಿಶ್ಚಿತ ಠೇವಣಿ ಇರಿಸಲಾಗಿದ್ದು, ಪ್ರತಿ ತಿಂಗಳು ಅವರಿಗೆ ರೂ. 3700.00 ಬಡ್ಡಿಯ ರೂಪದಲ್ಲಿ ಸಿಗಲಿದೆ. ನಿಶ್ಚಿತ ಠೇವಣಿಯ ಬಾಂಡ್ ನ್ನು ಎಲ್ಲರ ಸಮ್ಮುಖದಲ್ಲಿ ವಿತರಿಸಲಾಯಿತು ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ಅಲ್ಲಿ ಶುಕ್ರವಾರ ಸಂಜೆ 6.30 ಕ್ಕೆ ಕ್ಲಬ್ ನ ಸಿಲ್ವರ್ ಜುಬಲಿ ಹಾಲ್ ನಲ್ಲಿ ಪೃಥ್ವಿನ್ ಕುಟುಂಬಕ್ಕೆ ಸಹಾಯಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೃಷಿ ಇಲಾಖೆಯಿಂದ ರೈತರ ಆಕಸ್ಮಿಕ ಮರಣ ಪರಿಹಾರ ₹ 2.00 ಲಕ್ಷ ಮೊತ್ತದ ಪ್ರಸ್ತಾವನೆ ಮಂಜೂರಾತಿಯ ಅಂತಿಮ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಆ ಪರಿಹಾರ ಮೊತ್ತವೂ ಸಿಗಲಿದೆ ಎಂದು ಹಾಜರಿದ್ದ ಕೃಷಿ ಇಲಾಖೆಯ ಕೌಶಿಕ್ ತಿಳಿಸಿದರು. ತಹಸೀಲ್ದಾರ್ ಅಧ್ಯಕ್ಷತೆಯ ತಾಲ್ಲೂಕು ಮಟ್ಟದ ಸಮಿತಿಯಲ್ಲಿ ಪರಿಹಾರ ಅರ್ಜಿಯ ಶೀಘ್ರ ವಿಲೇವಾರಿಗೆ ಸಹಕರಿಸಿದ ತಹಸೀಲ್ದಾರ್, ಕಾರ್ಯ ನಿರ್ವಾಹಕಾಧಿಕಾರಿಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಲಾಯಿತು. ಕ್ಲಬ್ ಪ್ರಭಾರ ಅಧ್ಯಕ್ಷರಾದ ಶರಾವತಿ ಜಗದೀಶ್ ಹೆಗ್ಡೆ, ಪದವಿ ಕಾಲೇಜಿನ ಪ್ರಾoಶುಪಾಲರಾದ ಧರ್ಮಣ್ಣ, ಗೌರವ ಕಾರ್ಯದರ್ಶಿ ಎಸ್. ರಾಘವೇಂದ್ರ, ಕೃಷಿ ಇಲಾಖೆ ಅಧಿಕಾರಿಗಳಾದ ಕೌಶಿಕ್, ಕ್ಲಬ್ ನ ಆಡಳಿತ ಮಂಡಳಿ ಮತ್ತು ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಸಹಾಯ ಹಸ್ತ ಚಾಚಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದವನ್ನು ಅರ್ಪಿಸಲಾಯಿತು.
ತಮ್ಮ ತೋಟಕ್ಕೆ ನೀರು ಬಿಡುವ ಸಂದರ್ಭದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಪೃತ್ವಿನ್ ಮೃತಪಟ್ಟಿದ್ದ. ಆತನಿಗೆ ನಮನ ಸಲ್ಲಿಸಲಾಯಿತು.
ಸ್ನೇಹಿತನ ಸಹೋದರಿ ಕೈ ಹಿಡಿದ ಅಭಿಷೇಕ್!
ಇನ್ನು ತನ್ನ ಜತೆ ಇದ್ದ ಪೃಥ್ವಿನ್ ಅವರಅಕ್ಕ ಪೂಜಾ ಜೊತೆಗೆ ಕ್ಲಬ್ ಸಿಬ್ಬಂದಿಯಾದ ಅಭಿಷೇಕ್ ಮದುವೆ ನಿಶ್ಚಯವಾಗಿದ್ದು, ಆಧಾರವೇ ಇಲ್ಲದ ಕುಟುಂಬಕ್ಕೆ ಆಸರೆಯಾಗುತ್ತಿರುವ ಅಭಿಷೇಕ್ ಅವರಿಗೆ ಸರ್ವರೂ ಆಶೀರ್ವಾದ ಮಾಡಿದರು.