ವೇಷ ಮರೆಸಿಕೊಂಡು ಶಂಕಿತರ ಓಡಾಟ: ಸುಳಿವು ಕೊಟ್ಟರೆ 10 ಲಕ್ಷ ರೂ. ಬಹುಮಾನ!
– ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಿಸಿದವರ ಅಸಲಿ ಫೋಟೋ ಬಹಿರಂಗ
– ಐಡೆಂಟಿಟಿ ಮರೆ ಮಾಚಲು ನಕಲಿ ಗಡ್ಡ, ನಕಲಿ ವಿಗ್!
NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಆರೋಪಿಗಳಾದ ಅಬ್ದುಲ್ ಮತೀನ್ ಅಹಮದ್ ತಾಹ ಹಾಗೂ ಆತನ ಸಹಚರ ಮುಸಾವಿರ್ ಹುಸ್ಸೇನ್ ಅವರ ಫೋಟೋವನ್ನು ಎನ್ಐಎ ಬಿಡುಗಡೆ ಮಾಡಿದೆ. ಆರೋಪಿಗಳ ಸುಳಿವು ನೀಡುವವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಈಗಾಗಲೇ ಅವರಿಗಾಗಿ ರಾಜ್ಯದ ಹಲವು ಕಡೆ ಶೋಧ ನಡೆಯುತ್ತಿದೆ. ಕರಾವಳಿ, ಮಲೆನಾಡು, ಬೆಂಗಳೂರು ಭಾಗದಲ್ಲಿ ಇವರ ಜಾಡು ಪತ್ತೆ ಮಾಡಲಾಗುತ್ತಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಮಾಡಿ ಪರಾರಿ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾರ್ಚ್ 1 ರಂದು ನಡೆದಿದ್ದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹುಡುಕಾಟ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆರೋಪಿಗಳ ಫೋಟೋವನ್ನು ಹಂಚಿಕೊಂಡಿದೆ. ಅಬ್ದುಲ್ ಮತೀನ್ ಅಹಮದ್ ತಾಹ ಹಾಗೂ ಆತನ ಸಹಚರ ಮುಸಾವಿರ್ ಹುಸ್ಸೇನ್ ಎಂಬ ಆರೋಪಿಗಳ ಫೋಟೋವನ್ನು ಹಂಚಿಕೊಂಡಿದ್ದು, ಈ ಆರೋಪಿಗಳ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್ಐಎ ಘೋಷಣೆ ಮಾಡಿದೆ. ಅಬ್ದುಲ್ ಮತೀನ್ ಅಹಮದ್ ತಾಹಾ ಹಾಗೂ ಮುಸಾವಿರ್ ಹುಸ್ಸೇನ್ ಶಾಜಿಬ್ ಇಬ್ಬರ ಪೋಟೋ ಬಿಡುಗಡೆ ಮಾಡಲಾಗಿದೆ. ಇಬ್ಬರು ಶಂಕಿತರ ತಲಾ 3 ಮಾದರಿಯ ಪೋಟೋ ಬಿಡುಗಡೆ ಮಾಡಿದೆ. ಶಂಕಿತರು ಹೇಗೆ ಇರಬಹುದು ಎಂಬುದರ ಮಾಹಿತಿಯನ್ನು ಎನ್ಐಎ ನೀಡಿದೆ
ಹಿಂದೂ ಹೆಸರಿಟ್ಟುಕೊಂಡು ಓಡಾಟ!
ಎನ್ ಐ ಎ ಬಿಡುಗಡೆ ಮಾಡಿದ ವಾಂಟೆಡ್ ಲಿಸ್ಟ್ ನಲ್ಲಿ ಸ್ಪೋಟಕ ವಿಚಾರ ಬಯಲಿಗೆ ಬಂದಿದೆ. ಅಬ್ದುಲ್ ಮತೀನ್ ಅಹಮದ್ ತಾಹಾ ಹಿಂದೂ ಯುವಕನ ರೀತಿಯಲ್ಲಿರೋದು ಪತ್ತೆಯಾಗಿದೆ. ಬಾಂಬ್ ಬ್ಲಾಸ್ಟ್ ಮಾಡಿದ ಆರೋಪಿ ಅಬ್ದುಲ್ ಮತೀನ್ ತಾಹ ತಾನು ಹಿಂದೂ ಹೆಸರು ಹೇಳಿಕೊಂಡು ದೇಶದ ವಿವಿಧ ನಗರಗಳಲ್ಲಿ ಸಂಚಾರ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಈತ ತಲೆ ಮರೆಸಿಕೊಳ್ಳಲು ವಿಘ್ನೇಶ್ ಹಾಗೂ ಸುಮಿತ ಎಂಬ ಹೆಸರನ್ನು ಇಟ್ಟುಕೊಂಡು ಓಡಾಡುತ್ತಿದ್ದಾನೆ. ಜೊತೆಗೆ, ವಿಘ್ನೇಶ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದಾನೆ.
ಬೇರೊಬ್ಬರ ಹೆಸರಲ್ಲಿ ಡ್ರೈವಿಂಗ್ ಲೈಸೆನ್ಸ್
ಇನ್ನು ಬಾಂಬ್ ಹಾಕಿದ ಆರೋಪಿ ಅಬ್ದುಲ್ ಮತೀನ್ ತಾಹನ ಸಹಚರ ಮುಸಾವೀರ್ ಹುಸ್ಸೇನ್ ಶಾಜಿಬ್ ಕೂಡ ತಲೆ ಮರೆಸಿಕೊಂಡಿದ್ದಾರೆ. ಈತನು ಕೂಡ ಹೇಗಿರಬಹುದು ಎಂಬ 3 ಮಾದರಿಯ ಫೋಟೋ ಹಂಚಿಕೊಳ್ಳಲಾಗಿದೆ. ಇನ್ನು ಮುಸಾವೀರ್ ಹುಸ್ಸೇನ್ ಶಾಜಿಬ್ ಕೂಡ ತನ್ನ ಹೆಸರನ್ನು ಬದಲಿಸಿಕೊಂಡು ದೇಶದ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದಾನೆ. ಈತ ಮಹಮ್ಮದ್ ಜುನೇದ್ ಸೈಯದ್ ಎಂಬ ಹೆಸರಿನಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾನೆ. ಶಂಕಿತರಿಬ್ಬರು ತಮ್ಮ ಐಡೆಂಟಿಟಿ ಮರೆ ಮಾಚಲು ನಕಲಿ ಗಡ್ಡ, ನಕಲಿ ವಿಗ್ ಬಳಸುತ್ತಿದ್ದಾರೆ ಎಂದು ಎನ್ಐಎ ಮಾಹಿತಿ ನೀಡಿದೆ.