ಕಾಪು ಮಹಿಳಾ ಸಿಬ್ಬಂದಿ ಆತ್ಮಹತ್ಯೆ: ಪತಿ ಅರೆಸ್ಟ್!
– ಸಾವಿಗೆ ಪತಿಯ ಅನುಮಾನವೇ ಕಾರಣ ಎಂದು ಡೆತ್ ನೋಟ್ : ಏನಿದು ಘಟನೆ?
NAMMUR EXPRESS NEWS
ಕಾಪು: ಕಾಪು ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಜ್ಯೋತಿ(32) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ರವಿಕುಮಾರ್(35) ಬಂಧಿತ ಆರೋಪಿ. ರವಿಕುಮಾರ್ ಕೆಎಸ್ಆರ್ಟಿಸಿ ಸಂಸ್ಥೆಯಲ್ಲಿ ಮೆಕ್ಯಾನಿಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2017ರಲ್ಲಿ ತಮ್ಮದೇ ಊರಿನ ಜ್ಯೋತಿ ಜತೆಗೆ ಮದುವೆಯಾಗಿತ್ತು. ಜ್ಯೋತಿ ಕಾಪು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ಇಬ್ಬರು ಕೂಡ ಸಮೀಪದಲ್ಲೇ ಇದಗದ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು. ಮಾ.29ರಂದು ರಾತ್ರಿ ರವಿಕುಮಾರ್ ಹಾಗೂ ಜ್ಯೋತಿ ನಡುವೆ ಗಲಾಟೆ ನಡೆದಿದ್ದು, ಮರು ದಿನ ಬೆಳಗ್ಗೆ ಪತಿ ಕಚೇರಿಗೆ ಹೋದ ಬಳಿಕ ಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜ್ಯೋತಿ ರೂಮ್ನಲ್ಲಿ ಡೈರಿಯೊಂದು ಪತ್ತೆಯಾಗಿದೆ. ಅದರಲ್ಲಿ ತನ್ನ ಸಾವಿಗೆ ಪತಿಯ ಅನುಮಾನವೇ ಕಾರಣ ಎಂದು ಬರೆಯಲಾಗಿದೆ. ತಮ್ಮಿಬ್ಬರ ಸಂಸಾರಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದ್ದು, ಆ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಇದೀಗ, ಜ್ಯೋತಿ ತಾಯೊ ದೇವಮ್ಮ ವಿಟ್ಲಾಪುರ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.