- 100 ಎಕರೆ ಪ್ರದೇಶದಲ್ಲಿ ಸೈನಿಕ ಶಾಲೆ ಯೋಜನೆ
- ತೀರ್ಥಹಳ್ಳಿಯಲ್ಲಿ 500 ಕೋಟಿಯ ಅಭಿವೃದ್ಧಿ ಪರ್ವ
ತೀರ್ಥಹಳ್ಳಿ: ಬಹು ನಿರೀಕ್ಷಿತ ಸೈನಿಕ್ ಶಾಲೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಪ್ರವಾಸಿ ತಾಣ ಆಗುಂಬೆ ಬಳಿ ಶುರುವಾಗಲಿದೆ. ಈಗಾಗಲೇ ಸುಮಾರು 100 ಎಕರೆ ಪ್ರದೇಶ ಗುರುತಿಸುವ ಕಾರ್ಯ ಆರಂಭವಾಗಿದೆ. 300 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಶಾಲೆ ನಿರ್ಮಾಣ ಮಾಡಲಾಗುತ್ತದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದ ಹಲವೆಡೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ರಾಘವೇಂದ್ರ, ಸೈನಿಕ ಶಾಲೆ ಸ್ಥಾಪನೆ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ಸಿಂಗ್ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗಿದೆ. ಎಲ್ಲ ಸೌಕರ್ಯಗಳೊಂದಿಗೆ ಸೈನಿಕ ಶಾಲೆ ಆರಂಭವಾಗಲಿದ್ದು ತೀರ್ಥಹಳ್ಳಿ ಭಾಗಕ್ಕೆ ವಿಶೇಷ ಆದ್ಯತೆ ಸಿಗಲಿದೆ. ಜೊತೆಗೆ ಶಿವಮೊಗ್ಗದಲ್ಲಿ 350 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಶುರುವಾಗಿದೆ. 5000 ಕೋಟಿ ವೆಚ್ಚದಲ್ಲಿ ಶಿವಮೊಗ್ಗ-ತುಮಕೂರು ಜೋಡಿ ರಸ್ತೆ ಈಗಾಗಲೇ ನಡೆಯುತ್ತಿದೆ. ಶಿವಮೊಗ್ಗಕ್ಕೆ ಕೈಗಾರಿಕಾ ಕಾರಿಡಾರ್ ತರುವ ಪ್ರಯತ್ನ ಮಾಡುತ್ತಿದ್ದೇನೆ. ಈ ಮೂಲಕ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಜನರ ಸೇವೆಗೆ ಮುಂದಾಗಿವೆ ಎಂದರು.
ತೀರ್ಥಹಳ್ಳಿ ತಾಲೂಕಿನ ವಿವಿಧ ಕಡೆಗಳಲ್ಲಿ ರಸ್ತೆ, ಸೇತುವೆ, ಸಮುದಾಯ ಭವನ ಸೇರಿದಂತೆ ಸುಮಾರು 125 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿದರು.
ಬೆಂಗಳೂರು- ಮುಂಬಯಿ ಕೈಗಾರಿಕಾ ಕಾರಿಡಾರ್ ವ್ಯಾಪ್ತಿಗೆ ಶಿವಮೊಗ್ಗ ಜಿಲ್ಲೆ ಸೇರ್ಪಡೆ ಮಾಡಲಾಗಿದ್ದು ವಿಮಾನ, ರೈಲುಯಾನ ಅಭಿವೃದ್ಧಿಪಡಿಸಿ ಉದ್ಯೋಗಾವಕಾಶ ಹೆಚ್ಚಿಸಲಾಗುತ್ತದೆ, ಮಾಚೇನಹಳ್ಳಿಯಲ್ಲಿ ಸ್ಪೈಸ್ಫುಡ್ ಪಾರ್ಕ್ ನಿರ್ಮಾಣಕ್ಕೆ ಸುಮಾರು 200 ಎಕರೆ ಪ್ರದೇಶ ಬೇಕಿದ್ದು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಷ್ಟ್ರದಲ್ಲಿ ಶಿವಮೊಗ್ಗವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದು ಜನತೆಗೆ ಸಭೆಯುದ್ದಕ್ಕೂ ಅಭಯ ನೀಡಿದರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸುಮಾರು 500 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಲಾಗಿದೆ. ದೇಶದಲ್ಲಿ ಶಿವಮೊಗ್ಗ ಕ್ಷೇತ್ರ ಮಾದರಿಯಾಗಬೇಕು. ಪ್ರತಿ ಹಳ್ಳಿಗೂ ಅನುದಾನ ತಂದಿದ್ದೇವೆ. ಇನ್ನೂ ತರುತ್ತೇವೆ. ಗ್ರಾಮ ಪಂಚಾಯತಿಯಲ್ಲಿ ಈ ಕೆಲಸ ಮುಂದಿಟ್ಟುಕೊಂಡು ಮತ ಕೇಳುತ್ತೇವೆ ಎಂದರು.
ಸಭೆಗಳಲ್ಲಿ ಕಾಂಪೋಸ್ಟ್ ಮಂಡಳಿಯ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್, ಬಿಜೆಪಿ ಅಧ್ಯಕ್ಷ ರಾಘವೇಂದ್ರ ಬಾಳೆಬೈಲು, ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ದೇಶಕ, ಬಿಜೆಪಿ ನಾಯಕ ಮದನ್, ತಹಶೀಲ್ದಾರ್ ಡಾ.ಶ್ರೀಪಾದ್, ಇಒ ಆಶಾಲತಾ, ಜಿಪಂ ಸದಸ್ಯರಾದ ಶ್ರೀನಿವಾಸ್, ಶರದಿ ಪೂರ್ಣೇಶ, ತಾಲೂಕು ಪಂಚಾಯತ್ ಸದಸ್ಯರಾದ ಚಂದವಳ್ಳಿ ಸೋಮಶೇಖರ್, ಮಂಜುನಾಥ್, ಕುಕ್ಕೆ ಪ್ರಶಾಂತ್ ಸೇರಿದಂತೆ ಬಹುತೇಕ ನಾಯಕರು, ಗ್ರಾಮಸ್ಥರು ಇದ್ದರು. ಮಧ್ಯಾಹ್ನ ಶುರುವಾದ ಕಾಮಗಾರಿ ಗುದ್ದಲಿಪೂಜೆ ತಡರಾತ್ರಿವರೆಗೆ ಮೇಗರವಳ್ಳಿಯಲ್ಲಿ ರಸ್ತೆ ಉದ್ಘಾಟನೆ ಮೂಲಕ ಕೊನೆಗೊಂಡಿತು. ಅಲ್ಲಿಂದ ರಾಘವೇಂದ್ರ ಬೈಂದೂರು ಪ್ರವಾಸ ಬೆಳೆಸಿದರು.