ರಂಗೇರಿದ ಕರಾವಳಿ ಚುನಾವಣಾ ಕಣ!
– ಏ.3, 4ರಂದು ಪ್ರಮುಖ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
– ಏ.3ಕ್ಕೆ ಕೋಟಾ, ಜಯಪ್ರಕಾಶ್ ಹೆಗ್ಡೆ, ಪದ್ಮರಾಜ್ ನಾಮಪತ್ರ, 4ಕ್ಕೆ ಚೌಟ ನಾಮಪತ್ರ
– ದಕ್ಷಿಣ ಕನ್ನಡ, ಉಡುಪಿಯಲ್ಲಿ ಬಿಲ್ಲವ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಸತ್ಯಜಿತ್ ಸುರತ್ಕಲ್
NAMMUR EXPRESS NEWS
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಚುನಾವಣೆ ಕಾವು ಜೋರಾಗುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಗೆ ಕಣ ಸಿದ್ಧವಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಈಗಾಗಲೇ ಅಧಿಕೃತವಾಗಿ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದು, ಪ್ರಚಾರ ಕಾರ್ಯವನ್ನು ಕೂಡ ಚುರುಗೊಳಿಸಿದ್ದಾರೆ. ಆದರೆ, ಚೌಟ ಅವರು ಬೃಹತ್ ಮೆರವಣಿಗೆಯೊಂದಿಗೆ ತೆರಳಿ ಏ.4ರಂದು ನಾಮಪತ್ರವನ್ನು ಸಲ್ಲಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಮಪತ್ರವನ್ನು ಸಲ್ಲಿಸುವ ದಿನದಂದು ಸುಮಾರು 25 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಆ ಮೂಲಕ ಚುನಾವಣಾ ಕಣದಲ್ಲಿಯೂ ಬಿಜೆಪಿ ತನ್ನ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದೆ.
ಏ.3ಕ್ಕೆ ಪದ್ಮರಾಜ್ ನಾಮಪತ್ರ:
ಕಾಂಗ್ರೆಸ್ ಕೂಡ ಕ್ಷೇತ್ರದ ಹಲವೆಡೆ ತಮ್ಮ ಪ್ರಚಾರವನ್ನು ಬಿರುಸುಗೊಳಿಸಿದ್ದು, ಹೊಸಮುಖವಾಗಿ ಪದ್ಮರಾಜ್ ಅವರು ಕಣದಲ್ಲಿದ್ದಾರೆ. ಇನ್ನು ಪದ್ಮರಾಜ್ ಅವರು ಏ.3ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿ ಬಿ. ರಮಾನಾಥ ರೈ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಮಪತ್ರ ಸಲ್ಲಿಕೆಗೂ ಮೊದಲು ಚರ್ಚ್, ಮಸೀದಿ, ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಆ ದಿನ ಬೆಳಗ್ಗೆ 9.30ಕ್ಕೆ ಕುದ್ರೋಳಿ ದೇವಸ್ಥಾನದಿಂದ ಹೊರಡುವ ಮೆರವಣಿಗೆ ಅಳಕೆ, ನ್ಯೂಚಿತ್ರ ಟಾಕೀಸ್, ಉಷಾ ಕಿರಣ್ ಹೋಟೆಲ್, ಜಿಎಚ್ಎಸ್ ರಸ್ತೆ, ಟೌನ್ಹಾಲ್ ಮೂಲಕ ಆಗಮಿಸಿ ಎಬಿ ಶೆಟ್ಟಿ ಸರ್ಕಲ್ ಬಳಿ ಸಮಾವೇಶಗೊಳ್ಳಲಿದೆ ಎಂದು ಹೇಳಿದ್ದಾರೆ.
ಬಿಲ್ಲವ ಸಮುದಾಯದ ಅಭ್ಯರ್ಥಿಗೆ ಬೆಂಬಲ ಎಂದ ಸತ್ಯಜಿತ್ ಸುರತ್ಕಲ್
ಲೋಕ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವುದಕ್ಕೆ ಬಿಲ್ಲವ ಸಮುದಾಯದ ನಾಯಕ ಹಾಗೂ ಬಿಜೆಪಿ ಮುಖಂಡ ಸತ್ಯಜಿತ್ ಪ್ರಬಲ ಆಕಾಂಕ್ಷಿಯಾಗಿದ್ದರು. ಟಿಕೆಟ್ ಗಿಟ್ಟಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಕೂಡ ನಡೆಸಿದ್ದರು. ಆದರೆ ಕಟ್ಟಾ ಬಿಜೆಪಿಯಾಗಿ ಹಿಂದುತ್ವ ಬ್ರಾಂಡ್ನಲ್ಲಿ ಗುರುತಿಸಿಕೊಂಡಿರುವ ಸತ್ಯಜಿತ್ ಸುರತ್ಕಲ್ ಅವರು ಅಧಿಕೃತ ಹೇಳಿಕೆ ನೀಡಿದ್ದು, ಕರಾವಳಿ ಭಾಗದಲ್ಲಿ ನಾರಾಯಣ ಗುರು ವಿಚಾರವನ್ನು ಪ್ರತಿಪಾದಿಸುವ ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಆ ಮೂಲಕ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಗೆ ತಮ್ಮ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಾರಾಯಣ ವಿಚಾರ ವೇದಿಕೆ ರಾಜ್ಯಾಧ್ಯಕ್ಷರೂ ಆಗಿರುವ ಅವರು, ನಮ್ಮ ವೇದಿಕೆಯು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಸಮುದಾಯವು ಪಕ್ಷದ ಬದಲು ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಶ್ರಮಿಸುವವರನ್ನು ಗೆಲ್ಲಿಸಬೇಕೆಂದು ಸೋಮವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಹೈ ಸ್ಪೀಡ್!
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಇಲ್ಲಿಯೂ ಬಿಲ್ಲವ ವರ್ಸಸ್ ಬಂಟ ಸಮುದಾಯದ ನಡುವೆ ಮತ ವಿಭಜನೆಯಾಗುವ ಎಲ್ಲ ಸಾಧ್ಯತೆ ಕಾಣಿಸುತ್ತಿದೆ. ಅತ್ತ ಸತ್ಯಜಿತ್ ಸುರತ್ಕಲ್ ಅವರು ಕೂಡ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಏ.3ಕ್ಕೆ ಕೋಟಾ ನಾಮಪತ್ರ
ಕೋಟ ಶ್ರೀನಿವಾಸ ಪೂಜಾರಿ ಅವರು ಏ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆ ದಿನ ಉಡುಪಿ ಜಿಲ್ಲಾ ಕಚೇರಿ ಬಳಿ ಸಮಾವೇಶ ನಡೆಯಲಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಮತದಾರರು ಭಾಗವಹಿಸಲಿದ್ದಾರೆ. ಆ ಬಳಿಕ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಏ.3ಕ್ಕೆ ಜಯಪ್ರಕಾಶ್ ಹೆಗ್ಡೆ ನಾಮಪತ್ರ
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಕೂಡ ತಮ್ಮ ಪ್ರಚಾರವನ್ನು ಚುರುಕುಗೊಳಿಸಿದ್ದು, ಏ.3ರಂದು ಬೆಳಗ್ಗೆ 10ರಿಂದ 12 ಗಂಟೆ ಮಧ್ಯೆ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಉಡುಪಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲೆಯ ಪ್ರಮುಖ ಕಾರ್ಯಕರ್ತರ ಹಾಗೂ ಪ್ರಮುಖರ ಸಭೆ ನಡೆಯಲಿದೆ. ಬಳಿಕ ಪಕ್ಷದ ಪ್ರಮುಖರೊಂದಿಗೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳುವ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆ.ಪಿ. ಹೆಗ್ಡೆಯವರ ಕಚೇರಿ ಪ್ರಕಟಣೆ ತಿಳಿಸಿದೆ.