ಬೆಂಗಳೂರು : ಬಾರ್ನಲ್ಲಿ ಕುಡುಕರ ಗಲಾಟೆ ಓರ್ವನಿಗೆ ಚಾಕು ಇರಿತ
– ಬಾಗಲಕೋಟೆ : ಗಲಾಟೆ ಬಿಡಿಸಲು ಹೋದ ಮಹಿಳೆಯ ಎದೆಗೆ ಗುದ್ದಿ ಕೊಂದರು
– ಬಾಗಲಕೋಟೆ: ಆಸ್ತಿ ವಿಚಾರಕ್ಕೆ ಕೊಡಲಿಯಿಂದ ಕೊಚ್ಚಿ ಅಣ್ಣನನ್ನೇ ಕೊಲೆಗೈದ ತಮ್ಮ!
– ತುಮಕೂರು : ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ!
– ಹಾಸನ : ಪೊದೆಯಲ್ಲಿತ್ತು ನಿವೃತ್ತ ಬ್ಯಾಂಕ್ ನೌಕರನ ಕೊಳೆತ ಶವ
– ದೇವನಹಳ್ಳಿ: ರೈಲ್ವೆ ನಿಲ್ದಾಣದಲ್ಲಿ ನೇತಾಡುತ್ತಿತ್ತು ಅಪರಿಚಿತನ ಶವ
– ತುಮಕೂರು : ಕಂಟೇನರ್ ವಾಹನದಲ್ಲಿ ಅಕ್ರಮ ಗೋ ಸಾಗಣೆ
NAMMUR EXPRESS NEWS
ಬೆಂಗಳೂರು: ಕುಡಿದ ಅಮಲಿನಲ್ಲಿ ಯುವಕರು ಗಲಾಟೆ ಮಾಡಿಕೊಂಡಿದ್ದು, ಘಟನೆಯಲ್ಲಿ ಓರ್ವ ಚಾಕು ಇರಿತಕ್ಕೆ ಒಳಗಾಗಿದ್ದಾನೆ. ಬೆಂಗಳೂರಿನ ಬಾಣಸವಾಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಘಟನೆ ನಡೆದಿದೆ. ಇಮ್ರಾನ್ ಎಂಬಾತ ಚಾಕು ಇರಿತಕ್ಕೊಳಗಾದವನು. ಪ್ರಶಾಂತ್ ಮತ್ತು ವಿಜೀರ್ ಎಂಬುವರಿಂದ ಕೃತ್ಯ ನಡೆದಿದೆ. ಸೋಮವಾರ ರಾತ್ರಿ ಬಾರ್ಗೆ ಬಂದಿದ್ದ ಈ ಮೂವರು ಅಕ್ಕಪಕ್ಕದ ಟೇಬಲ್ನಲ್ಲಿ ಕುಳಿತು ಕುಡಿಯುತ್ತಿದ್ದರು. ಅಮಲು ಏರುತ್ತಿದ್ದಂತೆ ಕ್ಷುಲ್ಲಕ ವಿಚಾರಕ್ಕೆ ಇಮ್ರಾನ್ ಹಾಗೂ ಪ್ರಶಾಂತ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ಇಮ್ರಾನ್ಗೆ ಚಾಕುವಿನಿಂದ ಇರಿದು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಇಮ್ರಾನ್ನನ್ನು ಬಾರ್ನಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವು ಸಾವಿನಲ್ಲಿ ಅಂತ್ಯವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಪೂರದಲ್ಲಿ ಘಟನೆ ನಡೆದಿದೆ. ತಾಯವ್ವ ಸಾಲಮಂಟಪಿ (60) ಮೃತ ದುರ್ದೈವಿ. ಸಾರಾಯಿ ಮಾರಾಟ ಮಾಡುತ್ತಾರೆ ಎಂಬ ವಿಚಾರವನ್ನು ಕೇಳಲು ತಾಯವ್ವ ಸಹೋದರ ವಿಠ್ಠಲ ಸಾಲಮಂಟಪಿ ಹೋಗಿದ್ದರು. ಸೋಮವಾರ ರಾತ್ರಿ1 ಗಂಟೆಗೆ ಆರೋಪಿಗಳ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಠ್ಠಲ ಹಾಗೂ ಮಾದರ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ. ವಿಠ್ಠಲ ಸಹೋದರಿ ತಾಯವ್ವ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ತಾಯವ್ವಳಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ, ಆಕೆಯ ಎದೆ ಭಾಗಕ್ಕೆ ಜೋರಾಗಿ ಗುದ್ದಿ ತಳ್ಳಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ತಾಯವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಹಿಂದೆಯೂ ಸಾರಾಯಿ ಮಾರಾಟ ಮಾಡುವ ವಿಚಾರಕ್ಕೆ ವಿಠ್ಠಲ ಸಾಲಮಂಟಪಿ ಹಾಗೂ ಮಾದರ ಕುಟುಂಬಸ್ಥರ ನಡುವೆ ಜಗಳ ಆಗಿತ್ತು. ನಿನ್ನೆಯೂ ಇದೇ ವಿಚಾರವನ್ನು ಕೇಳಲು ಹೋದಾಗ ಗಲಾಟೆ ಶುರುವಾಗಿ, ವೃದ್ಧೆಯ ಸಾವಿನಲ್ಲಿ ಅಂತ್ಯವಾಗಿದೆ.
ಬಾಗಲಕೋಟೆ: ತೋಟಕ್ಕೆ ಮೇವು ತರಲು ಹೊಗಿದ್ದ ವೇಳೆ ಕೊಡಲಿಯಿಂದ ಕೊಚ್ಚಿ ಅಣ್ಣನನ್ನೇ ತಮ್ಮ ಕೊಲೆಗೈದಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಬೇರ ಗ್ರಾಮದಲ್ಲಿ ನಡೆದಿದೆ. ಬೈಕ್ನಲ್ಲಿ ಹೊಗುತ್ತಿದ್ದಾಗ ಕುತ್ತಿಗೆಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಉತ್ತಮ ಯಾದವ್ (55) ಕೊಲೆಯಾದ ವ್ಯಕ್ತಿ. ಆನಂದ ಯಾದವ್ ಕೊಲೆ ಆರೋಪಿ. ಜಮೀನು ವಿಚಾರಕ್ಕೆ ಸಹೋದರನನ್ನೇ ವ್ಯಕ್ತಿ ಮಾಡಿದ್ದಾನೆ. ತೋಟದಲ್ಲಿ ಮೇವು ತರಲು ಹೋಗಿದ್ದಾಗ ಅಣ್ಣನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ತಮ್ಮ ಕೊಂದಿದ್ದಾನೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಸುಟ್ಟ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹವು ಪತ್ತೆಯಾಗಿದೆ. ತುಮಕೂರಿನ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿಯ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿ ಘಟನೆ ನಡೆದಿದೆ. ಸುಮಾರು 25 ವರ್ಷದ ಯುವತಿಯನ್ನು ಕೊಲೆ ಮಾಡಿ ಬಳಿಕ ಗುರುತು ಸಿಗಬಾರೆಂದು ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ಅರ್ಧಂಬರ್ಧ ಸುಟ್ಟಿರುವ ಯುವತಿ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಯುವತಿ ಮುಖವು ಸಂಪೂರ್ಣ ಸುಟ್ಟು ಹೋಗಿದ್ದು, ಗುರುತು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸದ್ಯ ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಹಾಸನ: ನಾಪತ್ತೆಯಾಗಿದ್ದ ನಿವೃತ್ತ ಬ್ಯಾಂಕ್ ನೌಕರ ಶವವಾಗಿ ಪತ್ತೆಯಾಗಿದ್ದಾರೆ. ಮಂಜುನಾಥ್ (70) ಅನುಮಾನಾಸ್ಪದವಾಗಿ ಮೃತಪಟ್ಟವರು. ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ಘಟನೆ ನಡೆದಿದೆ. ಅರಸೀಕೆರೆ ನಗರದ ಲಕ್ಷ್ಮಿಪುರ ಬಡಾವಣೆಯ ನಿವಾಸಿಯಾದ ಮಂಜುನಾಥ್, ಕಳೆದ ಮಾ.27 ರಂದು ಸಂಜೆ ಸಮಯ ವಾಕಿಂಗ್ಗೆ ಎಂದು ಮನೆಯಿಂದ ತೆರಳಿದ್ದರು. ರಾತ್ರಿ ಕಳೆದರು ಮಂಜುನಾಥ್ ಮನೆಗೆ ವಾಪಸ್ ಬಾರದೇ ಇದ್ದಾಗ, ಮನೆ ಮಂದಿ ಎಲ್ಲ ಕಡೆ ಹುಡುಕಾಡಿದ್ದಾರೆ. ನಂತರ ಯಾವುದೇ ಸುಳಿವು ಸಿಗದೇ ಇದ್ದಾಗ ಮಂಜುನಾಥ್ ಪತ್ನಿ ಸರೋಜಾ ನಿಂಬಣ್ಣನವರ್ ಮರುದಿನ ಮಾ.28 ರಂದು ಅರಸೀಕೆರೆ ನಗರ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು.
ಇದೀಗ ಏ.2ರಂದು ಕಂತೇನಹಳ್ಳಿ ಕೆರೆ ಪಕ್ಕದ ಪಾರ್ಕ್ನಲ್ಲಿ ಗಬ್ಬು ನಾರುವ ವಾಸನೆ ಬರುತ್ತಿತ್ತು. ಈ ವೇಳೆ ಪರಿಶೀಲನೆ ನಡೆಸಿದಾಗ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಜುನಾಥ್ ಅವರ ಮೃತದೇಹ ಪತ್ತೆಯಾಗಿದೆ. ಕೂಡಲೇ ವಾಯು ವಿಹಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಜುನಾಥ್ ಅವರ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ರೈಲ್ವೆ ನಿಲ್ದಾಣದ ಬಿಡ್ಜ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ನೇತಾಡುತ್ತಿತ್ತು. ದೇವನಹಳ್ಳಿ ಹೊರ ವಲಯದ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಸುಮಾರು 30 ವರ್ಷದ ವ್ಯಕ್ತಿ ಶವ ಪತ್ತೆಯಾಗಿದ್ದು, ಕೊಲೆಯೋ, ಆತ್ಮಹತ್ಯೆಯೋ ಎಂಬ ಅನುಮಾನ ಮೂಡಿದೆ. ಸ್ಥಳಕ್ಕೆ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಮೃತನ ಗುರುತು ಪತ್ತೆಗೆ ಮುಂದಾಗಿದ್ದಾರೆ.
ತುಮಕೂರು: ಪೊಲೀಸರು ಎಷ್ಟೇ ಹದ್ದಿನ ಕಣ್ಣಿಟ್ಟರು ಅಕ್ರಮ ಗೋವು ಸಾಗಾಣೆ ನಡೆಯುತ್ತಲೆ ಇದೆ. ಸದ್ಯ ಅಕ್ರಮ ಗೋವು ಸಾಗಾಟ ಮಾಡುತ್ತಿದ್ದವರನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಟೋಲ್ ಬಳಿ ದಾಳಿ ಮಾಡಿದಾಗ ವಾಹನದಲ್ಲಿ 20 ಗೋವುಗಳು ಇರುವುದು ಪತ್ತೆಯಾಗಿದೆ. ಚಿತ್ರದುರ್ಗದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಅಕ್ರಮವಾಗಿ ಗೋವುಗಳನ್ನು ಸಾಗಾಣೆ ಮಾಡಲಾಗುತ್ತಿತ್ತು. ಕಂಟೇನರ್ ವಾಹನದಲ್ಲಿದ್ದ 20 ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿತ್ತು. ಸದ್ಯ ಗೋ ಹತ್ಯೆ ನಿಷೇಧ ಕಾನೂನು ಕಾಯ್ದೆ 2020ರ ಅನ್ವಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.