ಈಶ್ವರಪ್ಪ ವಿರುದ್ಧ ರಾಘವೇಂದ್ರ ಗುಟುರು!
– ಪೊಳ್ಳು ಹಿಂದುತ್ವ ವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ
– ಎರಡೇ ವಾರದಲ್ಲಿ ಈಶ್ವರಪ್ಪನವರಲ್ಲಿ ಈ ಬದಲಾವಣೆ ಏಕಾಯಿತು?: ಬಿ.ವೈ. ರಾಘವೇಂದ್ರ ಟೀಕೆ
NAMMUR EXPRESS NEWS
ಬೈಂದೂರು: ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶಿಸುವವರು ನಾವಲ್ಲ, ಹಿಂದುತ್ವವಾದ ವಿಚಾರದಲ್ಲಿ ನಮ್ಮ ಮೈಯಲ್ಲಿ ಹರಿಯುತ್ತಿರುವ ಒಂದೊಂದು ಹನಿ ರಕ್ತವೂ ಕೂಡ ಹಿಂದುವೇ ಆಗಿದೆ. ಪೊಳ್ಳು ಹಿಂದುತ್ವವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ, ಆದರೆ ಕೇವಲ ಎರಡೇ ವಾರದಲ್ಲಿ ಈಶ್ವರಪ್ಪನವರಲ್ಲಿ ಈ ಬದಲಾವಣೆ ಏಕಾಯಿತು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಟೀಕಿಸಿದ್ದಾರೆ. ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಬೈಂದೂರು ತಾಲೂಕು ನಾಗೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ. ವೈ.ರಾಘವೇಂದ್ರ ಎಂಬುದನ್ನು ಪಕ್ಷವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಅವರ ಪಕ್ಕದಲ್ಲೇ ನನ್ನನ್ನು ನಿಲ್ಲಿಸಿಕೊಂಡು ಪ್ರಚಾರವನ್ನು ಮಾಡಿ, ರಾಘವೇಂದ್ರ ಅವರಿಗೆ ಹಾರೈಸಿ, ಆಶೀರ್ವಾದ ಮಾಡಿದ್ದಾರೆ. ಇಡೀ ಬಿಜೆಪಿ, ಪರಿವಾರ ನಮ್ಮ ಜತೆಗೆ ಇದೆ” ಎಂದರು.
ಯಡಿಯೂರಪ್ಪನವರ ಕುಟುಂಬ ಎಲ್ಲ ಸಮಾಜವನ್ನು ಸಮಾನವಾಗಿ ಕಂಡಿದೆ ಮತ್ತು ಕಾಣುತ್ತಿದೆ ಎಂದು ಕಳೆದ ಎರಡು ವಾರದ ಕೆಳಗೆ ಈಶ್ವರಪ್ಪನವರು ಶಿಕಾರಿಪುರಕ್ಕೆ ಬಂದಿದ್ದಾಗ ಹೇಳಿದ್ದರು. ಐದು ಲಕ್ಷಕ್ಕೂ ಆಧಿಕ ಅಂತರದಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಅವರೇ ಹೇಳಿದ್ದರು. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಅವರೇ ಹಾರೈಸಿದ್ದರು. ಕೇವರ ಎರಡೇ ವಾರದಲ್ಲಿ ಈಶ್ವರಪ್ಪನವರಲ್ಲಿ ಈ ಬದಲಾವಣೆ ಏಕಾಯಿತು? ಇದನ್ನೆಲ್ಲವನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಈಶ್ವರಪ್ಪ ವಿರುದ್ದ ಹರಿಹಾಯ್ದರು.