- ಮೈಸೂರಿನ ನಂಜನಗೂಡಿನಲ್ಲಿ ಪ್ರಕರಣ
- 25 ಮಂದಿ ರೈತರಿಗೆ ವಂಚನೆ ಆರೋಪ
ಮೈಸೂರು: ಪೌಷ್ಟಿಕಾಂಶವುಳ್ಳ ವಿಶೇಷ ತಳಿ ಕೋಳಿ ಕೊಡುವುದಾಗಿ ನಂಬಿಸಿ ರೈತರಿಗೆ ಸುಮಾರು 4 ಕೋಟಿ ವಂಚಿಸಿದ್ದ ಆಸಾಮಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೋಳಿ ಸಾಕಣೆ ಮೂಲಕ ಹೆಚ್ಚು ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿ ರೈತರಿಗೆ ಕೋಟ್ಯಂತರ ರೂ. ಹಣ ವಂಚಿಸಿ ಪರಾರಿಯಾಗಿದ್ದ ಕೇರಳ ಮೂಲದ ಪ್ರಮೋದ್(60) ಎಂಬಾತನನ್ನು ನಂಜನಗೂಡು ಪೆÇಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಓಮೇಗಾ ಬಿವಿ 380 ಕೋಳಿ ಪೂರೈಕೆ ಹೆಸರಿನಲ್ಲಿ 4 ಕೋಟಿ ರೂ. ಗೂ ಹೆಚ್ಚು ಹಣವನ್ನು ರೈತರಿಂದ ಪಡೆದು ವಂಚಿಸಿದ್ದ ಪ್ರಮೋದ್, ಕೇರಳದ ತಿರುವನಂತಪುರಂ ಸಮೀಪದ ಹಳ್ಳಿಯೊಂದರಲ್ಲಿ ವಾಸವಾಗಿದ್ದ. ನಂಜನಗೂಡು ತಾಲೂಕಿನ ದೇವಿರಮ್ಮನ ಹಳ್ಳಿಯಲ್ಲಿ’ಓಮೇಗಾ ಬಿವಿ 380′ ಪೌಷ್ಟಿಕಾಂಶವುಳ್ಳ ಕೋಳಿ ತಳಿ ಪೂರೈಕೆ ಕೇಂದ್ರವನ್ನು ಆರಂಭಿಸಿದ್ದ ಆರೋಪಿ, ಕಳೆದ ಜನವರಿಯಲ್ಲಿ ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಕಾಳಯ್ಯ ಹಾಗೂ ನಂಜನಗೂಡಿನ ಸಂಪತ್ ಎಂಬುವವರಿಗೆ ಕೋಳಿ ಫಾರಂ ನಡೆಸುವಂತೆ ಪುಸಲಾಯಿಸಿ 1.25 ಲಕ್ಷ ರೂ. ಪಡೆದುಕೊಂಡು ಕೋಳಿಗಳನ್ನು ಸರಬರಾಜು ಮಾಡಿದ್ದ.ಈ ವೇಳೆ ಇವುಗಳ ಮೊಟ್ಟೆಗಳಿಗೆ ಉತ್ತಮ ಬೇಡಿಕೆಯಿದ್ದು, 1 ಮೊಟ್ಟೆಗೆ 5 ರೂ.ನಂತೆ ತಾನೇ ಖರೀದಿಸುವುದಾಗಿ ನಂಬಿಸಿದ್ದ. ಈತ ಆರಂಭದಲ್ಲಿ 3 ತಿಂಗಳ ಕಾಲ ಮೊಟ್ಟೆಯನ್ನು ಖರೀದಿಸಿದ್ದನಾದರೂ ಬಳಿಕ ಕೋಳಿ ಸರಬರಾಜು ಕೇಂದ್ರವನ್ನು ಮುಚ್ಚಿ ತಲೆಮರೆಸಿಕೊಂಡಿದ್ದ. ನಂತರ ಈತ ಉಡುಪಿ, ಮಡಿಕೇರಿ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಕೋಳಿ ಮಾರಾಟದ ಹೆಸರಿನಲ್ಲಿ ರೈತರಿಗೆ ವಂಚಿಸಿರುವುದು ಬೆಳಕಿಗೆ ಬಂದಿದ್ದು, ಈತನ ಮೇಲೆ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಂದಾಜು 4 ಕೋಟಿ ರೂ. ವಂಚಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.