ಕರ್ನಾಟಕ ಟಾಪ್ 5 ನ್ಯೂಸ್..!
ಟ್ರೋಲ್ಸ್ ರಾಣಿ ಸೋನುಗೆ ಜಾಮೀನು!
– ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು
– ಬೆಳ್ತಂಗಡಿ: ಆನ್ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ
– ಹಿಟ್ ಅಂಡ್ ರನ್ಗೆ ಯುವಕನ ತಲೆ ಪೀಸ್: ಚಾಲಕ ಪರಾರಿ!
– ಕಾಲಭೈರವನಂತೆ ಎರಗಿದ ಕೋಲೆ ಬಸವ!: ಭಯಾನಕ ಆಕ್ಸಿಡೆಂಟ್
NAMMUR EXPRESS NEWS
ಬೆಂಗಳೂರು: ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಇನ್ಸಾಗ್ರಾಂ ಸ್ಟಾರ್ ಸೋನು ಶ್ರೀನಿವಾಸ್ಗೌಡಗೆ ಜಾಮೀನು ಮಂಜೂರಾದ ಬಗ್ಗೆ ವರದಿಯಾಗಿದೆ.
ರಾಯಚೂರಿನ ಕೂಲಿ ಕಾರ್ಮಿಕ ದಂಪತಿಯ ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣದಲ್ಲಿ ಶ್ರೀನಿವಾಸ್ಗೌಡ ಅವರನ್ನು ಮಾ.25ರಂದು ನ್ಯಾಯಾಲಯದ ಹಾಜರುಪಡಿಸಿದ್ದಾಗ ವಿಚಾರಣೆ ಮಾಡಿದ ನ್ಯಾಯಾಧೀಶರು 5 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಆದರೆ, ಐದು ದಿನಗಳಲ್ಲಿ ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಕಾಶವನ್ನು ಪೊಲೀಸರು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ಪರವಾಗಿ ವಾದ ಆಲಿಸಿದ ನ್ಯಾಯಾಲಯದಿಂದ ಸೋನು ಶ್ರೀನಿವಾಸ್ಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ ಸೋನು ಶ್ರೀನಿವಾಸ್ಗೌಡ ಅವರು ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಬೆಂಗಳೂರು ಗ್ರಾಮಾಂತರ ನ್ಯಾಯಾಲಯವು ಷರತ್ತುಗಳೊಂದಿಗೆ ಸೋನು ಶ್ರೀನಿವಾಸ್ಗೌಡ ಅವರಿಗೆ ಜಾಮೀನು ಮಂಜೂರು ಮಾಡಿದೆ. ಅವರ ಪರವಾಗಿ ವಕೀಲ ಪ್ರಕಾಶ್ ವಾದ ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈಜಲು ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು
ಶಿವಮೊಗ್ಗ : ಸ್ನೇಹಿತರೊಂದಿಗೆ ಈಜುಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶ್ರೀ ಕ್ಷೇತ್ರ ಕೂಡಲಿ ಗ್ರಾಮದ ತುಂಗಭದ್ರಾ ಸಂಗಮದಲ್ಲಿ ನಡೆದಿದೆ. ಶಿವಮೊಗ್ಗ ಅಣ್ಣಾನಗರದ ಸಮಿವುಲ್ಲಾ ಹಾಗೂ ತಸ್ಮಿಯಾ ಬಾನು ಇವರ ಪುತ್ರ ಮುಬಾರಕ್ (18) ಮೃತ ವಿದ್ಯಾರ್ಥಿ. ಈತ ಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಪ್ರತಿನಿತ್ಯ ಶಿವಮೊಗ್ಗದಿಂದ ಪಟ್ಟಣದ ಕಾಲೇಜಿಗೆ ವ್ಯಾಸಂಗಕ್ಕೆ ಬರುತ್ತಿದ್ದ ಈತ ಎಂದಿನಂತೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಕೂಡಲಿ ಸಂಗಮದಲ್ಲಿ ಸ್ನಾನ ಮಾಡಲು ಸ್ನೇಹಿತರೊಂದಿಗೆ ತೆರಳಿದಾಗ ಈ ಘಟನೆ ನಡೆದಿದೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನ್ಲೈನ್ ಮೂಲಕ ಸಾಲ ನಂಬಿಸಿ ವಂಚನೆ
ಬೆಳ್ತಂಗಡಿ : ತೆಂಕಕಾರಂದೂರು ಗ್ರಾಮದ ಮಹಿಳೆಯೊಬ್ಬರಿಗೆ ಫೇಸ್ಬುಕ್ ಆಪ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ ನಡೆಸಲಾಗಿದೆ. ನೆಬಿಸಾ (38) ಅವರು ವೇಣೂರು ಪೋಲಿಸ್ ಠಾಣೆಗೆ ನೀಡಿದ ದೂರಿನಂತೆ, ಮಾ. 21ರಂದು ಫೇಸ್ಬುಕ್ನಲ್ಲಿ ಮನಿ ವ್ಯೂ ಪರ್ಸನಲ್ ಲೋನ್ ಆಯಪ್ ಮೂಲಕ ಅಪರಿಚಿತರು ಪರಿಚಯಿಸಿಕೊಂಡಿದ್ದರು. ನೆಬಿಸಾ ಅವರು ಸಾಲದ ಬಗ್ಗೆ ಅಪರಿಚಿತರಿಂದ ಮಾಹಿತಿ ಪಡೆದು 5 ಲಕ್ಷ ರೂ. ಸಾಲ ಪಡೆಯಲು ದಾಖಲೆಗಳನ್ನು ಕಳುಹಿಸಿದ್ದರು. ಬಳಿಕ ಫೋನ್ ಮೂಲಕ ನೆಬಿಸಾ ಅವರನ್ನು ಸಂಪರ್ಕಿಸಿ ಮಾ. 28ರ ತನಕ ವಿವಿಧ ಹಂತದಲ್ಲಿ ಒಟ್ಟು 96,743 ರೂ. ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಸಾಲವನ್ನು ನೀಡದೇ, ವರ್ಗಾಯಿಸಿಕೊಂಡ ಹಣವನ್ನು ಹಿಂತಿರುಗಿಸದೆ ವಂಚಿಸಿರುವುದಾಗಿ ತಿಳಿಸಲಾಗಿದೆ.
ಹಿಟ್ ಅಂಡ್ ರನ್ಗೆ ಯುವಕನ ತಲೆ ಪೀಸ್ ಪೀಸ್!
ಆನೇಕಲ್: ಹಿಟ್ ಆಯಂಡ್ ರನ್ಗೆ ಬೈಕ್ ಸವಾರನೊಬ್ಬ ಬಲಿಯಾಗಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಮಿರ್ಜಾ ರಸ್ತೆಯ ಪೊಲೀಸ್ ಕ್ವಾಟ್ರಾಸ್ ಮುಂಭಾಗ ಸಂಭವಿಸಿದೆ. ವೆಂಕಟೇಶ್ವರ ಸರ್ಕಲ್ನಿಂದ ರಾಘವೇಂದ್ರ ಭವನ್ ಸರ್ಕಲ್ ಮಾರ್ಗವಾಗಿ ಹೋಗುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಶೇಕ್ ಶಹಬಾಶ್ ದೇಹವು ಛಿದ್ರ ಛಿದ್ರವಾಗಿದೆ. ಬೈಕ್ಗೆ ಅಪಘಾತ ನಡೆಸಿ ವಾಹನ ಸಮೇತವಾಗಿ ಚಾಲಕ ಎಸ್ಕೆಪ್ ಆಗಿದ್ದಾನೆ. ಬೈಕ್ ಸವಾರನ ತಲೆಯ ಮೇಲೆ ವಾಹನ ಹತ್ತಿದ್ದರಿಂದ, ತಲೆ ಭಾಗ ಸಂಪೂರ್ಣ ಛಿದ್ರ ಛಿದ್ರವಾಗಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಮಿರ್ಜಾ ರಸ್ತೆಯಲ್ಲಿ ಒಂದೇ ವಾರದಲ್ಲಿ ಎರಡು ಅಪಘಾತ ಸಂಭವಿಸಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದರು.
ಕಾಲಭೈರವನಂತೆ ಎರಗಿದ ಕೋಲೆ ಬಸವ!
ಬೆಂಗಳೂರು: ಬೆಂಗಳೂರಿನಲ್ಲಿ ಒಂದು ಭಯಾನಕ ಆಯಕ್ಸಿಡೆಂಟ್ ನಡೆದಿದೆ. ಇದಕ್ಕೆ ಕಾರಣವಾದದ್ದು ಬಸ್ಸು ಅಲ್ಲ, ಲಾರಿಯೂ ಅಲ್ಲ. ಅಪಘಾತದಲ್ಲಿ ಯಾರೂ ಸತ್ತಿಲ್ಲವಾದರೂ, ಪವಾಡಸದೃಶವಾಗಿ ಬೈಕ್ ಸವಾರನೊಬ್ಬ ಬದುಕುಳಿದಿದ್ದಾನೆ. ಅಪಘಾತಕ್ಕೆ ಕಾರಣವಾದದ್ದು ಒಂದು ಕೋಲೆಬಸವ. ರಸ್ತೆಯ ಬದಿಯಲ್ಲಿ ಮಾಲಕಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಕೋಲೆಬಸವ, ಇದ್ದಕ್ಕಿದ್ದಂತೆ, ಯಾವುದೇ ಪ್ರಚೋದನೆಯಿಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನಿಗೆ ಎಗರಿ ಗುದ್ದಿದೆ. ಬೈಕ್ ಪಲ್ಟಿ ಹೊಡೆದಿದ್ದು, ಸವಾರ ರಸ್ತೆಗೆ ಬಿದ್ದಿದ್ದಾರೆ. ಪಕ್ಕದಲ್ಲಿ ಕ್ಯಾಂಟರ್ ಹಾದುಹೋಗುತ್ತಿದ್ದು, ಇನ್ನೇನು ಸವಾರನ ಮೇಲೆ ಹರಿದುಹೋಗಲಿದೆ ಎಂಬ ಕ್ಷಣದಲ್ಲಿ ಕ್ಯಾಂಟರ್ ಚಾಲಕ ಥಟ್ಟನೆ ಬ್ರೇಕ್ ಹಾಕಿದ್ದಾನೆ. ಬೈಕ್ ಸವಾರ ಪವಾಡಸದೃಶವಾಗಿ ಬದುಕುಳಿದಿದ್ದಾನೆ. ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಘಟನೆ ನಡೆದಿದೆ. ಕಳೆದ ವಾರ ನಡೆದಿರುವ ಈ ಘಟನೆಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ವಿಡಿಯೋ ನೋಡಿದ ಅನೇಕ ಮಂದಿ, ಇದು ಪವಾಡವೇ ಸರಿ ಎಂದು ಕಮೆಂಟ್ ಮಾಡಿದ್ದಾರೆ.