ಬಿಸಿಲ ಧಗೆ ಹೆಚ್ಚಳ: ವಹಿವಾಟು ಕುಸಿತ!
– ವ್ಯಾಪಾರಕ್ಕೆ ತಟ್ಟಿದ ಬಿಸಿ: ಶೇ 50-70 ರಷ್ಟು ನಷ್ಟ
– ಯುಗಾದಿ ಹಬ್ಬದ ಸಂಭ್ರಮಕ್ಕೆ ಬಿಸಿಲು ಮಂಕು!
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ಧಗೆಯಿಂದ ಜನ ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಬಿಸಿಲು ಕಾರಣ ಗ್ರಾಹಕರು ಇಲ್ಲದೇ ಮಾರುಕಟ್ಟೆಗಳು ಖಾಲಿ ಖಾಲಿಯಾಗಿವೆ. ವ್ಯಾಪಾರ ತಗ್ಗಿದ್ದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿರುವ ಮಳಿಗೆಗಳ ಮಾಲೀಕರು ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಜನರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಇದರಿಂದಾಗಿ ವ್ಯಾಪಾರ- ವಹಿವಾಟು ಶೇ 50 ರಿಂದ ಶೇ 70ರಷ್ಟು ಕುಸಿದಿದ್ದು, ವ್ಯಾಪಾರಿಗಳು ಗ್ರಾಹಕರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ದೃಶ್ಯಗಳು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿವೆ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬಿಸಿಲಿನ ಧಗೆ ಇರುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮಾರುಕಟ್ಟೆಗಳಲ್ಲಿ ಗ್ರಾಹಕರ ಸಂಖ್ಯೆ ಕ್ಷೀಣಿಸಿದೆ. ಸಂಜೆ 6 ಗಂಟೆಯ ನಂತರ ಕೆಲವು ಗ್ರಾಹಕರು ಮಳಿಗೆಗಳಿಗೆ ಬರುತ್ತಿದ್ದಾರೆ. ಆದರೆ, ಅಂದುಕೊಂಡಷ್ಟು ವ್ಯಾಪಾರವಾಗುತ್ತಿಲ್ಲವೆಂದು ವ್ಯಾಪಾರಿಗಳು ನೋವು ತೋಡಿಕೊಂಡಿದ್ದಾರೆ.
ಬಟ್ಟೆ ಅಂಗಡಿ, ಆಭರಣ ಮಳಿಗೆ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಅಲಂಕಾರಿಕ ವಸ್ತುಗಳು ಹಾಗೂ ಇತರೆ ಮಳಿಗೆಗಳಿಗೆ ಗ್ರಾಹಕರು ಭೇಟಿ ನೀಡುವ ಪ್ರಮಾಣ ಶೇ 90ರಷ್ಟು ಕಡಿಮೆಯಾಗಿದೆ. ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಧಗೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಹಕರೇ ಕಾಣುತ್ತಿಲ್ಲ. ಗ್ರಾಹಕರು ಬರದಿರುವುದರಿಂದ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ.
ಹಬ್ಬದ ಸಂಭ್ರಮಕ್ಕೂ ಬಿಸಿಲಿನ ಮಂಕು!
ಯುಗಾದಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹೊಸ ಬಟ್ಟೆ ಹಾಗೂ ಇತರೆ ವಸ್ತುಗಳ ಖರೀದಿ ಜೋರಾಗುವ ಸಮಯವಿದು. ಆದರೆ, ಬಿಸಿಲಿನ ಧಗೆ ಹಬ್ಬದ ಖರೀದಿ ಮೇಲೂ ಪರಿಣಾಮ ಬೀರಿದೆ.
ವ್ಯಾಪಾರಕ್ಕೆ ಹೊಡೆತ ಕೊಟ್ಟ ಚುನಾವಣೆ..!
ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ₹ 50 ಸಾವಿರಕ್ಕಿಂತ ಹೆಚ್ಚು ಹಣವನ್ನು ದಾಖಲೆ ಇಲ್ಲದೇ ಕೊಂಡೊಯ್ಯದಂತೆ ಚುನಾವಣೆ ಆಯೋಗ ಮಿತಿ ಹೇರಿದೆ. ಇದರಿಂದಾಗಿಯೂ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ. ‘ಯುಗಾದಿ ಹಬ್ಬವಿರುವುದರಿಂದ ಮನೆ ಮಂದಿಯೆಲ್ಲ ಸಾಮೂಹಿಕವಾಗಿ ಬಟ್ಟೆ ಹಾಗೂ ಚಿನ್ನಾಭರಣ ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ಬಹುತೇಕರು ನಗದು ತರುತ್ತಾರೆ. ಚುನಾವಣೆ ಇರುವುದರಿಂದ, ಅಧಿಕಾರಿಗಳು ನಗದು ಜಪ್ತಿ ಮಾಡುವ ಆತಂಕದಲ್ಲಿದ್ದಾರೆ.
ಬೀದಿ ಬದಿ ವ್ಯಾಪಾರಕ್ಕೂ ಬಿಸಿ..!
ಬೀದಿಬದಿ ವ್ಯಾಪಾರಕ್ಕೂ ಧಗೆಯ ಬಿಸಿ ತಟ್ಟಿದೆ. ದಿನದ ದುಡಿಮೆ ನಂಬಿ ಬದುಕುತ್ತಿರುವ ಬೀದಿಬದಿ ವ್ಯಾಪಾರಿಗಳು ಬಿಸಿಲಿನಲ್ಲಿ ಎಂದಿನಂತೆ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಗ್ರಾಹಕರು ಬರುತ್ತಿಲ್ಲ. ಇದರಿಂದಾಗಿ ದುಡಿಮೆಯೂ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.
ತಂಪು ಪಾನೀಯಕ್ಕೆ ಬೇಡಿಕೆ.!
ಐಸ್ಕ್ರಿಮ್ ಜ್ಯೂಸ್ ಹಾಗೂ ತಂಪು ಪಾನೀಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿದೆ. ತಂಪು ಪಾನೀಯಗಳು ಎಳನೀರು ಕಲ್ಲಂಗಡಿ ಕರಬೂಜ ಹಾಗೂ ಇತರೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಿಸಿಲು ಹೆಚ್ಚಿರುವುದರಿಂದ ತಂಪು ಪದಾರ್ಥಗಳನ್ನು ಸೇವಿಸಲು ಜನರು ಇಷ್ಟಪಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಉತ್ತಮ ವ್ಯಾಪಾರ ಆಗುತ್ತಿದೆ. ಐಸ್ಕ್ರಿಮ್ ಹಾಗೂ ತಂಪು ಪಾನೀಯಗಳು ಹೆಚ್ಚು ಮಾರಾಟವಾಗುತ್ತಿವೆ.