ಬಿಜೆಪಿ ಭದ್ರಕೋಟೆಗೆ ಮೋದಿ ಮತ್ತೆ ಆಗಮನ!?
– ಏ.14ರಂದು ಮಂಗಳೂರಿನಲ್ಲಿ ಸಾರ್ವಜನಿಕರ ಸಭೆ
– ಜನರನ್ನು ಉದ್ದೇಶಿಸಿ ಭಾಷಣ, ಅಭ್ಯರ್ಥಿಗಳ ಪರ ಪ್ರಚಾರ
– ಕರಾವಳಿ ರಾಜಕಾರಣದಲ್ಲಿ ಹೊಸ ಹುಮ್ಮಸ್ಸು
NAMMUR EXPRESS NEWS
ಮಂಗಳೂರು: ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ 14 ಕ್ಷೇತ್ರಗಳಲ್ಲಿ ಪ್ರಚಾರದ ಕಾವು ಜೋರಾಗುತ್ತಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣಾ ಪ್ರಚಾರದ ಭರಾಟೆ ಕೂಡ ಜೋರಾಗುತ್ತಿದೆ. ರಾಷ್ಟ್ರ, ರಾಜ್ಯ ನಾಯಕರು, ಸ್ಟಾರ್ ಪ್ರಚಾರಕರು ಅಭ್ಯರ್ಥಿಗಳ ಪ್ರರ ಪ್ರಚಾರಕ್ಕೆಂದು ಕ್ಷೇತ್ರಗಳಿಗೆ ಬಂದು ಹೋಗುತ್ತಿದೆ. ಸದ್ಯ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿಯು ರಾಷ್ಟ್ರ ನಾಯಕರು ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರೇ ಬಿಜೆಪಿಯ ಭದ್ರಕೋಟೆ ಕರಾವಳಿಗೆ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಮೋದಿ ಅವರು ಏ.14ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ರೋಡ್ಶೋ ಕೂಡ ನಡೆಸಲಿದ್ದಾರೆ. ಅದಾದ ಬಳಿಕ ಅದೇದೀನ ಮಂಗಳೂರಿಗೆ ಆಗಮಿಸಲಿದ್ದು, ನಗರದಲ್ಲಿ ನಡೆಯಲಿರುವ ಸಾರ್ವಜನಿಕರ ಬಹಿರಂಗ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಎಲ್ಲಿ ನಡೆಯುತ್ತೆ ಎಂಬುದು ಸ್ಪಷ್ಟ ಆಗಿಲ್ಲ
ಪ್ರಧಾನಿ ಅವರು ಏ.14ರಂದು ಮಧ್ಯಾಹ್ನದ ನಂತರ ಮಂಗಳೂರಿಗೆ ಬರುವ ಕಾರ್ಯಕ್ರಮ ನಿಗದಿಯಾಗಿರುವುದು ನಿಜ. ಸದ್ಯದ ಮಾಹಿತಿ ಪ್ರಕಾರ ಆ ದಿನ ಮಧ್ಯಾಹ್ನದ ನಂತರ ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಆದರೆ, ಸಮಾವೇಶ ಎಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಇನ್ನಷ್ಟೇ ಸ್ಥಳ ನಿಗದಿಯಾಗಬೇಕಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಂಗಳೂರಿಗೆ ಬಂದಿದ್ದರು!
ಈ ಹಿಂದೆ ಪ್ರಧಾನಿ ಅವರು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ವೇಳೆ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದು ಹೋಗಿದ್ದಾರೆ. ಮಂಗಳೂರಿನಲ್ಲಿ ರೋಡ್ ಶೋ ಕೂಡ ನಡೆಸಿದ್ದಾರೆ. ಇತ್ತೀಚೆಗೆ ಅಂದರೆ 2022ರ ಸೆ.2ರಂದು ಮೋದಿ ಅವರು ಮಂಗಳೂರಿಗೆ ಆಗಮಿಸಿದ್ದು, ಬಂದರಿಗೆ ಸಂಬಂಧಿಸಿದ ಹಲವು ಅಭಿವೃದ್ಧಿ ಪರ ಕಾಮಗಾರಿಗಳಿಗೆ ಚಾಲನೆ ನೀಡುವುದಕ್ಕೆ ಆಗಮಿಸಿದ್ದರು. ಅದಕ್ಕೂ ಮೊದಲು ನೆಹರೂ ಮೈದಾನದಲ್ಲಿನಡೆದ ಪ್ರಚಾರ ಸಮಾವೇಶದಲ್ಲಿಯೂ ಪ್ರಧಾನಿ ಅವರು ಭಾಗವಹಿಸಿದ್ದರು. ಹೀಗಿರುವಾಗ, ಮೋದಿ ಅವರು ಮತ್ತೊಮ್ಮೆ ಕರಾವಳಿಗೆ ಆಗಮಿಸುತ್ತಿರುವುದು ಕರಾವಳಿಯ ಬಿಜೆಪಿ ಅಭ್ಯರ್ಥಿಗಳ ಉತ್ಸಾಹವನ್ನು ಹಿಮ್ಮಡಿಗೊಳಿಸಿದೆ.