ಉಡುಪಿಯಲ್ಲಿ ಮಹಿಳಾ ಕಂಡಕ್ಟರ್ ಮಾರಾಮಾರಿ!
– ಲೇಡಿ ಕಂಡಕ್ಟರ್ ನಿರ್ವಾಹಕನಿಗೆ ಅವಾಜ್, ಚಪ್ಪಲಿ ಪ್ರದರ್ಶನ
– ಬಸ್ಸನ್ನೇ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ವಿಶ್ರಾಂತಿ ಪಡೆದ ಘಟನೆ ಬೆನ್ನಲ್ಲೇ ಮತ್ತೊಂದು ಘಟನೆ
NAMMUR EXPRESS NEWS
ಉಡುಪಿ: ಬಸ್ ಟೈಮಿಂಗ್ ವಿಚಾರ ಕಂಡಕ್ಟರ್ ಗಳ ನಡುವೆ ಮಾರಾಮಾರಿ ನಡೆದ ಘಟನೆ ಉಡುಪಿಯ ಸಂತೆಕಟ್ಟೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಲೇಡಿ ಕಂಡಕ್ಟರ್ ಒಬ್ಬರು ಇನ್ನೊಂದು ಬಸ್ಸಿನ ಮೇಲೇರಿ ಅದರ ಕಂಡಕ್ಟರ್ ಗೆ ಅವಾಜ್ ಹಾಕಿ ಹಲ್ಲೆಗೈದ ಘಟನೆಯ ವಿಡಿಯೋ ವೈರಲ್ ಆಗಿದೆ. ಖಾಸಗಿ ಬಸ್ ಗಳ ಟೈಮಿಂಗ್ ವಿಚಾರದಲ್ಲಿ ಈ ಗಲಾಟೆ ನಡೆದಿದ್ದು, ತನಗಿಂತ ಮೊದಲೇ ಬಂದು ಬಸ್ ನಿಲ್ಲಿಸಿದ್ದಕ್ಕಾಗಿ, ಭಾರತಿ ಬಸ್ ಲೇಡಿ ಕಂಡಕ್ಟರ್ ರೇಖಾ ಅವರು ದುರ್ಗಾಪ್ರಸಾದ್ ಬಸ್ಸಿನ ಕಂಡಕ್ಟರ್ ರಾಘವೇಂದ್ರ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಕುಂದಾಪುರ – ಮಂಗಳೂರು ನಡುವೆ ಸಂಚರಿಸುವ ಎರಡು ಬಸ್ ಗಳ ಕಂಡಕ್ಟರ್ ಗಳ ನಡುವೆ ಜಗಳ ನಡೆದಿದೆ.
ದುರ್ಗಾಪ್ರಸಾದ್ ಬಸ್ ನೊಳಗೆ ಬಂದು ರೇಖಾ ಅವರು ಕಂಡಕ್ಟರ್ ರಾಘವೇಂದ್ರ ಅವರೊಡನೆ ಜಗಳವಾಡಿದ್ದಾರೆ. ಈ ವೇಳೆ ಇಬ್ಬರೂ ನಿರ್ವಾಹಕರೂ ಪ್ರಯಾಣಿಕರ ಎದುರೇ ಅವ್ಯಾಚ್ಯ ಶಬ್ದಗಳ ಬಳಕೆ ಮಾಡಿಕೊಂಡು ಕೈ ಕೈ ಮಿಲಾಯಿಸಿದ್ದಾರೆ. ಒಂದು ಹಂತದಲ್ಲಿ ರೇಖಾ ಚಪ್ಪಲಿಯನ್ನೂ ಕೈಗೆತ್ತಿಕೊಂಡಿದ್ದಾರೆ. ಮಹಿಳೆ ನಿರ್ವಾಹಕಿಯ ಗಲಾಟೆ ಕಂಡು ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ಸದ್ಯ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗುತ್ತಿವೆ. ಇನ್ನು ಈ ಘಟನೆ ಬಗ್ಗೆ ನಿರ್ವಾಹಕ ದುರ್ಗಾಪ್ರಸಾದ್ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಥಮ ಮಹಿಳಾ ಕಂಡಕ್ಟರ್!
ರೇಖಾ ಅವರು ಉಡುಪಿಯ ಪ್ರಥಮ ಮಹಿಳಾ ಬಸ್ ಕಂಡಕ್ಟರ್ ಆಗಿ ಹೆಸರು ಮಾಡಿದ್ದರು. ಹಲವು ವರ್ಷಗಳಿಂದ ಉಡುಪಿ- ಕುಂದಾಪುರ ನಡುವೆ ಸಂಚರಿಸುವ ಭಾರತಿ ಮೋಟಾರ್ಸ್ ಬಸ್ ನಲ್ಲಿ ರೇಖಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರಾವಳಿಯಲ್ಲಿ ಬಸ್ ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕ- ನಿರ್ವಾಹಕರ ನಡುವೆ ಜಗಳ ಮಾಮೂಲು ಎಂಬಂತಾಗಿದ್ದು, ಇತ್ತೀಚೆಗೆ ಪಡುಬಿದ್ರೆಯಲ್ಲಿ ಎರಡು ಬಸ್ ಗಳ ನಡುವೆ ಟೈಮಿಂಗ್ ವಿಚಾರದಲ್ಲಿ ವಾಗ್ವಾದ ನಡೆದ ಬಳಿಕ ಬಸ್ಸನ್ನೇ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ವಿಶ್ರಾಂತಿ ಪಡೆದ ಪ್ರಹಸನ ನಡೆದಿತ್ತು.