30 ಸಾವಿರ ಬೆಂಬಲಿಗರೊಂದಿಗೆ ಈಶ್ವರಪ್ಪ ನಾಮಪತ್ರ!
– ನನ್ನ ಸ್ಪರ್ಧೆ ಬಗ್ಗೆ ಅನುಮಾನ ಅಂದವರಿಗೆ ಮೆರವಣಿಗೆಯೇ ಸಾಕ್ಷಿ
– ಶಿವಮೊಗ್ಗದಲ್ಲಿ ಸಂಚಲನ ಮೂಡಿಸಿದ ಕೆ.ಎಸ್.ಈಶ್ವರಪ್ಪ
– ಮೋದಿ ಫೋಟೋ ಬಳಸಿ ಮೆರವಣಿಗೆ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಭಾರೀ ಜನಸ್ತೋಮದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ಡಿ.ಸಿ ಗುರುದತ್ತ ಹೆಗಡೆ ಅವರಿಗೆ ಕೆ.ಎಸ್.ಈಶ್ವರಪ್ಪ ಅವರು ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. ಈ ವೇಳೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಕೆ.ಎಸ್.ಈಶ್ವರಪ್ಪ ಪತ್ನಿ ಸೇರಿದಂತೆ ಇತರರಿದ್ದರು. ಶಿವಮೊಗ್ಗದಲ್ಲಿ ಕೇಸರಿ ಬಾವುಟದೊಂದಿಗೆ ಸಾವಿರಾರು ಜನರು ಸೇರಿದ್ದರು. ಇದು ಇಡೀ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮೋದಿ ಫೋಟೋ ಜತೆ ಈಶ್ವರಪ್ಪ ಶಕ್ತಿ ಪ್ರದರ್ಶನ
ನಾಮಪತ್ರ ಸಲ್ಲಿಕೆಗೂ ಮುನ್ನ ಕೆ.ಎಸ್.ಈಶ್ವರಪ್ಪ ಅವರು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಆಗಮಿಸಿದರು. ವಾಹನಕ್ಕೆ ಮೋದಿ ಹಾಗೂ ಈಶ್ವರಪ್ಪ ಅವರ ಭಾವಚಿತ್ರವಿದ್ದ ಬೃಹತ್ ಪ್ಲೆಕ್ಸ್ ಹಾಕಲಾಗಿತ್ತು. ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರು ಭಾಗವಹಿಸಿದ್ದರು. ನಾಮಪತ್ರ ಸಲ್ಲಿಕೆಗೆ ಸಮಯ ವಿಳಂಬವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೆರವಣಿಗೆಯಿಂದ ಅರ್ಧಕ್ಕೆ ನಿರ್ಗಮಿಸಿದ ಈಶ್ವರಪ್ಪ ಅವರು ಕಾರಿನಲ್ಲಿ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಂತರ ಮೆರವಣಿಗೆಯಲ್ಲಿ ಭಾಗಿಯಾದರು. ಬೆಂಬಲಿಗರ ಮೂಲಕವೂ ಸಲ್ಲಿಕೆ : ಇದಕ್ಕೂ ಮುನ್ನ ಕೆ.ಎಸ್.ಈಶ್ವರಪ್ಪ ಅವರು ಬೆಂಬಲಿಗರ ಮೂಲಕವೂ ಒಂದು ಸೆಟ್ ಉಮೇದುವಾರಿಕೆ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಅವರ ಬೆಂಬಲಿಗ ಹಾಗೂ ಸೂಚಕರಾದ ವಿಶ್ವಾಸ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಾಗಿತ್ತು.
ನನಗಾದ ಅನ್ಯಾಯಕ್ಕೆ ತಕ್ಕ ಉತ್ತರ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 25-30 ಸಾವಿರ ಬೆಂಬಲಿಗರೊಂದಿಗೆ ಆಗಮಿಸಿ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ ಎಂದರು ಈಶ್ವರಪ್ಪ. ಇಂದು ಆಗಮಿಸಿದ ಬೆಂಬಲಿಗರು ನನಗೆ ಬಲ ನೀಡಿದ್ದು, ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ. ನನಗೆ ಆಗಿರುವ ಅನ್ಯಾಯದ ಕುರಿತಾಗಿ ನಮ್ಮ ಕಾರ್ಯಕರ್ತರು ಪ್ರತಿ ಮನೆಮನೆಗೂ ತೆರಳಿ ಮನವರಿಕೆ ಮಾಡಿಕೊಡಲಿದ್ದಾರೆ. ಈಶ್ವರಪ್ಪ ಯಾಕೆ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದಾರೆ? ಏನು ಅನ್ಯಾಯವಾಗಿದೆ? ಯಾಕೆ ಪಕ್ಷ ಒಂದೇ ಕುಟುಂಬದ ಕೈಯಲ್ಲಿದೆ ಎಂಬ ವಿಚಾರಗಳನ್ನು ಮನೆ ಮನೆಗೆ ತೆರಳಿ ನಮ್ಮ ಕಾರ್ಯಕರ್ತರು ತಿಳಿಸಲಿದ್ದಾರೆ. ನನಗೆ ಶೇ.100ರಷ್ಟು ಗೆಲ್ಲುವ ವಿಶ್ವಾಸವಿದೆ. ನನ್ನ ಸ್ಪರ್ಧೆ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೆ ಇಂದಿನ ನಮ್ಮ ಮೆರವಣಿಗೆಯೇ ಸಾಕ್ಷಿ ಎಂದುಹೇಳುವ ಮೂಲಕ ಸೂಕ್ಷ್ಮವಾಗಿ ಚಾಟಿ ಬೀಸಿದರು.